ಗುಲಾಮ ಪದ್ಧತಿಯ ವಿರುದ್ಧ ಸೆಣಸಿದ ಕಪ್ಪು ಮಹಿಳೆಯರ ಆತ್ಮಕಥೆಗಳ ಸಂಕಲನವೇ ‘ಕಪ್ಪು ಹಕ್ಕಿಯ ಬೆಳಕಿನ ಹಾಡು‘ ಪುಸ್ತಕ. ಇಲ್ಲಿನ ಆತ್ಮಕಥೆಗಳನ್ನು ಲೇಖಕಿ ಎಂ.ಆರ್. ಕಮಲ ಕನ್ನಡಕ್ಕೆ ಅನುವಾದಿಸಿದ್ದಾರೆ. ಗುಲಾಮಗಿರಿಯ ಇತಿಹಾಸ, ಅಂದಿನ ರಾಜಕೀಯ ಸನ್ನಿವೇಶ, ಗುಲಾಮರ ಆತ್ಮಕಥೆಗಳನ್ನು ಒಳಗೊಂಡಿರುವ ಪುಸ್ತಕವೊಂದು ಕನ್ನಡದಲ್ಲಿ ಪ್ರಕಟವಾಗುತ್ತಿರುವುದು ಇದೇ ಮೊದಲು. ಇಲ್ಲಿ ಅನುವಾದಿಸಲಾದ ಎಲ್ಲ ಆತ್ಮಕಥೆಗಳು ಹೆಣ್ಣುಮಕ್ಕಳದು ಅನ್ನುವುದು ಈ ಪುಸ್ತಕದ ಮಹತ್ವವನ್ನು ಇನ್ನಷ್ಟು ಹೆಚ್ಚಿಸಿದೆ. ಇಲ್ಲಿ ನಾಲ್ಕು ಆತ್ಮಕಥೆ ಮತ್ತು ಒಂದು ಆತ್ಮಚರಿತ್ರೆಯನ್ನು ಆಯ್ದು, ಸಂಗ್ರಹಿಸಿ ಅನುವಾದಿಸಲಾಗಿದೆ. ಹಾಗೆ ಕಥೆಗಳನ್ನು ಆರಿಸುವಾಗ ಐತಿಹಾಸಿಕ ಮಹತ್ವದೊಂದಿಗೆ ವೈವಿಧ್ಯವನ್ನು ಮಾನದಂಡವಾಗಿ ಬಳಸಲಾಗಿದೆ. ಈ ಎಲ್ಲ ಮಹಿಳೆಯರು ಬಿಡುಗಡೆಗಾಗಿ ಹೋರಾಡಿ, ಸ್ವಾತಂತ್ರ್ಯ ಪಡೆದು ತಾವು ಬದುಕಿರುವಾಗಲೇ ತಮ್ಮ ಸಾಧನೆ-ಸೇವೆಗಳ ಮೂಲಕ ಜನಾನುರಾಗಿಗಳಾದವರು. ಮೊದಲ ಆತ್ಮಕಥೆಯ ನಾಯಕಿ ಎಲಿಜಬೆತ್, ಲಿಂಕನ್ ಕುಟುಂಬಕ್ಕೆ ತುಂಬ ಹತ್ತಿರವಾಗಿದ್ದವಳು. ಲಿಂಕನ್ ರ ಪತ್ನಿ ಮೇರಿಯ ಆತ್ಮಸಖಿಯಾಗಿದ್ದವಳು. ಆದರೆ, ಈ ಎಲ್ಲವನ್ನೂ ಅವಳು ಪಡೆದದ್ದು ತನ್ನ ಪ್ರತಿಭೆಯ ಮೂಲಕ ಎನ್ನುವುದು ಗಮನಾರ್ಹ ವಿಷಯವಾಗಿದೆ. ಇನ್ನುಳಿದ ನಾಲ್ವರು ಕೂಡ ಬೇರೆ ಬೇರೆ ಕಾರಣಗಳಿಗೆ ಮುಖ್ಯರಾದವರೇ. ಹೀಗೆ ಕಪ್ಪು ಜನಾಂಗದ ನೋವುಗಳನ್ನು ಒಳಗೊಂಡ ಈ ಪುಸ್ತಕ ಗುಲಾಮ ಇತಿಹಾಸದ ಬಗ್ಗೆ ತಿಳಿಯದವರಿಗೆ ಮಹತ್ವದ ಮಾಹಿತಿಯನ್ನೂ ಒಳಗೊಂಡಿದೆ.
ಹೊಸತು -ಜನವರಿ-2005
ಆಫ್ರಿಕಾದ ಸು೦ದರಿಗೆ ವಿಶ್ವಸುಂದರಿಯ ಕಿರೀಟ ತೊಡಿಸಿದ್ದು ತೀರ ಇತ್ತೀಚಿನ ಮಾತು ! ಇಂಥ ಸೌಂದರ್ಯದ ಹಿಂದೆ ಈ ಜನಾಂಗ ಅನುಭವಿಸಿ ಎದುರಿಸಿದ ಗುಲಾಮಿ ಪದ್ಧತಿಯ ನರಕ ಸದೃಶ ಬಾಳಿನ ಕುರೂಪವೊ೦ದು ಚರಿತ್ರೆಯ ಪುಟಗಳಲ್ಲಿ ದಾಖಲಾಗಿದೆ. ತೀರ ಹಿಂದೆಯೇನೂ ಅಲ್ಲ; ೧೭-೧೮ನೇ ಶತಮಾನದಲ್ಲಿ ಐರೋಪ್ಯ ವರ್ತಕರು ಬಹಿರಂಗ ಹರಾಜಿನಲ್ಲಿ ಗುಲಾಮರನ್ನು ಖರೀದಿಸುತ್ತಿದ್ದರು. ಕತ್ತು ಕುಣಿಕೆ ಹಾಕಿ ಬಂಧಿಸಿ ಕಂಪೆನಿಯ ಮುದ್ರೆಯೊತ್ತಿ ಹೆಚ್ಚಿನ ಬೆಲೆಗೆ ಮಾರಾಟಮಾಡುತ್ತಿದ್ದರು. ಅಮೆರಿಕದಲ್ಲಿದು ಬೃಹತ್ ಸಾಮಾಜಿಕ ಸಮಸ್ಯೆಯಾಗಿ ಮಾರ್ಪಟ್ಟು ಕಾನೂನಿನ ಮೂಲಕ ರದ್ದುಪಡಿಸಲಾಯಿತು. ಇದೋ ಇಲ್ಲಿವೆ, ಗುಲಾಮಗಿರಿಯ ವಿರುದ್ಧ ಸೆಣೆಸಿ ವಿದಾಯ ಹೇಳಿದ, ಹಕ್ಕಿಗಳಂತೆ ಸ್ವಚ್ಛಂದವಾಗಿ ಹಾರಿಬಂದ ಆಫೋ - ಅಮೆರಿಕನ್ ಮಹಿಳೆಯರ ನೋವು ತುಂಬಿದ ಸಾಹಸಮಯ ಆತ್ಮ ಕಥಾನಕಗಳು...
©2024 Book Brahma Private Limited.