ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ. ಕೆ. ಶಿವರಾಮ ಕಾರಂತ ಅವರ ಅದ್ಭುತ ಜಗತ್ತು ವಿಚಾರ ಸರಣಿಯಡಿ ಬರೆದ ಕೃತಿ-ವಿಶಾಲ ಸಾಗರಗಳು. ಪ್ರಾಣಿಪ್ರಪಂಚದ ವಿಸ್ಮಯಗಳು, ಮಂಗನ ಕಾಯಿಲೆ ಪಕ್ಷಿಗಳ ಅದ್ಭುತ ಲೋಕ ಹೀಗೆ ಹತ್ತು ಹಲವು ವೈಜ್ಞಾನಿಕ -ವಿಸ್ಮಯದ ಕೃತಿಗಳನ್ನು ಲೇಖಕರು ನೀಡಿದ್ದು, ಆ ಪೈಕಿ, ವಿಶಾಲ ಸಾಗರಗಳ ಕೃತಿಯೂ ಒಂದು.
ಜಗತ್ತಿನಲ್ಲಿರುವ ವಿಶಾಲ ಸಾಗರಗಳ ಹುಟ್ಟು, ವಿಸ್ತಾರ ಹೀಗೆ ಭೌಗೋಳಿಕ ಮಾಹಿತಿ ಮಾತ್ರವಲ್ಲ; ಅವುಗಳ ಆಳ, ಸ್ವರೂಪ, ಅದನ್ನು ಕಂಡುಕೊಳ್ಳಲು ವಿಜ್ಞಾನಿಗಳು ನಡೆಸಿದ ಅಧ್ಯಯನಗಳು, ಕಡಲು, ಪರ್ವತ ಶ್ರೇಣಿಗಳು, ನದಿ ಹಾಗೂ ಅವುಗಳ ಹರಿವಿನ ಸ್ವರೂಪ, ಸಾಗರದ ತಳದಿಂದ ಹೊರಡುವ ವೈವಿಧ್ಯಮಯವಾದ ಶಬ್ದತರಂಗಗಳು, ಪ್ರವಾಹಗಳು, ಅಶಾಂತ ಸಾಗರಗಳು, ಸಾಗರದ ಮೇಲ್ಮೈ, ಸಾಗರ ಜೀವಿಗಳು, ಅಲೆಗಳ ಪ್ರಕಾರ, ಅವುಗಳ ವೇಗ, ಎತ್ತರ ಕಡಲುಬ್ಬುಗಳ ಹಾವಳಿ, ಕಡಲ ತೀರ, ಸಾಗರಗಳ ಜೀವ ಹಾಗೂ ವಸ್ತು ಸಂಪತ್ತು ಇವೆಲ್ಲವುಗಳ ಕುರಿತು ಅಚ್ಚರಿ ಪಡುವಷ್ಟು ಮಾಹಿತಿಯನ್ನು ಒಳಗೊಂಡಿದೆ. ಅಗತ್ಯವಿದ್ದೆಡೆ ಸ್ವತಃ ಲೇಖಕರೇ ಚಿತ್ರಗಳನ್ನು ಬಿಡಿಸಿದ್ದು, ಎಷ್ಟೊಂದು ಪರಿಶ್ರಮದೊಂದಿಗೆ ಈ ಕೃತಿಯನ್ನು ರಚಿಸಿದ್ದರ ಅರಿವು ಮೂಡಿಸುತ್ತದೆ. ಜ್ಞಾನಾರ್ಜನೆಗೆ, ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಹಾಗೂ ಸಂದರ್ಶನಗಳನ್ನು ಎದುರಿಸಲು ಅತ್ಯುತ್ತಮ ಮಾಹಿತಿಯ ಹಾಗೂ ಆಕರ ಕೃತಿಯಾಗಿ ಓದುಗರ ಗಮನ ಸೆಳೆದಿದೆ.
ಬೆಂಗಳೂರಿನ ಐಬಿಎಚ್. ಪ್ರಕಾಶನವು 1984ರಲ್ಲಿ (ಪುಟ: 132) ಈ ಕೃತಿಯನ್ನು ಮೊದಲ ಬಾರಿಗೆ ಪ್ರಕಟಿಸಿತ್ತು.
©2024 Book Brahma Private Limited.