ಲೇಖಕಿ ರೇಣುಕಾ ನಿಡಗುಂದಿ ಅವರ ಅನುವಾದಿತ ಕೃತಿ ’ಅಲೆಮಾರಿಯೊಬ್ಬಳ ಆತ್ಮವೃತ್ತಾಂತ’. ಕೃತಿಗೆ ಬೆನ್ನುಡಿ ಬರೆದ ಪುರುಷೋತ್ತಮ ಬಿಳಿಮಲೆ, ’ಪ್ರಸ್ತುತ ಪುಸ್ತಕ ಅಲೆಮಾರಿ ( ಮೂಲ: ಖಾನಾ ಬದೋಶ್ ) ಅಜಿತ್ ಕೌರ್ ಅವರ ಆತ್ಮಚರಿತ್ರೆಯಾಗಿದೆ. ಭಾರತ ವಿಭಜನೆಯೇ ಕಾರಣವಾಗಿ ಬಗೆ ಬಗೆಯ ಸಂಕಷ್ಟಗಳಿಗೆ ಒಳಗಾದ ಅವರು, ಮುಂದೆ ಮಗಳಾಗಿ, ತಾಯಿಯಾಗಿ, ತಂಗಿಯಾಗಿ , ಹೆಂಡತಿಯಾಗಿ, ಪ್ರೇಮಿಯಾಗಿ, ಪತ್ರಿಕೋದ್ಯಮಿಯಾಗಿ, ಲೇಖಕಿಯಾಗಿ, ಮತ್ತೆ ಇನ್ನೇನೋ ಆಗುತ್ತಾ ಹೋಗುವ ಹೊತ್ತು, ಗಟ್ಟಿಯಾಗುತ್ತಾ, ಮರುಕ್ಷಣ ಕರಗುತ್ತಾ ಬದುಕ ಸಾಗಿಸಿದರು. ಸಂವೇದನಾಶೀಲ ಹೆಣ್ಣೊಬ್ಬಳ ಬದುಕಿನ ಈ ಎಲ್ಲ ಆಯಾಮಗಳು ʼಅಲೆಮಾರಿʼಯಲ್ಲಿ ಅತ್ಯಂತ ಕಲಾತ್ಮಕವಾಗಿ ಘನೀಕೃತಗೊಂಡಿದೆ. ಕೌರ್ ಅವರ ಸಾಮಾಜಿಕ ಬದ್ಧತೆ ಮತ್ತು ಕ್ರಿಯಾಶೀಲತೆಯು ಈ ವಿವಿಧ ಮುಖಗಳ ಅಭಿವ್ಯಕ್ತಿಯನ್ನು ಇನ್ನಷ್ಟು ಸಾಂದ್ರಗೊಳಿಸಿ, ತೀವ್ರವಾಗಿ ಓದುಗನನ್ನು ಮುಟ್ಟುತ್ತದೆ. ಈಗಾಗಲೇ ಅಮೃತಾ ಪ್ರೀತಂ ಕವಿತೆಗಳನ್ನು ಸುಂದರವಾಗಿ ಕನ್ನಡಕ್ಕೆ ತಂದಿರುವ, ಖುಷವಂತ ಸಿಂಗರಂಥ ಪ್ರಸಿದ್ಧ ಲೇಖಕರನ್ನು ಓದಿಕೊಂಡ, ಅಮೃತಾ ಪ್ರೀತಮ್ ಸಂಗಾತಿ ಇಮ್ರೋಜರೊಂದಿಗೆ ಸಂಭಾಷಣೆ ನಡೆಸಿರುವ, ಕವಿ, ಲೇಖಕಿ ರೇಣುಕಾ ನಿಡಗುಂದಿಯವರು, ಅಜಿತ್ ಅವರ ಬರವಣಿಗೆಯ ಕಲಾವಂತಿಕೆಯನ್ನು ಅಷ್ಟೇ ಸುಂದರವಾಗಿ ಕನ್ನಡಕ್ಕೆ ತಂದಿದ್ದಾರೆ. ಅವರೀಗ ಕನ್ನಡ ಮತ್ತು ಪಂಜಾಬಿ ಭಾಷೆಗಳ ನಡುವಣ ಸೇತುವೆ.’ ಎಂದು ಪ್ರಶಂಸಿದ್ದಾರೆ.
©2024 Book Brahma Private Limited.