ಪದ ಕುಸಿಯೆ ನೆಲವಿಲ್ಲ

Author : ಡಿ. ಉಮಾಪತಿ

Pages 244

₹ 240.00




Year of Publication: 2020
Published by: ಅಹರ್ನಿಶಿ ಪ್ರಕಾಶನ
Address: ಜ್ಞಾನವಿಹಾರ ಬಡಾವಣೆ, ಕಂಟ್ರಿ ಕ್ಲಬ್ ಎದುರು ವಿದ್ಯಾನಗರ, ಶಿವಮೊಗ್ಗ-577203
Phone: 9449174662

Synopsys

ಹಳ್ಳಿ ಹಿನ್ನೆಲೆಯ ತೀವ್ರ ಸಂರಕ್ಷಿತ ಬಾಲ್ಯವನ್ನು ಕಂಡ ನಿಯಾಝ್ ಫಾರೂಕಿ ಅವರು ಎಳವೆಯಲ್ಲೆ ಉತ್ತಮ ಶಿಕ್ಷಣಕ್ಕೆ ಅರಸಿ ದೆಹಲಿಗೆ ವಲಸೆ ಬರುತ್ತಾರೆ. ಅವರ ಬದುಕಿನ ಆತ್ಮವೃತ್ತಾಂತ ‘ಪದ ಕುಸಿಯೆ ನೆಲವಿಲ್ಲ’.

ಕೃತಿಗೆ ಬೆನ್ನುಡಿ ಬರೆದಿರುವ ರಾಮಚಂದ್ರ ಗುಹಾ ಅವರು “ನಿಯಾಝ್ ಫಾರೂಕಿ ಅವರ ಈ ಕೃತಿ ಉತ್ಕಟವಾಗಿ ವ್ಯಕ್ತಿಗತವೂ ಮತ್ತು ಗಹನವಾಗಿ ರಾಜಕೀಯ ಸ್ವರೂಪದ್ದೂ ಆಗಿದೆ. ಡಾಮ್ ಮೊರೆಸ್ ಅವರ My son’s father ಪುಸ್ತಕದ ತರುವಾಯ ಬೆಳಕು ಕಂಡಿರುವ ಅತ್ಯುತ್ತಮ ಆತ್ಮಚರಿತ್ರೆ ಇದು. ಮಹಾನಗರದ ಘೋರ ವಿನಾಶದ ತೆಕ್ಕೆಗೆ ಸಿಕ್ಕಿಕೊಳ್ಳುವ ಹಳ್ಳಿಗಾಡಿನ ಪುಟ್ಟ ಮುಸ್ಲಿಂ ಬಾಲಕನ ಕಥೆ ಇದು. ಅತ್ಯಂತ ಅನುಭೂತಿ ಮತ್ತು ವಿನೋದದಿಂದ ಹೆಣೆಯಲಾಗಿದೆ. ಹಲವು ಸಲ ನಗಿಸಿತು ಆಗಾಗ ಕಣ್ಣುಗಳಲ್ಲಿ ನೀರಾಡಿಸಿತು. ಆದರೆ ನನ್ನ ಗಮನವನ್ನು ಸೆಳೆದು ನಿರಂತರವಾಗಿ ಸೆರೆ ಹಿಡಿದಿತ್ತು. ಬಾಲ್ಯಾವಸ್ಥೆಯಿಂದ ವಯಸ್ಕನಾಗುವ ತನಕ ಈ ಪೋರನ ಯಾನದ ವಿವರಗಳು ಓದುಗನನ್ನು ತಮ್ಮ ಸೆಳವಿಗೆ ಎಳೆದುಕೊಳ್ಳುತ್ತದೆ” ಎಂದಿದ್ದಾರೆ

About the Author

ಡಿ. ಉಮಾಪತಿ

ಡಿ. ಉಮಾಪತಿಯವರು ಕನ್ನಡದ ಉತೃಷ್ಟ ಲೇಖಕರಲ್ಲೊಬ್ಬರು. ಪತ್ರಕರ್ತರು, ಬರಹಗಾರರು ಆಗಿರುವ ಅವರು ಮೊದಲು ಕನ್ನಡ ದೈನಂದಿನ ಪತ್ರಿಕೆಯಾದ  ಕನ್ನಡ ಪ್ರಭದಲ್ಲಿ ಪತ್ರಕರ್ತರಾಗಿದ್ದು ನಂತರ ಪ್ರಜಾವಾಣಿಯಲ್ಲಿ ದೆಹಲಿಯ ವರದಿಗಾರರಾಗಿ ಕೆಲಸ ನಿರ್ವಹಿಸಿದ್ದಾರೆ. ಪ್ರಜಾವಾಣಿಯಲ್ಲಿ “ದೆಹಲಿ ನೋಟ” ಎಂಬ ಅಂಕಣ ಬರೆಯುತ್ತಿದ್ದರು. ಅದೇ ಅಂಕಣದ ಹೆಸರಿನ ಪುಸ್ತಕವನ್ನು ಸಹ ಪ್ರಕಟಿಸಿದ್ದಾರೆ. ಪ್ರಸ್ತುತ ’ನ್ಯಾಯ ಪಥ’ ಪತ್ರಿಕೆಯಲ್ಲಿ ಕನ್ಸಲ್ಟಿಂಗ್ ಎಡಿಟರ್‌ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.  ...

READ MORE

Reviews

ಮುಸ್ಲಿಂ ಬದುಕಿನ ವಯೋವಿಕಾಸ ಕಥನ

ಭಾವುಕತೆಯನ್ನೇ ಮುಖ್ಯ ಅಭಿವ್ಯಕ್ತಿ ಮಾಧ್ಯಮವನ್ನಾಗಿಸಿಕೊಂಡ ಭಾರತೀಯ ಸಮಾಜ, ಯುಗಧರ್ಮ ಮತ್ತು ಸಾಮಾಜಿಕ ಒತ್ತಡಗಳಿಗೆ ಸಿಲುಕಿ ಕಾಲಕಾಲಕ್ಕೆ ಹೊಸ ಸಾಹಿತ್ಯ ಪ್ರಕಾರಗಳನ್ನು ಸೃಷ್ಟಿಸಿರುವುದನ್ನು ನಾವೆಲ್ಲ ಬಲ್ಲೆವು. ಎಪ್ಪತ್ತರ ದಶಕದಲ್ಲಿ ಮರಾಠಿ ಭಾಷೆಯಲ್ಲಿ ಪ್ರಕಟಗೊಂಡ ದಯಾ ಪವಾರರ `ಬಲೂತ' ಅಂತಹ ಹೊಸ ಅರಿವನ್ನು ಸ್ಫೋಟಿಸಿದ ಕೃತಿ. ಆನಂತರ ಬಂದ ಅಕ್ಕರಮಾಸಿ, ಉಚಲ್ಯಾ, ಗಬಾಳ ಥರದ ದಲಿತ ಕಥನಗಳು ಆಧುನಿಕ ಭಾರತೀಯ ಸಾಹಿತ್ಯಕ್ಕೆ ಹೊಸ ವ್ಯಾಖ್ಯಾನ ಬರೆದು, ಎಲ್ಲ ಕಾಲಕ್ಕೂ ಸಾಹಿತ್ಯ ದೃಷ್ಟಿಕೋನವನ್ನು ಬದಲಿಸಿದವು.

ಪ್ರಸ್ತುತ ಕೃತಿ ‘ಪದ ಕುಸಿಯೆ ನೆಲವಿಲ್ಲ’ (ಇಂಗ್ಲಿಷ್‌ ಶೀರ್ಷಿಕೆ: ಆ್ಯನ್ ಆರ್ಡಿನರಿ ಮ್ಯಾನ್ಸ್ ಗೈಡ್ ಟು ರ‍್ಯಾಡಿಕಲಿಸಂ-ಗ್ರೋಯಿಂಗ್ ಅಪ್ ಮುಸ್ಲಿಂ ಇನ್ ಇಂಡಿಯಾ) ಅಂತಹ ಹೊಸ ಅರಿವಿನ ಸ್ಫೋಟದ ಬೀಜವನ್ನು ತನ್ನೊಳಗೆ ಇರಿಸಿಕೊಂಡಿರುವ ಕೃತಿ. ಇಲ್ಲಿ ಓದುಗರು ಯುವ ಪತ್ರಕರ್ತನೋರ್ವನ ಶೋಧನಾ ಮನೋಭಾವ, ವಸ್ತುನಿಷ್ಠತೆ; ಈಗಷ್ಟೇ ಅರಳುತ್ತಿರುವ ಯುವ ಬರಹಗಾರನ ಸಂಕಟ ಹಾಗೂ ತಳಮಳ; ನಿರ್ದಿಷ್ಟ ಧರ್ಮಕ್ಕೆ ಸೇರಿರುವುದರಿಂದಲೇ ಎದುರಿಸಬೇಕಾದ ತಲ್ಲಣಗಳನ್ನು ಏಕಕಾಲಕ್ಕೆ ಎದುರುಗೊಳ್ಳಬಲ್ಲರು. 

ಈ ಕೃತಿಯನ್ನು ಮತ್ತು ಆರಂಭಿಕ ಮರಾಠಿ ದಲಿತ ಕಥನಗಳನ್ನು ‘ಆತ್ಮಚರಿತ್ರೆಗಳು’ ಎಂದು ಸುಲಭವಾಗಿ ಹೇಳಿ ಬಿಡಬಹುದು. ಆದರೆ, ಈ ಹೊಸ ಸಾಹಿತ್ಯ ಪ್ರಕಾರದ ಸಂಕಥನಗಳ ಉದ್ದೇಶ ‘ಹೀಗ್ಹೀಗೆ ಆಯಿತು’ ಎಂದು ಅರುಹುವುದು ಮಾತ್ರವೇ ಅಲ್ಲ. ಬದಲಿಗೆ, ಸಮಾಜದ ಭಾಗವೇ ಆಗಿದ್ದರೂ ತಮ್ಮ ಅಸ್ಮಿತೆಯನ್ನು, ಬದುಕಿನ ಋಜುತ್ವವನ್ನು ಪ್ರಮಾಣೀಕರಿಸಬೇಕಾದಾಗಿನ ಒತ್ತಡ ಹುಟ್ಟುಹಾಕುವ ಹಿಂಸೆ ಎಂಥದ್ದು, ನಿಮ್ಮೊಡನಿದ್ದೂ ನಿಮ್ಮಂತಾಗದೆ ಇರುವ ಪರಕೀಯತೆ ಸೃಷ್ಟಿಸುವ ಅಸಹನೀಯತೆ ಯಾವ ಬಗೆಯದು ಎಂಬುದನ್ನು ಸಮಾಜದ ಚರ್ಚಾ ವಿಷಯವಾಗಿಸುವುದಾಗಿದೆ.

ಜಾತಿಪದ್ಧತಿ ಮತ್ತು ಧರ್ಮಪೂರ್ವಗ್ರಹಗಳು ಈ ಪರಕೀಯತೆಯನ್ನು ಸೃಷ್ಟಿಸುತ್ತಿವೆ, ಎಂದು ಈ ಲೇಖಕರು ನಿರೂಪಿಸ ಬಯಸುತ್ತಿದ್ದಾರೆ. ಹೀಗಾಗಿಯೇ, ಈ ಲೇಖಕರು ತಮ್ಮ ಕಥೆಯನ್ನು ಹೇಳುತ್ತಿದ್ದಾರೆಂದು ಅನ್ನಿಸಿದರೂ ಅವರು ನಿಜಕ್ಕೂ ಕಥಿಸುತ್ತಿರುವುದು ತಾವು ಬದುಕುವ ಸಮಾಜದಲ್ಲಿ ಬೇರೂರಿರುವ ಸಾಮಾಜಿಕ-ಸಾಂಸ್ಕೃತಿಕ-ಆರ್ಥಿಕ-ಧಾರ್ಮಿಕ ಮತ್ತಿತರ ಕ್ಷೇತ್ರಗಳಲ್ಲಿ ಕಂದಕಗಳನ್ನು. ಈ ಕಥನಗಳು ಬಹುಸಂಖ್ಯಾತ ಸಮುದಾಯಗಳ ಜೀವನದೃಷ್ಟಿಯನ್ನು ನಿಕಷಕ್ಕೊಡ್ಡುವುದರಿಂದ ಇವು ಸಮಾಜೋ-ಮಾನವಶಾಸ್ತ್ರದ ವಿಮರ್ಶಾತ್ಮಕ ಕರಡುಗಳೂ ಹೌದು. ಈ ಬಗೆಯ ಪ್ರಕಾರವನ್ನು ಇಂಗ್ಲಿಷ್‌ನಲ್ಲಿ ‘ಕಮಿಂಗ್ ಆಫ್ ಏಜ್’ ಎಂದು ಗುರುತಿಸಲಾಗುತ್ತದೆ. ಆತ್ಮಕಥೆ ಪದದ ಬದಲು ನಮ್ಮಲ್ಲೂ ‘ವಯೋವಿಕಾಸ’ ಕಥನಗಳು ಎಂದು ಗುರುತಿಸಬಹುದು. 

ಈ ‘ವಯೋವಿಕಾಸ’ ಕಥನಗಳು ಲೇಖಕ ಪ್ರತಿನಿಧಿಸುವ ಸಮುದಾಯ ಬದಲಾಗುತ್ತಿರುವ ಸಾಮಾಜಿಕ ಸನ್ನಿವೇಶದಲ್ಲಿ ತಮ್ಮ ಕುಟುಂಬ ಮತ್ತು ಜನಾಂಗಗಳ ಅಸ್ಮಿತೆಯನ್ನು ಪುನರ್ ನಿರ್ಮಿಸಿಕೊಳ್ಳುವಲ್ಲಿ ಎಂಥ ಭಯಾನಕ ವಾಸ್ತವವನ್ನು ಹಾದು ಬಂದವು ಎಂಬುದನ್ನು ತೆರೆದಿಡುತ್ತವೆ. ಸುಖದುಃಖಗಳನ್ನು ಸಮವಾಗಿ ಮುನ್ನೆಲೆಗೆ ತರುವ ಉಪಕಥೆ, ಸಣ್ಣ ಸಂಗತಿ, ಪ್ರಸಂಗ, ವಿನೋದ, ಕಟುವ್ಯಂಗ್ಯ, ವಾಸ್ತವದ ಹಿಂದೆ ಅಡಗಿರುವ ಕ್ರೌರ್ಯ ಮತ್ತು ಹಿಂಸೆ ಇಂತಹ ಕಥನಗಳಲ್ಲಿ ಸಹಜ. ಆಯಾ ಲೇಖಕನ ಪಕ್ವತೆ ಮತ್ತು ಸಂಯಮವನ್ನು ಆಧರಿಸಿ ಈ ಕಥನಗಳು ಓದುಗನನ್ನು ಬೆಚ್ಚಿ ಬೀಳಿಸಬಲ್ಲವು. ವಿಷಾದವುಕ್ಕಿಸಬಲ್ಲವು. ಅನುಕಂಪದಿಂದ ತುಳುಕುವಂತೆ ಮಾಡಿ ಮನಸ್ಸನ್ನು ಭಾರವಾಗಿಸಿ, ಕಣ್ಣನ್ನು ತೇವಗೊಳಿಸಬಲ್ಲವು. ನಾವು ಈವರೆಗೆ ಅರಿತಿರದ ವಾಸ್ತವಗಳನ್ನು ಇವು ಮುಂಚೂಣಿಗೆ ತರುವುದರಿಂದ ಇವು ‘ಸಂವಾದಿ ಸಂಕಥನ’ಗಳೂ ಹೌದು.

ಪ್ರಸ್ತುತ ಕೃತಿ ಕೂಡ ಮೇಲೆ ಸೂಚಿಸಿದ ಅಂಶಗಳನ್ನು ಸಂಯಮಪೂರ್ಣವಾಗಿ ನಿರುದ್ವಿಗ್ನ ಶೈಲಿಯಲ್ಲಿ ಅನಾವರಣಗೊಳಿಸುತ್ತದೆ. ಧರ್ಮಶ್ರದ್ಧೆ, ಪರಿಶ್ರಮ, ಪರೋಪಕಾರಗಳನ್ನು ಸಂಸ್ಕಾರವನ್ನಾಗಿಸಿಕೊಂಡ ಬಿಹಾರದ ಹಳ್ಳಿಯೊಂದರ ಕೃಷಿಯ ಕುಟುಂಬ ಹೊಸ ಕಾಲಮಾನದಲ್ಲಿ ಬದುಕು ಕಟ್ಟಿಕೊಳ್ಳುವ ಸಂಕಟಗಳನ್ನು ಅರುಹುತ್ತದೆ. ಕುಟುಂಬದ ನೈತಿಕ ಎಚ್ಚರವೇ ಆಗಿರುವ ಅಜ್ಜ ದಾದಾ, ಮಕ್ಕಳ ಏಳಿಗೆಗಾಗಿ ತುಳುಕುವ ಕಣ್ಣೀರನ್ನು ಪಾಪೆಯೊಳಗೆ ಹಿಡಿದಿಡಬಲ್ಲ ತಾಯಿ, ಸಂಸಾರಕ್ಕೆ ಹೊಸ ಘನತೆಯನ್ನು ತರಲು ಸ್ವಾರ್ಥವನ್ನು ತ್ಯಜಿಸಿ ಕೊಲ್ಲಿ ರಾಷ್ಟ್ರದಲ್ಲಿ ದುಡಿಯುತ್ತಿರುವ ತಂದೆ ಮತ್ತು ಚಿಕ್ಕಪ್ಪ... ಇಂಥ ಸಂಸಾರಗಳನ್ನು ದೇಶದುದ್ದಗಲಕ್ಕೂ ನಾವು ಕಾಣಬಲ್ಲೆವು. ಈ ಕುಟುಂಬಕ್ಕೆ ಧರ್ಮಪಾರಾಯಣತೆ ಹೇಗೆ ನಂಬಿಕೆಯ ಅಡಿಗಲ್ಲೋ ಹಾಗೆಯೇ ಕಬೀರ, ಕವಿ ಇಕ್ಬಾಲ್‍ರ ವಚನಗಳೂ ಪ್ರಮಾಣ. ಇಂತಹ ತಿಳಿವು ಮತ್ತು ಪಕ್ವತೆ ಪಡೆಯುತ್ತಿರುವುದು ಸಹ ಬದುಕಿನಿಂದಲೇ ಎಂದು ಲೇಖಕ ನಿಯಾಝ್ ಫಾರೂಕಿ ಮೃದುದನಿಯಲ್ಲಿ ಹೇಳ ಬಯಸುತ್ತಿದ್ದಾರೆ. 

ಪುಸ್ತಕದಲ್ಲಿ ಎರಡು ಭಾಗಗಳಿವೆ. ಹತ್ತು ವರ್ಷದ ಬಾಲಕ ಶಿಕ್ಷಣಕ್ಕಾಗಿ ಬಿಹಾರದ ತನ್ನ ಹಳ್ಳಿಯಿಂದ ದೆಹಲಿಯ, ಮುಸ್ಲಿಂ ಬಾಹುಳ್ಯವಿರುವ ಜಾಮಿಯಾ ನಗರಕ್ಕೆ ಬಂದಿಳಿಯುವಲ್ಲಿಂದ ಆರಂಭವಾದರೂ ಕಥನ ಸರಳ ರೇಖೆಯಂತಿರದೆ, ಹಿಂದೆಮುಂದೆ, ಸಿಕ್ಕುಸಿಕ್ಕಾಗಿ ಚಲಿಸುತ್ತ ಆಕರ್ಷಕ ವಿನ್ಯಾಸವನ್ನು ಹೊಂದಿದೆ. ಮೊಹಲ್ಲಗಳಲ್ಲಿನ ಮುಸ್ಲಿಂ ಜನಜೀವನ, ಅವರ ಕುರಿತು ಉಳಿದವರ ದೃಷ್ಟಿಕೋನ, ಸಣ್ಣಪುಟ್ಟ ಸಂಗತಿಗಳು, ಗೆಳೆತನ, ದೂರದಲ್ಲಿದ್ದರೂ ಸದಾ ತನ್ನ ಎಚ್ಚರವನ್ನು ಕಾಪಿಟ್ಟಿರುವ ಕುಟುಂಬದ ನೈತಿಕತೆ ಇತ್ಯಾದಿಗಳ ನಿರೂಪಣೆ ಮೇಲುಮಟ್ಟದ್ದಾಗಿದೆ. ಬಾಟ್ಲಾ ಹೌಸ್ (ಹುಸಿ) ಎನ್‍ಕೌಂಟರ್ ನಿರೂಪಕನ ಪ್ರಜ್ಞೆಯನ್ನು ಮತ್ತೊಂದು ಹೊರಳಿಗೆ ತರುತ್ತದೆ. ಕೆಲವೆಡೆ ತನಿಖಾ ಪತ್ರಿಕೋದ್ಯಮ ನೆನಪಿಸುವಷ್ಟು ರೋಚಕತೆಯಿದೆ. ಕಥನದ ಅಂತ್ಯ ಕೂಡ ತಾರ್ಕಿಕವಲ್ಲ. ಬದಲಿಗೆ, ಕಾಲದ ವ್ಯಂಗ್ಯ ಮತ್ತು ವಿನಾಕಾರಣದ ನಿರ್ದಯತೆಯನ್ನು ರೂಪಕವಾಗಿ ಬಳಸಿ ಮುಗಿಸಿರುವಂಥದ್ದು.

ಈ ಕೃತಿಯನ್ನು ದಶಕಗಳಿಂದ ದೆಹಲಿವಾಸಿಗಳಾದ, ಉತ್ತರ ಭಾರತದ ಕೋಮು ರಾಜಕಾರಣವನ್ನು ಅತ್ಯಂತ ಸಂವೇದನಾಶೀಲವಾಗಿ ಬರೆಯಬಲ್ಲ ಡಿ. ಉಮಾಪತಿ ಅನುವಾದಿಸಿದ್ದಾರೆ. ಪರಿಣತ ಪತ್ರಕರ್ತರೂ ಬರಹಗಾರರೂ ಆದ ಅವರ ಅನುವಾದದ ಭಾಷೆ, ಸರಾಗ ಮತ್ತು ಪರಿಣಾಮಕಾರಿ. ಉಮಾಪತಿಯವರ ತಲ್ಲೀನತೆ ಕೃತಿ ಕನ್ನಡದ್ದೇ ಎನ್ನುವಷ್ಟು ಸಹಜವಾಗಿಸಿದೆ. ಭಾಷೆಯ ಸೊಬಗು, ಹೊಸನುಡಿಗಟ್ಟುಗಳು ಕೃತಿಯ ಅನುವಾದವನ್ನು ಮೇಲುಸ್ತರಕ್ಕೆ ಏರಿಸಿವೆ. v

ಕೇಶವ ಮಳಗಿ

ಕೃಪೆ : ಪ್ರಜಾವಾಣಿ (2020 ಆಗಸ್ಟ್ 30)

...............................

ʼಪದ ಕುಸಿಯೆ ನೆಲವಿಲ್ಲʼ ಕೃತಿಯ ಪುಸ್ತಕ ವಿಮರ್ಶೆ- ಹೊಸ ಮನುಷ್ಯ

ಆತ್ಮಚರಿತ್ರೆಗಳು ಸಾಮಾನ್ಯವಾಗಿ ಲೇಖಕರ ಕೊನೆಯ ಹಂತದ ಬರವಣಿಗೆಯಾಗಿ ಬಂದಿರುವುದನ್ನು ನೋಡಿದ್ದೇವೆ. ಅಪರೂಪಕ್ಕೆ ಕೆಲವರು ಆತ್ಮಕಥೆಯ ಮೂಲಕವೇ ಲೇಖಕರಾಗಿ ಹೊರ ಹೊಮ್ಮಿದ ಉದಾಹರಣೆಗಳೂ ಇವೆ. ಇಂತಹ ಕೃತಿಗಳು ತಮ್ಮ ಕಥೆಯನ್ನು ಮಾತ್ರ ಹೇಳದೇ ಬೇರೆ ಏನನ್ನೋ ಹೇಳುವ ತುಡಿತದಲ್ಲಿರತ್ತವೆ. ಓದುಗರಿಗೂ ಭಿನ್ನವಾದ ಅನುಭವವನ್ನುನೀಡುತ್ತವೆ. ದೆಹಲಿಯ ಯುವಪತ್ರಕರ್ತ ನಿಯಾಜ್ ಫಾರೂಕಿ ಅವರ “An Ordinary Man's Guide To Radicalism - Growing up Muslim In India” ಕೃತಿಯನ್ನು ಡಿ. ಉಮಾಪತಿಯವರು “ಪದ ಕುಸಿಯೆ ನೆಲವಿಲ್ಲ” ಎಂಬ ಹೆಸರಿನಲ್ಲಿ ಕನ್ನಡಕ್ಕೆ ತಂದಿದ್ದು, ಆತ್ಮಕಥೆಗಿಂತ ಹೆಚ್ಚಾಗಿ ಮುಸ್ಲಿಂ ಸಮುದಾಯದ ಒಳಹೊರಗನ್ನು ಸಮರ್ಥವಾಗಿ ಚಿತ್ರಿಸುತ್ತದೆ.

ಬಿಹಾರಿನ ಗೋಪಾಲಗಂಜ್ ಜಿಲ್ಲೆಯ ಇಂಧರ್ವಾನ್ ಬೈರಾಮ್ ಎಂಬ ಗ್ರಾಮದ ಬಾಲಕ ನಿಯಾಜ್, ಆಧುನಿಕ ಶಿಕ್ಷಣ ಮತ್ತು ಉನ್ನತ ಹುದ್ದೆಯ ಆಸೆಯಿಂದ ದೆಹಲಿಯ ಜಾಮಿಯಾ ಮಿಲಿಯಾ ವಿ.ವಿ. ಸೇರುವ ಅನುಭವಗಳೇ ಇಲ್ಲಿಯ ಕಥಾವಸ್ತು. 2008 ರಲ್ಲಿ ದೆಹಲಿಯ ಬಟ್ಲಾಹೌಸ್ ಎನ್‌ಕೌಂಟರ್‌ನಲ್ಲಿ ಹತ್ಯೆಯಾದ ಇಬ್ಬರು ನಿರಪರಾಧಿ ಯುವಕರನ್ನು (ಒಬ್ಬ ಪೊಲೀಸ್ ಇನ್ಸ್‌ಪೆಕ್ಟರ್‌ ಕೂಡ) ಪೊಲೀಸರು ತಿಂಗಳ ಹಿಂದೆ 30 ಜನರ ಮಾರಣ ಹೋಮಕ್ಕೆ ಕಾರಣವಾದ ಸರಣಿ ಬಾಂಬ್ ಸ್ಫೋಟದ ರೂವಾರಿಗಳೆಂದು ಆರೋಪಿಸಿದ್ದು, ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗುತ್ತದೆ. ಎನ್‌ಕೌಂಟರ್‌ ಆಸುಪಾಸಿನಲ್ಲೇ ಮುಸ್ಲಿಂ ಘಟ್ಟೋ ಒಂದರಲ್ಲಿ, ಹತ್ಯೆಯಾದ ಯುವಕರಂತೆಯೇ ಕುಟುಂಬದಿಂದ ದೂರವಾಗಿ, ಏಕಾಂಗಿಯಾಗಿ ಬದುಕುತ್ತಿದ್ದ ನಿಯಾಜ್‌ಗೆ ಎಂತಹ ಆಘಾತವಾಗಿತ್ತೆಂದರೆ ಅದು ಅವನ ಬದುಕಿನ ದಿಕ್ಕನ್ನೇ ಬದಲಿಸಿತು. ಈ ಒಂದು ಘಟನೆಯ ಕೇಂದ್ರಬಿಂದುವಿನಿಂದ ತರಂಗವಾಗಿ ಹರಡುವ ಪ್ರಭುತ್ವ ಮತ್ತು ಸಮುದಾಯದ ಸಂಘರ್ಷವನ್ನು ಲೇಖಕರು ಅನುಭವಕ್ಕೆ ನಿಷ್ಟವಾಗಿ ವಿಶ್ಲೇಷಿಸಿದ್ದಾರೆ. ಸ್ನೇಹಿತರೊಂದಿಗಿನ ನವಿರು ಹಾಸ್ಯದ ಚರ್ಚೆಗಳಲ್ಲಿ ಮೂಡುವ ರಾಜಕೀಯ, ಸಾಮಾಜಿಕ, ಧಾರ್ಮಿಕ ವಿಚಾರಗಳು ಮುಸ್ಲಿಂ ವಿದ್ಯಾರ್ಥಿ ಬದುಕಿನ ಕನ್ನಡಿಯಂತಿದೆ. ಜಾಮಿಯಾ ವಿ.ವಿ. ವಿದ್ಯಾರ್ಥಿಗಳಲ್ಲಿ ಭಯೋತ್ಪಾದಕರಿದ್ದಾರೆಂಬ ಮಾಧ್ಯಮಗಳ ಆರೋಪದಿಂದ ಆತಂಕಕ್ಕೀಡಾದಾಗ “ನೀವು ಯಾವ ದೇಶಭಕ್ತರಿಗೂ ಕಡಿಮೆಯಿಲ್ಲ” ಎಂದು ಘೋಷಿಸಿ, ಶಾಂತಿಯಾತ್ರೆಯ ಮೂಲಕ ವಿದ್ಯಾರ್ಥಿಗಳ ಆತ್ಮಸ್ಥೆರ್ಯಕ್ಕೆ ಕಾರಣರಾದ ಉಪಕುಲಪತಿ ಮುಷಿರುಲ್ ಹಸನ್, ಇಂದಿನ ಮುಸ್ಲಿಂ ಯುವಜನಾಂಗಕ್ಕೆ ಅಗತ್ಯವಿರುವ ಮಾದರಿ ನಾಯಕರು.

ಯುವಕರು ತಮ್ಮ ಜಾತಿ ಧರ್ಮಗಳ ಸಂಕುಚಿತ ಕೋಶದಿಂದ ಹೊರಬಂದಾಗ ಸತ್ಯವನ್ನು ಸಮಗ್ರವಾಗಿ ಗ್ರಹಿಸಲು ಹೇಗೆಸಾಧ್ಯ ಎಂಬುದಕ್ಕೆ 'ನಾವು ಮತ್ತು ಅವರ ಕಥಾನಕಗಳು' ಅಧ್ಯಾಯ ಉತ್ತಮ ಉದಾಹರಣೆ. ಅನ್ಯ ಸಮುದಾಯಗಳೊಂದಿಗಿನ ಪರಸ್ಪರ ಸಂಬಂಧಗಳನ್ನು ಸಂದರ್ಶನಗಳ ಮೂಲಕ ಖುದ್ದಾಗಿ ಸಂಗ್ರಹಿಸಿದ್ದು ಆಪ್ತವಾಗಿದೆ. ಪಾಕಿಸ್ತಾನದಿಂದ ವಲಸೆ ಬಂದು ದೆಹಲಿಯ ಹೊರವಲಯದಲ್ಲಿ ನೆಲೆಸಿರುವ ಹಿಂದುಗಳು ತಾವು ಹುಟ್ಟಿ ಬೆಳೆದ ನೆಲವನ್ನು ಅಕ್ಕರೆಯಿಂದ ನೆನೆಯುತ್ತಿರುವುದು, ಅಫಘಾನಿಸ್ತಾನದಿಂದ ವಲಸೆ ಬಂದಿರುವ ಕ್ರೈಸ್ತರು ತಮಗೆ ತೊಂದರೆ ಕೊಟ್ಟ ಅಫಘನ್ನರಿಗೇ ಭಾಷಾಂತರಕಾರರಾಗಿ ಹೊಟ್ಟೆ ಹೊರೆಯುತ್ತಿರುವುದು ಮೊದಲಾದ ಸಂಗತಿಗಳು ಮಾನವೀಯ ಸಂಬಂಧಗಳ ನಾನಾಮುಖಗಳನ್ನು ಪರಿಚಯಿಸುತ್ತವೆ.

ಹಿಂಸೆಯನ್ನು ಒಪ್ಪುವ, ಪ್ರಚೋದಿಸುವ ವ್ಯಕ್ತಿಗಳಿಗೆ ಜಾಮಿಯಾ ನಗರ ಆಶ್ರಯ ಕೊಟ್ಟಿತ್ತೇ ಎಂಬ ಪ್ರಶ್ನೆಗೆ 'ತತ್ವರಹಿತರು, ನೀತಿಬಾಹಿರರು ಕೆಲವರು ಇದ್ದಿರಬಹುದು, ಆದರೆ ತನ್ನದೇ ದೇಶದ ಮೇಲೆ ಬಾಂಬ್ ಹಾಕುವವರು ಖಂಡಿತಾ ಇಲ್ಲ' ಎಂಬುದು ಲೇಖಕರ ಅಭಿಪ್ರಾಯ. ಆದರೆ ಬಟ್ಲಾಹೌಸ್ ಎನ್‌ಕೌಂಟರಗೆ ಕಾರಣವಾದ ದೆಹಲಿಯ ಬಾಂಬ್‌ಸ್ಫೋಟ ಮತ್ತು 30 ಜನರ ಸಾವಿನಬಗ್ಗೆ, ಅದಕ್ಕೆ ಕಾರಣರಾದವರ ಬಗ್ಗೆ ಕೃತಿ, ಅದು ಪ್ರಭುತ್ವದ ಸಮಸ್ಯೆ ಎಂಬಂತೆ ಮೌನವಹಿಸತ್ತದೆ.

(ಕೃಪೆ: ಪುಸ್ತಕಾವಲೋಕನ ನವೆಂಬರ್‌ ೨೦೨೦, ಬರಹ- ಎನ್.ಎಂ. ಕುಲಕರ್ಣಿ)

Related Books