‘ಬಾಶಾನಿರ್ವಹಣೆ’ ಲೇಖಕ ಬಸವರಾಜ ಕೋಡಗುಂಟಿ ಅವರ ಭಾಷಾ ಅಧ್ಯಯನಾತ್ಮಕ ಕೃತಿ. ಕನ್ನಡದ ಮತ್ತು ಕರ್ನಾಟಕದ ಇನ್ನೂ ಹಲವಾರು ಬಾಶೆಗಳು, ಕರ್ನಾಟಕದ ವಿಶಿಶ್ಟ ಬಾಶೆಗಳು, ಕರ್ನಾಟಕದ ಅಳಿವಿನಂಚಿನ ಬಾಶೆಗಳ ಅದ್ಯಯನದ ಮಹತ್ವವನ್ನು ಮನದಟ್ಟು ಮಾಡುವ ಪ್ರಯತ್ನ ಈ ಪುಸ್ತಕ ಎಂದಿದ್ದಾರೆ ಭಾಷಾತಜ್ಞ ಬಸವರಾಜ ಕೋಡಗುಂಟಿ. ಇದರೊಟ್ಟಿಗೆ ತಾಯ್ಮಾತಿನ ಶಿಕ್ಶಣ ಮತ್ತು ಅದರ ಸಾದ್ಯತೆಯ ಬಗೆಗೆ ಇದು ಒಂದು ಚಿತ್ರಣ ಕೊಡಬಹುದು. ಮುಕ್ಯವಾದ ಒಂದು ವಿಚಾರವೆಂದರೆ ಬಾಶೆ ಆದಾರದ ಮೇಲೆ ಬಾರತೀಯರೆಲ್ಲರೂ ಸಮಾನ ಎಂಬ ಸಂವಿದಾನದ ವಿಚಾರವನ್ನು ಎಶ್ಟುಮಟ್ಟಿಗೆ ಅರ್ತ ಮಾಡಿಕೊಳ್ಳಲಾಗಿದೆ ಎಂಬುದನ್ನೂ ಆಲೋಚಿಸಬೇಕು. ಬಾಶೆ ಆದಾರದ ಮೇಲೆ ಸಮಾನ ಎಂದರೆ ಏನು ಎನ್ನುವುದನ್ನು ಅರ್ತ ಕೂಡ ಮಾಡಿಕೊಂಡ ಹಾಗಿಲ್ಲ, ಇಂದಿನ ಸಮಾಜ. ಈ ಪುಸ್ತಕದ ರಚನೆಯನ್ನು ಇಲ್ಲಿ ತುಸು ಪರಿಚಯಿಸಿಕೊಳ್ಳಬಹುದು.
ಮೊದಲ ಬಾಗದಲ್ಲಿ ಜನಗಣತಿ ಬಗೆಗೆ ಸ್ತೂಲವಾದ ಮಾಹಿತಿಯನ್ನು ಒದಗಿಸಿದೆ. ಈ ಪುಸ್ತಕದಲ್ಲಿ ಮಾಡಿದ ವಿಶ್ಲೇಶಣಾ ಕ್ರಮಗಳ ಸ್ತೂಲ ಪರಿಚಯವನ್ನು, ಹೊಸ ಶಿಕ್ಶಣ ನೀತಿಯ ಪ್ರದಾನ ಆಶಯವಾದ ತಾಯ್ಮಾತಿನಲ್ಲಿ ಶಿಕ್ಶಣ ಮತ್ತು ಇರ್ಮಾತಿನ, ಪಲಮಾತಿನ ತರಗತಿ ಇವುಗಳ ಸ್ತೂಲ ಪರಿಚಯವನ್ನು ಇಲ್ಲಿ ಮಾಡಿದೆ. ಎರಡನೆ ಬಾಗದಲ್ಲಿ ಕರ್ನಾಟಕದ ಒಟ್ಟು ಬಾಶಿಕ ಪರಿಸರವನ್ನು ಸಾಂಕಿಕ ಮಾಹಿತಿಯ ಆದಾರದ ಮೇಲೆ ತಿಳಿದುಕೊಳ್ಳುವ ಪ್ರಯತ್ನ ಮಾಡಿದೆ. ಕರ್ನಾಟಕದ ವಿವಿದ ಬಾಶೆಗಳು, ಅವುಗಳ ಪ್ರಾದೇಶಿಕ ಹಂಚಿಕೆ, ಅವುಗಳ ಮಾತುಗರು, ಅದರ ವಿವಿದ ವಿನ್ಯಾಸಗಳು ಮೊದಲಾದವನ್ನು ಇಲ್ಲಿ ಚರ್ಚಿಸಿದೆ. ಮೂರನೆಯ ಬಾಗದಾಗ ಕೆಲವು ಬಾಶೆಗಳ ವಿಶ್ಲೇಶಣೆಯನ್ನು ಮಾಡಿದೆ. ಉರ್ದು, ಕನ್ನಡ, ಲಂಬಾಣಿ, ಸಂಸ್ಕ್ರುತ ಮತ್ತು ಹಿಂದಿ ಈ ಅಯ್ದು ಬಾಶೆಗಳನ್ನು ಚರ್ಚೆಗೆ ತೆಗೆದುಕೊಂಡಿದೆ ಎಂದು ತಿಳಿಸಿದ್ದಾರೆ.
©2024 Book Brahma Private Limited.