ಮಲಾಲ ಯೂಸೆಫ್ ಝಾಯಿ ಅವರು 2014ರಲ್ಲಿ ಜಾಗತಿಕ ಶಾಂತಿಗಾಇ ನೊಬೆಲ್ ಪ್ರಶಸ್ತಿ ಪುರಸ್ಕೃತ ಬಾಲಕಿ. ತಾಲಿಬಾನ್ ಉಗ್ರಗಾಮಿಗಳು ಇಡೀ ಸ್ವಾತ್ ಕಣಿವೆಯನ್ನೇ ತಮ್ಮ ವಶಕ್ಕೆ ತೆಗೆದುಕೊಂಡಾಗ, ಈ ಬಾಲಕಿ ಮಾತ್ರ ಅದರ ವಿರುದ್ಧ ದನಿ ಎತ್ತಿದಳು. ಆ ಉಗ್ರರು ಇವಳಿಗೆ ತೆಪ್ಪಗಿರುವಂತೆ ಬೆದರಿಕೆ ಹಾಕಿದರೂ ಅವಳು ಮಾತ್ರ ಜಗ್ಗಲಿಲ್ಲ. ಬದಲಿಗೆ ತನ್ನ ಶಿಕ್ಷಣದ ಹಕ್ಕಿಗಾಗಿ ಹೋರಾಡಿದಳು. ಆದರೆ, 2012ರ ಅಕ್ಟೋಬರ್ 9ನೇ ತಾರೀಖು ಈ ದಿಟ್ಟ ಬಾಲಕಿಯ ಪಾಲಿಗೆ ಕರಾಳ ದಿನವಾಯಿತು. ಅಂದು ಈಕೆ ಸ್ಕೂಲಿನಿಂದ ಮನೆ ಬರುತ್ತಿದ್ದಾಗ ತಾಲಿಬಾನ್ ಉಗ್ರರು ಈಕೆಯ ಮೇಲೆ ಗುಂಡಿನ ಮಳೆಗರೆದರು. ಅವತ್ತು ಎಲ್ಲರೂ ಮಲಾಲಾಳ ಕತೆ ಮುಗಿಯಿತು ಎಂದುಕೊಂಡರು. ಆದರೆ, ಪವಾಡವೆಂಬಂತೆ ಮಲಾಲಾ ಬದುಕುಳಿದಳು. ಪಾಕಿಸ್ತಾನದ ಒಂದು ತೀರಾ ಹಿಂದುಳಿದ ಪ್ರದೇಶದಿಂದ ಶುರುವಾದ ಈಕೆಯ ಬದುಕಿನ ಪಯಣವು ನಂತರ ಇವಳನ್ನು ವಿಶ್ವಸಂಸ್ಥೆಯಲ್ಲಿ ಭಾಷಣ ಮಾಡುವವರೆಗೂ ಕೊಂಡೊಯ್ಯಿತು. ಸಂಘಟಿತ ರಾಕ್ಷಸ ಪ್ರವೃತ್ತಿಯ ವಿರುದ್ಧ ಶಾಂತಿಯುತ ಪ್ರತಿಭಟನೆಗೆ ಮಲಾಲಾ ಈಗೊಂದು ಅನ್ವರ್ಥ ನಾಮ. ಇಷ್ಟೇ ಅಲ್ಲ, ಹದಿನೇಳನೇ ವರ್ಷಕ್ಕೇ ನೊಬೆಲ್ ಶಾಂತಿ ಪುರಸ್ಕಾರ ಕೂಡ ಈಕೆಯನ್ನು ಹುಡುಕಿಕೊಂಡು ಬಂದಿದೆ. ‘ನಾನು ಮಲಾಲಾ’ ಎಂಬುದು ಈಕೆಯ ಆತ್ಮಕಥೆ. ಭಯೋತ್ಪಾದನೆಯಿಂದ ಬೀದಿಗೆ ಬಿದ್ದ ಒಂದು ಕುಟುಂಬದ ಕತೆಯನ್ನು, ಹೆಣ್ಣು ಮಕ್ಕಳ ಶಿಕ್ಷಣಕ್ಕಾಗಿ ನಡೆಸಿದ ಹೋರಾಟವನ್ನು ಮತ್ತು ಗಂಡು ಮಕ್ಕಳಿಗೇ ಮಣೆ ಹಾಕುವ ಒಂದು ಸಮಾಜದಲ್ಲಿ ತಮ್ಮ ಮಗಳ ಬಗ್ಗೆ ಈಕೆಯ ತಂದೆ-ತಾಯಿ ತೋರಿಸಿದ ಕಟ್ಟಕ್ಕರೆಯ ಜೊತೆಗೆ ಇನ್ನೂ ಹಲವು ಕಥೆಗಳನ್ನು ತೆರೆದಿಟ್ಟಿದೆ. ಕ್ರಿಸ್ಟಿನಾ ಲ್ಯಾಂಬ್ ಅವರು ಮೂಲದಲ್ಲಿ ನಿರೂಪಿಸಿದ ಈ ಕೃತಿಯನ್ನು ಲೇಖಕ ಬಿ.ಎಸ್. ಜಯಪ್ರಕಾಶ ನಾರಾಯಣ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ.
©2024 Book Brahma Private Limited.