‘ಹಿಮದ ಸಾಮ್ರಾಜ್ಯದಲ್ಲಿ’ ಲೇಖಕ, ವಿಜ್ಞಾನಿ ಟಿ.ಆರ್. ಅನಂತರಾಮು ಅವರ ಕೃತಿ. ಈ ಖಂಡದಲ್ಲಿ ನೀವು `ಗುಡ್ ನೈಟ್’ ಎಂದು ಹೇಳುವಂತಿಲ್ಲ. ಹಾಗೆಯೇ `ಗುಡ್ ಮಾರ್ನಿಂಗ್’ ಕೂಡ ಇಲ್ಲ. ಆರು ತಿಂಗಳು ಕತ್ತಲು, ಆರು ತಿಂಗಳು ಬೆಳಕು ಇರುವ ಏಕೈಕ ಮಹಾಖಂಡ ಅಂಟಾರ್ಕ್‍ಟಿಕ. ದಕ್ಷಿಣದ ಧ್ರುವ ಇರುವುದು ಈ ಖಂಡ ಮಧ್ಯದಲ್ಲೇ. ಭಾರತ ಮತ್ತು ಚೀನ ಒಟ್ಟುಗೂಡಿಸಿದರೆ ಎಷ್ಟು ವಿಸ್ತೀರ್ಣವಾಗುತ್ತದೋ ಅಷ್ಟೇ ವಿಸ್ತೀರ್ಣ ಈ ಖಂಡಕ್ಕಿದೆ. ಇದು ಶ್ವೇತಖಂಡ, ಹಿಮಖಂಡ, ಹಿಮದ ಮರುಭೂಮಿ, ಜನರಹಿತ ಖಂಡ ಹೀಗೆ ಎಷ್ಟೋ ವಿಶೇಷಣಗಳಿವೆ. ಈ ಖಂಡ ಯಾವೊಂದು ದೇಶಕ್ಕೂ ಸೇರಿಲ್ಲ. ಆದರೆ ಯಾವ ದೇಶ ಬೇಕಾದರೂ ಹೋಗಿ ಸಂಶೋಧನೆ ಮಾಡಬಹುದು. ವಿಜ್ಞಾನಕ್ಕಾಗಿಯೇ ಮೀಸಲು.
ಈ ಖಂಡ. ಹಿಂದೆ ಅನೇಕ ದೇಶಗಳು ತಾಮುಂದು, ನಾಮುಂದು ಎಂದು ಹೋಗಿ ತಮ್ಮ ಹಕ್ಕನ್ನು ಈ ಖಂಡದ ಮೇಲೆ ಸ್ಥಾಪಿಸಲು ಹೋರಾಡಿದ್ದವು. ಈಗ ಅವೆಲ್ಲ ಅಮಾನ್ಯ. ಅಲ್ಲಿ ಬಿರುಗಾಳಿ ಗಂಟೆಗೆ 100ಕಿ.ಮೀ. ಗಿಂತಲೂ ವೇಗದಲ್ಲಿ ಬೀಸುತ್ತದೆ. ಇದ್ದಕ್ಕಿದ್ದಂತೆ ಇಡೀ ಖಂಡ ಬಿಳಿ ತೆರೆಯಂತೆ ಕಾಣುವಷ್ಟು ಬಾನು, ನೆಲ ಒಂದಾಗುವುದುಂಟು. ಅಂಥ ಸ್ಥಿತಿ ಅತ್ಯಂತ ಅಪಾಯಕಾರಿ. ಮುಂದೆ ಕಾಲಿಟ್ಟರೆ ನೂರು ಮೀಟರ್ ಹಿಮದ ಪ್ರಪಾತಕ್ಕೆ ಬೀಳುವ ಅಪಾಯವಿರುತ್ತದೆ. 1911ರಲ್ಲಿ ನಾರ್ವೆಯ ಅಮುಂಡ್‍ಸನ್ ಶ್ವಾನಗಳ ಬಂಡಿಯೊಡನೆ ಹೋಗಿ ಈ ಖಂಡವನ್ನು ಮೆಟ್ಟಿ ನಿಂತಿದ್ದ. ಅನಂತರ ಬ್ರಿಟನ್ನಿನ ಸ್ಕಾಟ್ ಅದೇ ಪ್ರಯತ್ನದಲ್ಲಿ ಯಶಸ್ವಿಯಾದರೂ ಹಿಂತಿರುಗುವಾಗ ಇಡೀ ತಂಡ ಹಿಮಕ್ಕೆ ಬಲಿಯಾಯಿತು. ಈ ಖಂಡದಲ್ಲಿ ಮೂರು ಕಿಮೀ.ನಷ್ಟು ಹಿಮದ ಸ್ತರ ಕೂತಿದೆ. ಒಂದುವೇಳೆ ಇಲ್ಲಿಯ ಎಲ್ಲ ಹಿಮಗಡ್ಡೆಗಳು ಕರಗಿದರೆ ಜಗತ್ತಿನ ಸಾಗರ ಮಟ್ಟ 60 ಮೀ. ಏರಬಹುದು ಎಂದು ಅಂದಾಜು.
ಭಾರತ 1981ರಿಂದಲೂ ಸತತವಾಗಿ ಅಂಟಾರ್ಕ್‍ಟಿಕ ಖಂಡದ ಸಂಶೋಧನೆಗೆ ತಂಡಗಳನ್ನು ಕಳಿಸುತ್ತಿದೆ. ಅಲ್ಲಿಯೇ ಶಾಶ್ವತ ಶಿಬಿರಗಳನ್ನು ಹೂಡಿದೆ. ಈಗ ಅದು ಅಂಟಾರ್ಕ್‍ಟಿಕ ಕೂಡದ ಸದಸ್ಯ ರಾಷ್ಟ್ರ. ತೀರದಲ್ಲಿ ಪೆಂಗ್ವಿನ್ ಮತ್ತು ಸೀಲ್‍ಗಳನ್ನು ಬಿಟ್ಟರೆ ಈ ಖಂಡಕ್ಕೆ ತನ್ನದೇ ಆದ ಜೀವಿ ಸಂಪನ್ಮೂಲವಿಲ್ಲ. ಇನ್ನು ಸಸ್ಯ ಸಂಪತ್ತು ಬೆಳೆಯುವ ಮಾತೇ ಇಲ್ಲ. `ಹಿಮದ ಸಾಮ್ರಾಜ್ಯದಲ್ಲಿ’ ಕೃತಿಯಲ್ಲಿ ಈ ಖಂಡದ ಅನ್ವೇಷಣೆ, ಅಲ್ಲಿ ನಡೆಯುತ್ತಿರುವ ಜಾಗತಿಕ ಮಟ್ಟದ ವೈಜ್ಞಾನಿಕ ಸಂಶೋಧನೆಗಳ ಕುರಿತು ಅತ್ಯಂತ ವಿಸ್ಮಯಕಾರಿ ಮಾಹಿತಿಗಳಿವೆ. ಈಗಾಗಲೇ ಮೂರು ಬಾರಿ ಈ ಕೃತಿಯನ್ನು ಪರಿಷ್ಕರಿಸಲಾಗಿದೆ. ಅಂಟಾರ್ಕ್‍ಟಿಕ ಕುರಿತ ಅಧಿಕೃತ ಏಕೈಕ ಕನ್ನಡ ಪುಸ್ತಕ. ಈ ಕೃತಿಗೆ 1985ರ ಅತ್ಯುತ್ತಮ ವಿಜ್ಞಾನ ಕೃತಿ ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪುಸ್ತಕ ಬಹುಮಾನ ಸಂದಿದೆ.
©2024 Book Brahma Private Limited.