ನಿಮಗೂ ಈ ಅನುಭವವಾಗಿರಬಹುದು: ಕ್ಯೂ ಬದಲಾಯಿಸಿ, ಇನ್ನೊಂದು ಕ್ಯೂಗೆ ನೀವು ಓಡಿದೊಡನೆ ಅದೇ ಉದ್ದವಾಗುತ್ತ ಹೋಗುತ್ತದೆ. ಕಂಪ್ಯೂಟರ್ ಮೆಕ್ಯಾನಿಕ್ ರಿಪೇರಿ ಮಾಡಿ ಆಚೆ ಹೋಗುತ್ತಲೇ ನಿಮ್ಮ ಕಂಪ್ಯೂಟರ್ ಮತ್ತೆ ಕೈಕೊಡುತ್ತದೆ. ಇಡೀ ದಿನ ಆಫೀಸಿನಲ್ಲಿ ಕೂತು ಕತ್ತೆಯಂತೆ ಕೆಲಸಮಾಡಿ ಒಂದೇ ಒಂದು ಸಲ ಆಕಳಿಸುವಾಗಲೇ ನಿಮ್ಮ ಬಾಸ್ ವಕ್ಕರಿಸುತ್ತಾನೆ. ಇಂಥ ಅನುಭವಗಳಿಗೆ ಏನು ಉತ್ತರ ಕೊಡಬೇಕು? ಉತ್ತರವೇ ಇಲ್ಲ. ಏಕೆಂದರೆ ಇದು ಜೀವನ, ಇದು ಬದುಕು. ಇಂಥ ಸಂಗತಿಗಳೆಲ್ಲ ಇದ್ದರೇನೇ ಬದುಕು ಚೆನ್ನ. `ಮರ್ಫಿಲಾ’ ಇಂಥ ಅನುಭವಗಳನ್ನು ಕೆದಕುತ್ತದೆ.
ಜಗತ್ತು ಕೆಲವೊಮ್ಮೆ ಉಲ್ಟಾಪಲ್ಟವಾದರೆ ನಿಮ್ಮನ್ನು ಹಾಸ್ಯಕ್ಕೆ ದೂಡುತ್ತದೆ, ನಿಧಾನವಾಗಿ ನೀವು ತತ್ತ್ವಜ್ಞಾನಿಯಾಗುತ್ತೀರಿ. ಇಲ್ಲಿ ಇನ್ನೊಂದು ಅನುಭವವನ್ನು ನೋಡಿ. `ಎಷ್ಟೇ ತಿಪ್ಪರಲಾಗ ಹಾಕಿದರೂ ನೆಲದಿಂದ ಕೆಳಕ್ಕೆ ನೀವು ಬೀಳುವುದಿಲ್ಲ’. `ನೀವು ಸ್ನಾನ ಮಾಡುವಾಗಲೇ ನಿಮ್ಮ ಟೆಲಿಫೋನ್ ರಿಂಗಾಗುತ್ತದೆ’. ಇದಕ್ಕೆ ಏನನ್ನುವಿರಿ? ಇಂಥ ಹತ್ತಾರು ಪ್ರಸಂಗಗಳನ್ನು ಈ ಪುಸ್ತಕದಲ್ಲಿ ಓದಿ ನೀವು ನಕ್ಕುಬಿಡಿ.
©2025 Book Brahma Private Limited.