ಅಮೆರಿಕಾದ ಕಪ್ಪು ಗುಲಾಮ ಫೆಡರಿಕ್ ಡಾಗ್ಲಾಸ್ ನ ಆತ್ಮಕಥೆಯನ್ನು ಕಪ್ಪು ಕುಲುಮೆ ಎಂಬ ಹೆಸರಿನಲ್ಲಿ ವಿಕಾಸ್ ಮೌರ್ಯ ಕನ್ನಡೀಕರಿಸಿದ್ದಾರೆ.
ಐನೂರು ವರ್ಷಗಳ ಕೆಳಗೆ ಯೂರೋಪು ಆರಂಭಿಸಿದ ಆಫ್ರಿಕಾದ ಗುಲಾಮರ ಕ್ರೂರ ಸಾಗಾಣಿಕೆ ಹಾಗೂ ಶೋಷಣೆಯ ಘಟ್ಟಗಳ ಬಗ್ಗೆ ಚರಿತ್ರೆಯ ಪುಸ್ತಕಗಳು ಕೊಡುತ್ತಿದ್ದ ಸೀಮಿತ ಚಿತ್ರಗಳ ನಡುವೆ ಇದ್ದಕ್ಕಿದ್ದಂತೆ ಸ್ಫೋಟಗೊಂಡ ಗುಲಾಮ ಕಥನಗಳು ಚರಿತ್ರೆಯಲ್ಲಿ ಹುದುಗಿದ್ದ ಭೀಕರಸತ್ಯಗಳನ್ನು, ಕರಿಯರ ದಮನದ ಅಧಿಕೃತಚರಿತ್ರೆಯನ್ನು ಹೊರತರತೊಡಗಿದವು. ಆಫ್ರಿಕಾಖಂಡದಿಂದ ಮಾರಾಟಗೊಂಡು ದಿಕ್ಕಾಪಾಲಾದದ ಈ ಕಪ್ಪು ಶ್ರಮಜೀವಿಗಳು ಮೊದಮೊದಲಿಗೆ ಕ್ರಿಸ್ತನಿಗೆ ಸಲ್ಲಿಸಿದ ಮೊರೆಗಳಲ್ಲಿ, ತೋಟಗಳಲ್ಲಿ ದುಡಿಯುತ್ತಾ ಹಾಡಿಕೊಂಡ ಹಾಡುಗಳಲ್ಲಿ ಅವರ ಸ್ವಾತಂತ್ರ್ಯದ ಬಯಕೆ, ಪ್ರತಿಭಟನೆಗಳು ಮೂಡತೊಡಗಿದವು.
ಗುಲಾಮಗಿರಿಯ ನಡೆವೆಯೂ ಅಕಸ್ಮಾತ್ ಅಕ್ಷರ ಕಲಿತವರು ತಮ್ಮ ಕಷ್ಟಗಳ ಕುರಿತು ಬರೆಯಲೆತ್ನಿಸಿದರು. ಇಂಥ ಬರವಣಿಗೆಗಳ ಮೂಲಕವೂ ಶುರುವಾದ ಕರಿಯರ ಸ್ಥಿತಿಯ ಬದಲಾವಣೆಯೆಡೆಗಿನ ಹೆಜ್ಜೆಗಳು ಕರಿಯರ ಬಿಡುಗಡೆಯ ಕ್ರಾಂತಿಕಾರಕ ಹೋರಾಟಗಳತ್ತ ಅವರನ್ನು ಒಯ್ದವು. ಈ ಕಥನಗಳು ಜಗತ್ತಿನ ಇತರ ಭಾಗಗಳಲ್ಲಿ ಕೂಡ ತುಳಿತಕ್ಕೊಳಗಾದವರ ಹಾಗೂ ಅಸ್ಪೃಶ್ಯರ ಬರವಣಿಗೆಯ ಆತ್ಮಕತೆಗಳ ಹೊಸ ಮಾರ್ಗಗಳನ್ನೇ ತೆರೆದವು.
ಆ ಮೂಲಕ ಚರಿತ್ರೆಯ ಚಲನೆಯ ದಿಕ್ಕನ್ನು ಬದಲಿಸಿದವು. ಜಗತ್ತಿನ ಇನ್ನಿತರ ಉದಾರವಾದಿಗಳು ಕೂಡಾ ಕರಿಯರ ಪರ ದನಿಯೆತ್ತತೊಡಗಿದರು. ಬಹುಕಾಲ ಗುಲಾಮನಾಗಿ ನರಕಯಾತನೆ ಅನುಭವಿಸಿ ಕುದಿಯುತ್ತಿದ್ದ ಫ್ರೆಡರಿಕ್ ಡಾಗ್ಲಾಸ್ ಮುಂದೆ ಅಕ್ಷರ ಕಲಿತು ಲೇಖಕರಾದರು. ಉಜ್ವಲ ಭಾಷಣಕಾರರಾಗಿ, ಸುಧಾರಕರಾಗಿ, ಕರಿಯರ ಬಿಡುಗಡೆಯ ಮುಂಚೂಣಿ ಹೋರಾಟಗಾರರಾದರು. ಮಂತ್ರಿಯಾದರು ತಮ್ಮ ಜೀವನಾನುಭವ ಹಾಗೂ ತಾತ್ವಿಕ ನಿಲುವು- ಈ ಎರಡೂ ನೆಲೆಗಳಿಂದಲೂ ಈ ಕಥನದ ಯಾತನೆ, ಕೋಪ, ಪ್ರತಿಭಟನೆಗಳ, ಲೋಕವನ್ನು ಹಂಚಿಕೊಂಡಿರುವ ಕನ್ನಡದ ನವ ಚಿಂತಕ ವಿಕಾಸ್ ಮೌರ್ಯ ಈ ಬರಹಕ್ಕೆ ಆಳವಾಗಿ ಮಿಡಿದಿದ್ದಾರೆ. ಇಂಥ ಮಹತ್ವದ ಕಥನವನ್ನು ಅಷ್ಟೇ ಸೂಕ್ಷ್ಮವಾಗಿ ಕನ್ನಡಕ್ಕೆ ಅನುವಾದಿಸಿದ್ದಾರೆ.
©2024 Book Brahma Private Limited.