ವಿಜ್ಞಾನದ ವಿವಿಧ ಶಾಖೆಗಳು ಬೆಳೆದು ಬಂದ ಬಗೆ ಹಾಗೂ ಆ ಹಾದಿಯಲ್ಲಿ ಅವುಗಳು ಪಡೆದುಕೊಂಡ ಮಹಾ ತಿರುವುಗಳ ರೋಚಕ ದಾಖಲೆ ಈ ಕೃತಿಯಾಗಿದೆ. ಸಮಾಜದ ಮೇಲೆ ಅತ್ಯಂತ ಪ್ರಭಾವ ಬೀರುವ ಅಪೂರ್ವ ಸಂಶೋಧನೆಗಳ ಮತ್ತು ಅನ್ವೇಷಣೆಗಳ ಸರಳ ನಿರೂಪಣೆ ಈ ಕೃತಿಯಲ್ಲಿದೆ. ಆಯಾ ಕ್ಷೇತ್ರದ ವಿಷಯ ಪರಿಣತರೇ ರಚಿಸಿರುವ ಸಮೃದ್ದ ಲೇಖನಗಳ ಸಂಕಲನ ಇದಾಗಿದ್ದು ಓದಿಗೆ ಪೂರಕವಾಗಿ ಸಾಕಷ್ಟು ಚಿತ್ರಗಳು, ನೂರಾರು ಆಕರ್ಷಕ ವರ್ಣರಂಜಿತ ಚಿತ್ರಗಳೂ ಇದೆ. ಅಧ್ಯಾಪಕರಿಗೆ, ಪಾಲಕರಿಗೆ, ವಿದ್ಯಾರ್ಥಿಗಳಿಗೆ ವಿಜ್ಞಾನದ ತಿರುಳನ್ನು ಇನ್ನಷ್ಟು ಸರಳ ಮಾಡಿಕೊಡುತ್ತದೆ. ಇಲ್ಲಿ ವಿಜ್ಞಾನವನ್ನು ಓದುವಿಕೆಗೆ ಅನುಕೂಲವಾಗುವಂತೆ ವಿಂಗಡಿಸಲಾಗಿದೆ. ಭೌತ ವಿಜ್ಞಾನ, ಖಭೌತ ವಿಜ್ಞಾನ, ಅಂತರಿಕ್ಷ ವಿಜ್ಞಾನ, ರಸಾಯನ ವಿಜ್ಞಾನ, ಸಸ್ಯ ವಿಜ್ಞಾನ, ಜೀವ ವಿಜ್ಞಾನ, ವೈದ್ಯ ವಿಜ್ಞಾನ, ವಿಧಿ ವಿಜ್ಞಾನ, ಕೃಷಿ ವಿಜ್ಞಾನ, ಭೂವಿಜ್ಞಾನ, ಪರಿಸರ ವಿಜ್ಞಾನ, ಗಣಿತ ವಿಜ್ಞಾನ, ತಂತ್ರಜ್ಞಾನ, ಮಾಹಿತಿ ತಂತ್ರಜ್ಞಾನ ಹೀಗೆ ಬೇರೆ ಬೇರೆ ಪ್ರಕಾರಗಳಲ್ಲಿ ನಡೆದಿರುವ ಸಾಧನೆ, ಮನುಷ್ಯರ ಬದುಕಿನಲ್ಲಿ ಮಹತ್ತರ ಕ್ರಾಂತಿಯನ್ನೇ ಮಾಡಿದೆ. ಈ ನಿಟ್ಟಿನಲ್ಲಿ ಮೇಲಿನೆಲ್ಲ ಪ್ರಾಕಾರಗಳಿಗೆ ಸಂಬಂಧಿಸಿ 30ಕ್ಕೂ ಅಧಿಕ ಮಹತ್ವದ ಲೇಖನಗಳಿವೆ. ಎಚ್. ಆರ್. ಕೃಷ್ಣಮೂರ್ತಿ, ಕೆ. ಎಸ್. ನಟರಾಜ್, ಬಿ. ಎಸ್. ಶೈಲಜಾ, ಪಾಲಹಳ್ಳಿ ವಿಶ್ವನಾಥ್, ಜಯಸಿಂಹ ಪಿ, ಎಂ. ಆರ್. ನಾಗರಾಜು, ಗೋಪಾಲಪುರ ನಾಗೇಂದ್ರಪ್ಪ, ಪಿ. ಕೆ. ರಾಜಗೋಪಾಲ್, ಎನ್. ಎಸ್. ಲೀಲಾ, ನಾ. ಸೋಮೇಶ್ವರ, ಪ್ರಕಾಶ್ ಸಿ. ರಾವ್, ವಿನೋದ್ ಲಕ್ಕಪ್ಪನ್, ಶರಣಬಸವೇಶ್ವರ ಅಂಗಡಿ, ಟಿ. ಎಸ್. ಚನ್ನೇಶ್, ನಾಗೇಶ್ ಹೆಗಡೆ, ಸಿ.ಎಸ್. ಅರವಿಂದ, ಸಿ. ಆರ್. ಸತ್ಯ, ಜಿ. ಎನ್. ನರಸಿಂಹ ಮೂರ್ತಿ ಹೀಗೆ ವಿವಿಧ ವಿಜ್ಞಾನ ಲೇಖಕರು ಬೇರೆ ಬೇರೆ ಸಂಶೋಧನೆಗಳ ಕುರಿತಂತೆ ಈ ಕೃತಿಯಲ್ಲಿ ಬೆಳಕು ಚೆಲ್ಲಿದ್ದಾರೆ.
©2025 Book Brahma Private Limited.