ಮನುಷ್ಯನ ಆಸೆ ಎಂದರೆ ಸಂಜೀವಿನಿ ಪಡೆದು ಅಮರನಾಗಬೇಕೆಂಬುದು. ಅಷ್ಟೇ ಅಲ್ಲ, ಕ್ಷುದ್ರ ಲೋಹಗಳನ್ನು ಸಂಸ್ಕರಿಸಿ ಅದನ್ನು ಚಿನ್ನವಾಗಿಸಬೇಕೆಂಬುದು. ಇತಿಹಾಸದುದ್ದಕ್ಕೂ ದೇಶ, ಕಾಲಗಳನ್ನು ಮೀರಿ ಮನುಕುಲ ಇದಕ್ಕೆ ಪ್ರಯತ್ನಿಸಿದೆ. ಈ ವಿಭಾಗವನ್ನು ಸಾಮಾನ್ಯವಾಗಿ `ಆಲ್ಕೆಮಿ’ ಎಂದು ಹೇಳುವುದು ರೂಢಿಯಲ್ಲಿದೆ. ಮನುಷ್ಯ ಶತಶತಮಾನಗಳ ಕಾಲ ಪ್ರಯೋಗಗಳನ್ನು ಮಾಡುತ್ತ ಗೆದ್ದೆ ಎನ್ನುವಾಗಲೇ ಸೋಲು ಅನುಭವಿಸಿದ. ಮೌಢ್ಯದ ಕೂಪಕ್ಕೂ ಬಿದ್ದ. ರಸವಿದ್ಯೆ ವಾಮಾಚಾರಕ್ಕೆ ಬಹು ಹತ್ತಿರ ಎನ್ನುವ ಹೆಸರು ಪಡೆಯಿತು.
ಸಿದ್ಧರು ಹುಟ್ಟಿಕೊಂಡರು, ಸಾವಿರ ವರ್ಷ ಬದುಕುತ್ತೇವೆಂದು ಸಾರಿದರು. ಸಂಜೀವಿನಿ ತರಲು ಹೋಗಿ ಮನುಷ್ಯ ಗಿಡಮೂಲಿಕೆಗಳನ್ನು ತಂದ. ಔಷಧಿ ಸೃಷ್ಟಿಯಾಯಿತು. ಲೋಹಗಳನ್ನು ಮೂಸೆಯಲ್ಲಿಟ್ಟು ಪ್ರಯೋಗಕ್ಕೊಡ್ಡಿದ, ಆದದ್ದೆಂದರೆ ರಸಾಯನ ವಿಜ್ಞಾನದ ಮೂಲ ಸೂತ್ರಗಳನ್ನು ಕಂಡುಕೊಂಡ. ಅಲೆಕ್ಸಾಂಡ್ರಿಯ, ಅರಬ್ ರಾಷ್ಟ್ರಗಳು, ಚೀನ, ಭಾರತ, ಇಂಗ್ಲೆಂಡ್ ರಸವಾದದ ಕೇಂದ್ರಗಳಾದವು. ನಿಮಗೆ ಅಚ್ಚರಿ ತರಬಹುದು. ಸರ್. ಐಸಾಕ್ ನ್ಯೂಟನ್ ತನ್ನ ಪ್ರಯೋಗ ಶಾಲೆಯಲ್ಲಿ ಗುಟ್ಟಾಗಿ ರಸವಿದ್ಯೆಗೆ ಸಂಬಂಧಿಸಿದಂತೆ ಪ್ರಯೋಗಗಳನ್ನು ಮಾಡುತ್ತಿದ್ದ. ಈ ಕೃತಿ `ರಸವಾದ’ದಲ್ಲಿ ರಸವಿದ್ಯೆಯ ಪರಿಕಲ್ಪನೆ, ಅದು ಬೆಳೆದುಬಂದ ದಾರಿ, ಅದು ಅಂತಿಮವಾಗಿ ತಲಪಿದ ಗುರಿ-ಇವೆಲ್ಲವನ್ನೂ ರಸವತ್ತಾಗಿ, ಚಾರಿತ್ರಿಕ ಸಾಕ್ಷಿಗಳೊಡನೆ ವಿವರಿಸಲಾಗಿದೆ. ರಸವಿದ್ಯೆ ಕುರಿತು ಕನ್ನಡದಲ್ಲಿ ಹೊರಬಂದಿರುವ ಒಂದೇ ಕೃತಿ ಇದು.
©2024 Book Brahma Private Limited.