ವಿಜ್ಞಾನವನ್ನು ತಮಾಷೆಯಾಗಿಯೂ ಹೇಳಬಹುದೆ? ಆ ಮೂಲಕ ಹೆಚ್ಚು ಓದುಗರನ್ನು ಸೆಳೆಯಬಹುದೆ? ಎಂಬುದಕ್ಕೆ ಉತ್ತರ ರೂಪವಾಗಿ ಹೊರಬಂದಿರುವ ಪುಸ್ತಕ `ಚೌಚೌ ಚೌಕಿ’. ಇದೊಂದು ಹೊಸಬಗೆಯ ಪುಸ್ತಕ. ನಿಮಗೆ ಹೊಸ ಹೊಸ ವಿಚಾರಗಳು ಬೇಕೆ? ಗಂಭೀರ ವಿಶ್ಲೇಷಣೆ ಬೇಕೆ? ಸರಳವಾದ ಆಕರ್ಷಕ ನಿರೂಪಣೆ ಬೇಕೆ? ವಿಜ್ಞಾನದಲ್ಲಿ ವಿನೋದವನ್ನು ಸವಿಯಬೇಕೆ? ನಿತ್ಯ ಪರಿಚಿತವೆನ್ನಿಸಿದರೂ ಅದರ ಮೂಲ ಏನೆಂದು ಅರ್ಥವಾಗದ ವಸ್ತು, ಶಬ್ದ, ಪಡೆನುಡಿಗಳ ಸಮರ್ಪಕ ವಿವರಣೆ ಬೇಕೆ? ಚೌಚೌ ಚೌಕಿ ಪುಸ್ತಕದಲ್ಲಿ ಎಲ್ಲವೂ ಇದೆ.
ಬಾವಲಿಗಳು ತಲೆಕೆಳಕಾಗಿ ಏಕೆ ನೇತಾಡುತ್ತವೆ ಎಂಬುದಕ್ಕೆ ವೈಜ್ಞಾನಿಕವಾದ ಉತ್ತರವಿದೆ. ಆದರೆ ಅದನ್ನು ತಮಾಷೆಯಾಗಿಯೂ ಹೇಳಬಹುದಲ್ಲ- ಶೀರ್ಷಾಸನ ಒಳ್ಳೆಯದೆಂದು ಯೋಗಪಟುಗಳು ಹೇಳಿದ್ದನ್ನು ಅವು ಕೇಳಿಸಿಕೊಂಡಿವೆಯೇ! ಲೇವಾದೇವಿ ಪದ ಎಲ್ಲಿಂದ ಬಂತು? ‘ಲೇವ್ ದೇ ಈ’ ಅನ್ನುವುದು ಹಿಂದಿ ಮೂಲದ ಪದ. ಅದನ್ನು ತಮಾಷೆಯಾಗಿ ಲೇವಾ ಎಂಬ ಗಂಡ ಮತ್ತು ದೇವಿ ಎಂಬ ಹೆಂಡತಿ ಸೇರಿಕೊಂಡು ನಡೆಸುವ ಬಡ್ಡಿ ವ್ಯವಹಾರ ಎಂದೂ ಹೇಳಬಹುದಲ್ಲ! ಇಂಥ ನೂರಾರು ಪ್ರಶ್ನೋತ್ತರಗಳು ಇಡೀ ಕೃತಿಯುದ್ದಕ್ಕೂ ನಿಮ್ಮನ್ನು ನಗೆಯಲ್ಲಿ ತೇಲಿಸುತ್ತಿವೆ. ಪರೋಕ್ಷವಾಗಿ ವೈಜ್ಞಾನಿಕವಾಗಿಯೂ ಯೋಚಿಸುವಂತೆ ಮಾಡುತ್ತವೆ.
©2025 Book Brahma Private Limited.