ಮಲಯಾಳಂ ಭಾಷೆಯಲ್ಲಿ ನಾನಾ ವಿವಾದಗಳಿಗೆ ಕಾರಣವಾದ ಜ್ಞಾನ್ ಲೈಂಗಿಕ ತೊಳಿಲಾಳಿ (ನಾನು ಲೈಂಗಿಕ ಕಾರ್ಮಿಕಳು) ಎಂಬ ಕೃತಿ ಅಪೂರ್ವವಾದದ್ದು. ಆ ಕೃತಿಯನ್ನು ಕೆ.ನಾರಾಯಣಸ್ವಾಮಿ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ.
ಕೃತಿಯ ಮೂಲ ಲೇಖಕಿ ನಳಿನಿ ಜಮೀಲಾ ಲೈಂಗಿಕ ಸೇವಕಿ-ಕಾರ್ಯಕರ್ತೆ ಅಷ್ಟೇ ಅಲ್ಲದೆ ಓರ್ವ ಮಗಳಾಗಿ, ತಾಯಿಯಾಗಿ, ಪತ್ನಿಯಾಗಿ, ತನ್ನ ಒಡನಾಡಿಗಳ ಹಿತಾಸಕ್ತಿಗಳನ್ನು ಕಾಪಾಡುವ ಹೋರಾಟಗಾರ್ತಿಯಾಗಿ, ಬಂಡಾಯಗಾರ್ತಿಯಾಗಿ, ಕಾಯಕವೇ ಕೈಲಾಸ ಎಂದು ತನ್ನ ವೃತ್ತಿಧರ್ಮವನ್ನು ಪ್ರಾಮಾಣಿಕತೆಯಿಂದ ಪಾಲಿಸಿದ್ದಾರೆ, ಆ ಎಲ್ಲವನ್ನು ತನ್ನ ಆತ್ಮಕಥೆ ನಾನ್ ಲೈಂಗಿಕ ತೊಳಿಲಾಳಿ ಎಂಬ ಕೃತಿಯಲ್ಲಿ ದಾಖಲಿಸಿದ್ದಾರೆ. ಈ ಪುಸ್ತಕ ಕೇರಳದಲ್ಲಿ ಅನೇಕ ವಿವಾದಗಳ ಸೃಷ್ಟಿಗೆ ಕಾರಣವಾಗಿದೆ. ಈ ಕೃತಿ ಈಗಾಗಲೇ ತಮಿಳು, ತೆಲುಗು, ಮರಾಠಿ, ಹಿಂದಿ, ಇಂಗ್ಲೀಷ್, ಮತ್ತು ಫ್ರೆಂಚ್ ಭಾಷೆಗಳಿಗೆ ಅನುವಾದಗೊಂಡಿದೆ. ಅತ್ಯಂತ ನಿರ್ಭಯವಾಗಿ, ನಿಸ್ಸಂಕೋಚವಾಗಿ, ನಿರ್ದಾಕ್ಷಿಣ್ಯವಾಗಿ, ನಿಷ್ಠುರವಾಗಿ ಬರೆದಿರುವ ಈ ಆತ್ಮಕಥೆ, ಕರುಣಾಜನಕವಾದ, ದಾರುಣವಾದ ವಾಸ್ತವೀಕತೆಯಿಂದ ತತ್ತರಿಸುವಂತೆ ಮಾಡಿ, ಕುತೂಹಲ ಕೆರಳಿಸುತ್ತಾ ಹೋಗುತ್ತದೆ. ಓದುಗರಿಗೆ ಒಂದು ಹೊಸ ಜಗತ್ತಿನಲ್ಲಿ ಪ್ರವೇಶಿಸಿದ ಅನುಭವವಾಗುತ್ತದೆ ಎನ್ನುತ್ತಾರೆ ಲೇಖಕ, ಅನುವಾದಕ ಕೆ.ನಾರಾಯಣಸ್ವಾಮಿ.
©2024 Book Brahma Private Limited.