1990ರ ದಶಕದಲ್ಲಿ ಜಾಹಿರಾತು ಜಗತ್ತಿನಲ್ಲಿ ಮಿಂಚಿದ ಕಪ್ಪು ಶಿಲೆಯಂತ ಸುಂದರಿ ವಾರಿಸ್ ಡೆರಿಸ್ ನಳ ಆತ್ಮಕಥನ ‘ಡೆಸರ್ಟ್ ಫ್ಲವರ್’ನ ಕನ್ನಡಾನುವಾದ. ವಾರಿಸ್ ಡೆರಿಸ್ ಜಗತ್ತಿನ ಜಾಹಿರಾತು ಲೋಕದಲ್ಲಿ ಅಚ್ಚಳಿಯದ ಹೆಸರು. 1990ರ ದಶಕದಲ್ಲಿ ಪ್ರಸಿದ್ಧ ಸೌಂದರ್ಯವರ್ಧಕ ಉತ್ಪನ್ನಗಳ ಬಹುರಾಷ್ಟ್ರೀಯ ಕಂಪನಿಯಾದ ರೆವಲಾನ್ ಸಂಸ್ಥೆ ತನ್ನ ಉತ್ಪನ್ನಗಳಿಗೆ ಕಡೆದ ಕಪ್ಪು ಕಲ್ಲಿನ ಶಿಲೆಯಂತಿದ್ದ ವಾರಿಸ್ ಡೆರಿಸ್ ಳನ್ನು ಅನೇಕ ವರ್ಷಗಳ ಕಾಲ ಜಾಗತಿಕ ಮಟ್ಟದಲ್ಲಿ ರೂಪದರ್ಶಿಯಾಗಿ ನೇಮಕ ಮಾಡಿಕೊಂಡಿತ್ತು. ಹಾಗಾಗಿ ಕಪ್ಪನೆಯ, ತೆಳ್ಳಗಿನ, ಪುಟ್ಟ ಬಾಯಿಯ ಈ ಸುಂದರಿಯ ಮುಖ ಜಗತ್ತಿನ ಬಹುಪಾಲು ಜನತೆಗೆ ಅಪರಿಚಿತವಾಗಿ ಉಳಿದಿಲ್ಲ. ಕುತೂಹಲ ಸಂಗತಿಯೆಂದರೆ, ವಾರಿಸ್ ತನ್ನ ಆತ್ಮಚರಿತ್ರೆ ಬರೆಯುವವರೆಗೂ ಜಗತ್ಪ್ರಸಿದ್ಧ ಈ ರೂಪದರ್ಶಿ ಆಫ್ರಿಕಾ ಖಂಡದ ಸೋಮಾಲಿಯಾ ದೇಶದ ಒಂದು ಮುಸ್ಲೀಂ ಅಲೆಮಾರಿ ಬುಡಕಟ್ಟು ಜನಾಂಗದಿಂದ ಬಂದ ಅಪ್ಪಟ ಅನಕ್ಷರಸ್ತೆ ಎಂಬುದು ಯಾರಿಗೂ ಗೊತ್ತಿರಲಿಲ್ಲ. ತನ್ನ ತಂದೆ ವಧು ದಕ್ಷಿಣೆಯ ಆಸೆಯಿಂದ ಅರವತ್ತು ವರ್ಷದ ವೃದ್ಧನೊಬ್ಬನ ಜೊತೆ ವಿವಾಹ ನಿಶ್ಚಿಯಿಸಿದಾಗ ಮನೆಯಿಂದ ತಪ್ಪಿಸಿಕೊಂಡು ಬಂದ ಈಕೆ ನೂರಾರು ಮೈಲುಗಳ ವಿಸ್ತೀರ್ಣದ ಮರುಭೂಮಿಯನ್ನು ಬರಿಗಾಲಲ್ಲಿ ನಡೆದು, ಸೋಮಾಲಿಯ ರಾಜಧಾನಿ ಮೊಗದಿಶು ನಗರವನ್ನು ತಲುಪಿ, ಸಂಬಂಧಿಕರ ಮನೆಯ ಕೆಲಸದ ಆಳಾಗಿ ಆನಂತರ ಲಂಡನ್ ನಗರ ತಲುಪಿದ್ದು ಒಂದು ರೋಚಕ ಅನುಭವ. ಲಂಡನ್ ನಗರದಲ್ಲಿ ಮಕ್ಕಳನ್ನು ಶಾಲೆಗೆ ಬಿಡಲು ಹೋಗುತ್ತಿರುವ ಸಂದರ್ಭದಲ್ಲಿ ಬಿಳಿತೊಗಲಿನ ರೂಪದರ್ಶಿಯರಿಂದ ಬೇಸತ್ತು ಹೋಗಿದ್ದ ಜಾಹಿರಾತು ಲೋಕದ ಛಾಯಾಗ್ರಾಹಕನೊಬ್ಬನ ಕುತೂಹಲದ ಕಣ್ಣಿಗೆ ಬಿದ್ದ ಪರಿಣಾಮವಾಗಿ ರೂಪದರ್ಶಿಯಾಗಿ ಹೊರಹೊಮ್ಮಿದಳು. ಆನಂತರ ಹಾಲಿವುಡ್ ಬಾಂಡ್ ಸಿನಿಮಾಗಳಲ್ಲಿ ನಟಿಸುವ ಅವಕಾಶ ಕೂಡಾ ದೊರೆಯಿತು. ಹೀಗೆ ವಾರಿಸ್ ಳ ಸಾಹಸದ ಬದುಕು ಒಂದು ಯಶಸ್ವಿ ಸಿನಿಮಾವೊಂದರ ಚಿತ್ರಕಥೆಯಂತಿದೆ.
ಬಾಲ್ಯದಲ್ಲಿ ಎದುರಾದ ಸಮಸ್ಯೆಗಳ ವಿರುದ್ಧ ಈಜುತ್ತಾ, ಹೋರಾಟ, ಹಸಿವು, ಮತ್ತು ಅಪಮಾನಗಳ ನಡುವೆ ಬದುಕು ಕಚ್ಚಿಕೊಂಡು ಜಾಗತಿಕ ಮಟ್ಟದ ಸೂಪರ್ ಮಾಡೆಲ್ ಆಗಿ ಬೆಳೆದರೂ ಕೂಡಾ ವಾರಿಸ್ ತನ್ನ ಅಲೆಮಾರಿ ಕುಟುಂಬದ ಬಡತನದ ಬಾಲ್ಯವನ್ನು ಮತ್ತು ಆಫ್ರಿಕಾದ ಬುಡಕಟ್ಟು ಜನಾಂಗಗಳಲ್ಲಿ ಆಚರಣೆಯಲ್ಲಿರುವ ಯೋನಿ ವಿಚ್ಛೇಧನ ಎಂಬ ಅನಿಷ್ಟ ಪದ್ದತಿಯನ್ನು ಮರೆತಿರಲಿಲ್ಲ. ಎಲ್ಲವನ್ನೂ ತನ್ನ ಆತ್ಮಕಥೆಯಲ್ಲಿ ದಾಖಲಿಸಿ ಜಗತ್ತಿನೆದುರು ತೆರೆದಿಟ್ಟು ಜಗತ್ತನ್ನೇ ಬೆಚ್ಚಿಬೀಳಿಸಿದಳು. ಅಲ್ಲಿನ ಹೆಣ್ಣು ಮಕ್ಕಳಿಗೆ ಋತುಮತಿಯಾಗುವ ಮುನ್ನವೇ ಅವೈಜ್ಞಾನಿಕವಾಗಿ ಯೋನಿಗೆ ಹೊಲಿಗೆ ಹಾಕುವ ಅಮಾನುಷ ಪದ್ದತಿಯನ್ನು ಜಗತ್ತಿಗೆ ವಿವರಿಸಿದಳು. ಏಕೆಂದರೆ, ಸ್ವತಃ ಅವಳೇ ಆ ಕ್ರೌರ್ಯಕ್ಕೆ ಬಲಿಪಶುವಾಗಿದ್ದಳು. ವಾರಿಸ್ ಆತ್ಮಕಥನ ಡೆಸರ್ಟ್ ಫ್ಲವರ್ ಪ್ರಕಟವಾದ ನಂತರ ಅವಳ ಜನಪ್ರಿಯತೆ ಮತ್ತಷ್ಟು ಇಮ್ಮಡಿಸಿತು. ಬಿ.ಬಿ.ಸಿ ಛಾನಲ್ ಈಕೆಯ ಬದುಕನ್ನು ಕುರಿತಾದ ನೊಮೆಡ್ ಇನ್ ನ್ಯೂಯಾರ್ಕ್ ಎಂಬ ಸಾಕ್ಷ್ಯ ಚಿತ್ರವನ್ನು ನಿರ್ಮಾಣ ಮಾಡಿತು. ಆಸ್ಕರ್ ಪ್ರಶಸ್ತಿ ವಿಜೇತ ನಿರ್ದೇಶಕನೊಬ್ಬನ ಕೈಯಲ್ಲಿ ಈಕೆಯ ಆತ್ಮಕಥನ ಆಧಾರಿತ ಡೆಸರ್ಟ್ ಫ್ಲವರ್ ಹೆಸರಿನಲ್ಲಿ ಚಿತ್ರವೊಂದು ಹಾಲಿವುಡ್ ನಲ್ಲಿ ನಿರ್ಮಾಣವಾಯಿತು.
ಆಫ್ರಿಕಾದ ಬಡರಾಷ್ಟ್ರಗಳಲ್ಲಿ ಆಚರಣೆಯಲ್ಲಿರುವ ಹೆಣ್ಣುಮಕ್ಕಳ ಯೋನಿವಿಚ್ಛೇಧನ ಕ್ರಿಯೆಯ ವಿರುದ್ಧ ವಾರಿಸ್ ಯುದ್ಧ ಸಾರಿದಾಗ ವಿಶ್ವಸಂಸ್ಥೆ ಈಕೆಯ ಬೆಂಬಲವಾಗಿ ನಿಂತು ಆಫ್ರಿಕಾದ ಹೆಣ್ಣು ಮಕ್ಕಳ ಶಿಕ್ಷಣದ ಕಾರ್ಯಕ್ರಮಕ್ಕಾಗಿ ತನ್ನ ರಾಯಭಾರಿಯನ್ನಾಗಿ ನೇಮಕ ಮಾಡಿಕೊಂಡಿತು. ವಾರೀಸ್ ಡೆರಿಸ್ ಳ ಈ ಆತ್ಮಕಥೆ ಇಂದು ಜಗತ್ತಿನ ಎಂಬತ್ತೈದು ಭಾಷೆಗಳಲ್ಲಿ ಪ್ರಕಟಗೊಂಡು ಅತ್ಯಂತ ಹೆಚ್ಚು ಮಾರಾಟವಾದ ಕೃತಿಗಳಲ್ಲಿ ಒಂದಾಗಿದೆ.
ಯಾವುದೇ ಸಂಕೋಚ ಮುಚ್ಚುಮರೆಯಿಲ್ಲದೇ ಅಕ್ಷರಗಳಲ್ಲಿ ಹಿಡಿದಿಡಲು ಮುಜುಗರವಾಗುವಷ್ಟು ಬಾಲ್ಯದಲ್ಲಿ ನಡೆದ ಅತ್ಯಾಚಾರ, ಅನುಭವಿಸಿದ ಸಂಕಟ, ಮತ್ತು ಅಪಮಾನಗಳ ಜೊತೆಗಿನ ತನ್ನ ಹೋರಾಟದ ಬದುಕನ್ನು ತೆರೆದಿಟ್ಟಿರುವ ಅಪರೂಪದ ಹೆಣ್ಣು ಮಗಳೊಬ್ಬಳ ಈ ಸಾಹಸಗಾಥೆಯನ್ನು ಡಾ.ಎನ್.ಜಗದೀಶ್ ಕೊಪ್ಪ ಅವರು ಅಷ್ಟೇ ಸೂಕ್ಷ್ಮವಾಗಿ ಕನ್ನಡಕ್ಕೆ ಅನುವಾದಿಸಿದ್ದಾರೆ.
ತುಂಬಾ ದಿನಗಳ ನಂತರ ಒಂದೊಳ್ಳೆ ಪುಸ್ತಕ ಓದಿದ ಖುಷಿ ನಂದಾಯ್ತು. ಇದನ್ನು ಕಳಿಸಿಕೊಟ್ಟ ಅತ್ಯಂತ ಕಿರಿಯ ಮಿತ್ರನಿಗೆ ನನ್ನ ಹೃತ್ಪೂರ್ವಕ ನಮನ ಸಲ್ಲಿಸುತ್ತಾ ನನ್ನ ಅಭಿಪ್ರಾಯವನ್ನು ಇಲ್ಲಿ ಹಂಚಿಕೊಳ್ಳುತ್ತಿರುವೆ. ನೆನಪಿರಲಿ ನಾನು ಪುಸ್ತಕವನ್ನು ವಿಮರ್ಶೆ ಮಾಡುತ್ತಿಲ್ಲ. ಆ ಯೋಗ್ಯತೆ ಅರ್ಹತೆ ಎರಡೂ ನನಗಿಲ್ಲ. ನಾನೋರ್ವ ಪುಸ್ತಕ ಪ್ರೇಮಿ ಅಷ್ಟೇ. ಯಾವುದೇ ಒಳ್ಳೆ ಪುಸ್ತಕ ಓದಿದರೂ ತಿಳಿದ ನಾಲ್ಕು ಜನರಿಗೆ ಇಂಥಾ ಪುಸ್ತಕ ಓದಿ ಅಂತ ಹೇಳೋದು ನನ್ನ ವಾಡಿಕೆ ಅಷ್ಟೇ !
ಒಂದೇ ಸಿಟ್ಟಿಂಗ್ ನಲ್ಲಿ ಓದಿ ಮುಗಿಸಿಕೊಂಡ ಹೆಗ್ಗಳಿಕೆ ಈ ಪುಸ್ತಕದ್ದು. ತುಂಬಾ ದಿನದ ಮೇಲೆ, ದಿನ ಏನು ತುಂಬಾ ವರ್ಷಗಳೇ ಆಗಿರಬೇಕು. ಹೀಗೇ ಒಂದೇ ಸಿಟ್ಟಿಂಗ್ ನಲ್ಲಿ ಓದಿ ಮುಗಿಸೋಕೆ ಸಾಧ್ಯವಾಗಿರೋದು. ಓದೋದು ನನಗೆ ತುಂಬಾ ಪ್ರಿಯವಾದ ಕೆಲ್ಸ. ಆದ್ರೆ ಓದುವ ಅವಧಿ ಸೀಮಿತವಾಗಿತ್ತು ಅಷ್ಟೇ. ಒಂದು ಪುಸ್ತಕ ಶುರು ಮಾಡಿದ್ರೆ ಮುಗಿಯೋಕೆ ಎಷ್ಟೋ ದಿನಗಳು ಬೇಕು ನನಗೆ. ಆದ್ರೆ ಇತ್ತೀಚೆಗೆ ಯಾವ ಪುಸ್ತಕವನ್ನೂ ಈ ಪರಿ ಕೆಳಗಿಡದೆ ಮುಗಿಸಿರಲಿಲ್ಲ. ಸರಿಯಾಗಿ 4 ಗಂಟೆಗಳ ಕಾಲಾವಧಿಯಲ್ಲಿ ಓದಿ ಮುಗಿಸಿ ನಿಟ್ಟುಸಿರಿಟ್ಟಾಗ ಮಧ್ಯರಾತ್ರಿಯಾಗಿತ್ತು . ಓದುವ ನಡು ನಡುವೆ ಅನೇಕ ಭಾಗಗಳಲ್ಲಿ ಹೃದಯ ನಡುಗಿದ್ರೆ ಇನ್ನೂ ಕೆಲವು ಕಡೆ ಕಣ್ಣು ಒದ್ದೆಯಾದ್ದು ಸುಳ್ಳಲ್ಲ. ನಿಜವಾಗ್ಲೂ ನನಗೆ ಈ ಪುಸ್ತಕದ ಪರಿಚಯವೇ ಇರಲಿಲ್ಲಾ. ಕೊನೆಗೆ ಹೆಸರು ಕೂಡ ಕೇಳಿರಲಿಲ್ಲ. ಇನ್ನೂ ಆ ಮಹಾತಾಯಿ ವಾರಿಸ್ ಡಿರಿ ಇವಳ ಬಗ್ಗೆ ಕೂಡ ಗೊತ್ತಿಲ್ಲ. ಹೀಗಿರುವಾಗ ಇನ್ನು ಆಫ್ರಿಕದ ಆ ಅನಿಷ್ಟ ಪದ್ಧತಿ ಬಗ್ಗೆ ಹೇಗೆ ತಿಳಿಬೇಕು. ಹೇಳಿ ಕೇಳಿ ನಾವು ನಗರವಾಸಿಗಳು ಬಾವಿ ಕಪ್ಪೆಗಳು. ಸೀಮಿತ ಪರಿಧಿಯೊಳಗೆ ಗಿರಕಿ ಹೊಡೆಯೋರು.
ತಿಂಗಳ ಹಿಂದೆ ಪ್ರತಿಲಿಪಿಯ ಗೆಳೆಯರೊಬ್ಬರು ಈ ಪುಸ್ತಕವನ್ನು ಕಳಿಸಿದ್ದರು. ಅದನ್ನು ಓದೋದಿರಲಿ ಪುಟ ಕೂಡ ತಿರುವಿರಲಿಲ್ಲ. ಯಾರದೋ ಆತ್ಮ ಕಥೆ ಅಂತಷ್ಟೇ ಗೊತ್ತು. ಬಹುಶ ಮುಖಪುಟದ ಚಂದನೆಯ ವ್ಯಕ್ತಿ ಯಾರು ಅಂತ ಗೊತ್ತಿಲ್ಲದೆ ಇದ್ದ ಕಾರಣ ನನ್ನ ಆಸಕ್ತಿ ಕೆರಳಲಿಲ್ಲವೇನೋ? ಹಾಗಾಗಿ ಈಗಾಗಲೇ ತಂದು ಗುಡ್ಡೆ ಹಾಕಿಕೊಂಡಿದ್ದ ಓದದ ಅನೇಕ ಪುಸ್ತಕಗಳ ಗುಂಪಿಗೆ ಇದನ್ನೂ ಸೇರಿಸಿ ಸುಮ್ಮನಾಗಿದ್ದೆ.
ಇವತ್ತು ತೀರದ ಬೇಸರದಿಂದ ಹೊರ ಬರುವ ಸಲುವಾಗಿ ಪುಸ್ತಕಗಳ ರಾಶಿಯಲ್ಲಿ ಮೇಲಿದ್ದ ಈ ಪುಸ್ತಕ ಕೈಗೆತ್ತಿ ಕೊಂಡೆ ಅಷ್ಟೇ. ಪುಸ್ತಕ ಶುರು ಮಾಡುವ ಮೊದಲು ಈ ಪುಸ್ತಕ ಈಗಾಗಲೇ ನಾಲ್ಕನೇ ಮುದ್ರಣ ಕಂಡಿದೆ ಎಂಬುದನ್ನು ಅರಿತೆ. ಅನುವಾದಕರ ಮಾತು ಓದುತ್ತಲೇ ಆಸಕ್ತಿ ಕೆರಳಿತಲ್ಲದೆ ಅವರ ಮಾತಿನಲ್ಲಿ ಕೇಳಿ ಬಂದ ಯೋನಿಛೇದ ಎಂಬ ಪದ ಗಾಬರಿ ಹುಟ್ಟಿಸಿತು. ಒಂದು ಬಗೆಯ ಆಶ್ಚರ್ಯ ಮಿಶ್ರಿತ ಭಯ ದೇಹವನ್ನೆಲ್ಲ ವ್ಯಾಪಿಸಿ ಕುತೂಹಲ ಇಮ್ಮಡಿಯಾಯಿತು. ನಾಗರೀಕ ಸಮಾಜ ನಾಚಿಕೆಯಿಂದ ತಲೆ ತಗ್ಗಿಸುವ ಈ ಅನಿಷ್ಟ ಪದ್ಧತಿಯ ಬಗ್ಗೆ ಈ ಮೊದಲು ನಾನೆಲ್ಲೂ ಕೇಳಿರಲಿಲ್ಲ.
" ಮರುಭೂಮಿಯ ಹೂ" ಇಂಗ್ಲೀಷಿನ " ಡೆಸರ್ಟ್ ಫ್ಲವರ್ " ಎಂಬ ಆತ್ಮಕಥನವನ್ನು ಕನ್ನಡಕ್ಕೆ ಅನುವಾದಿಸಲ್ಪಟ್ಟ ಕೃತಿ. "ಕುವೆಂಪು ಭಾಷಾ ಭಾರತಿ " ಬಹುಮಾನ ಪಡೆದ ಕೃತಿಯೂ ಹೌದು. ಹೆಸರೇ ಹೇಳುವಂತೆ ಮರುಭೂಮಿಯ ಗುಡ್ಡಗಾಡು ಪ್ರದೇಶವೊಂದರಲ್ಲಿ ಜನಿಸಿದ ಹೆಣ್ಣೊಬ್ಬಳ ಸಾಹಸಗಾಥೆ. ಕಾಡು ಮೇಡು, ಮರುಭೂಮಿಯ ಬರಡು ಪ್ರದೇಶದಲ್ಲಿ ಕುರಿ ಮೇಕೆ ಒಂಟೆಯನ್ನು ಮೇಯಿಸಿಕೊಂಡಿದ್ದ ಅನಕ್ಷರಸ್ಥ ಸಾಧಾರಣ ಹೆಣ್ಣೊಂದು ಜಗತ್ತೇ ತನ್ನತ್ತ ತಿರುಗಿ ನೋಡುವಂತ ಅಸಾಧಾರಣ ಸಾಹಸ ಮಾಡಿ ತೋರಿದ್ದು ಕಡಿಮೆ ಸಾಧನೆ ಏನಲ್ಲ. ಆಫ್ರಿಕಾದ ಸೊಮಾಲಿಯಾದ ಪುರುಷ ಪ್ರಧಾನ ಬುಡಕಟ್ಟು ಸಮಾಜ ಕೇವಲ ತನ್ನ ಲೈಂಗಿಕ ತೃಷೆಯ ಸಂತೃಪ್ತಿಗಾಗಿ ಜಾರಿಗೆ ತಂದ ಅನಿಷ್ಟ ಪಿಡುಗಿಗೆ ಬಲಿಯಾದ ಎಷ್ಟೋ ಹೆಣ್ಣು ಜೀವಗಳ ಪ್ರತಿನಿಧಿಯಾಗಿ ವಾರಿಸ್ ದನಿ ಎತ್ತುತ್ತಾಳೆ. ಋತುಮತಿ ಆಗುವ ಮೊದಲೇ ಆ ಗುಡ್ಡಗಾಡಿನ ಹೆಣ್ಣುಮಕ್ಕಳ ಯೋನಿಯನ್ನು ಮೊಂಡಾದ, ತುಕ್ಕು ಹಿಡಿದ ಕತ್ತರಿ ಮತ್ತು ಬ್ಲೇಡುಗಳಿಂದ ಕೊಯ್ದು ದಾರದಿಂದ ಹೊಲೆಯುವ ಅವೈಜ್ಞಾನಿಕ ಕ್ರೂರ ಪದ್ಧತಿ ಸೊಮಾಲಿಯಾದ ಬುಡಕಟ್ಟು ಸಮಾಜದಲ್ಲಿತ್ತು. ಸ್ವತಃ ತಾನೇ ಆ ನೀಚ ಪದ್ಧತಿಗೆ ಬಲಿಯಾಗಿ ಅಪಾರ ನೋವು ಅವಮಾನ ಹಿಂಸೆಗಳನ್ನು ಅನುಭವಿಸಿದ ಕಾರಣ ತನ್ನ ಮುಂದಿನ ಪೀಳಿಗೆಯ ಹೆಣ್ಣುಮಕ್ಕಳಿಗೆ ಆ ಬಾದೆ ತಟ್ಟಬಾರದು ಎಂಬ ಸದಾಶಯದಿಂದ ಆ ಪದ್ಧತಿಯ ವಿರುದ್ದ ದನಿ ಎತ್ತಿದಾಗ ವಿಶ್ವಸಂಸ್ಥೆ ಇವಳಿಗೆ ಬೆಂಬಲವಾಗಿ ನಿಂತಿದಲ್ಲದೆ, ಮುಂದೆ ಆಫ್ರಿಕಾದ ಹೆಣ್ಣುಮಕ್ಕಳ ಶಿಕ್ಷಣಕ್ಕಾಗಿ ಅರಿವು ಮೂಡಿಸುವ ಕಾರ್ಯಕ್ರಮಕ್ಕೆ ಈಕೆಯನ್ನು ರಾಯಬಾರಿಯನ್ನಾಗಿಯೂ ಮಾಡುತ್ತದೆ.
ಮೊದಲ ಅಧ್ಯಾಯದಲ್ಲೇ ಅವಳ ಬದುಕಿನ ದಾರುಣತೆಯ ಕಥೆ ಓದಿದಾಗ ಅವಳ ಕಣ್ಮುಂದೆ ಕುಳಿತ ಸಿಂಹ ಅವಳನ್ನು ತಿನ್ನದೆ ಬಿಟ್ಟಿದ್ದು ಮುಂದೆ ಇವಳಿಂದ ಏನನ್ನೋ ಒಳಿತು ಮಾಡಿಸುವ ಸಂಚು ವಿಧಿಯದಾಗಿತ್ತೇನೋ? ಎಂಬ ಭಾವ ಮೂಡಿಸುತ್ತದೆ. ತನ್ನ 5ನೇ ವಯಸ್ಸಿನಿಂದ 26 ನೇ ವಯಸ್ಸಿನವರೆಗೂ ಯೋನಿ ಛೇದದ ಅನಿಷ್ಟ ಕ್ರಿಯೆಯಿಂದಾಗಿ ನೈಸರ್ಗಿಕ ಕ್ರಿಯೆಯಾದ ಮೂತ್ರ ವಿಸರ್ಜನೆ ಮತ್ತು ಋತುಸ್ರಾವದ ಅವಧಿಯಲ್ಲಿ ಆಕೆ ಅನುಭವಿಸಿದ ನರಕ ಯಾತನೆ ಓದುತಿದ್ದರೆ ಮೈ ಮೇಲೆ ಮುಳ್ಳುಗಳು ಏಳುತ್ತವೆ. 13 ನೇ ವಯಸ್ಸಿನಲ್ಲಿ 60 ವರ್ಷದ ವ್ಯಕ್ತಿಯೊಂದಿಗೆ ಆಗುತಿದ್ದ ಮದುವೆಯಿಂದ ತಪ್ಪಿಸಿಕೊಳ್ಳಲು ಮನೆ ಬಿಟ್ಟು ಬರಿಗಾಲಲ್ಲಿ ಅದೂ ಸುಡುವ ಮರುಭೂಮಿಯ ಕೆಂಡದಂತಹ ಮರಳಿನಲ್ಲಿ ಓಡುತ್ತ, ನರಳುತ್ತಾ, ಹಸಿವಿನಿಂದ ಕಂಗಾಲಾಗುತ್ತಲೇ ಇದ್ದರೂ ಕಂಗೆಡದೆ ಗುರಿಮುಟ್ಟಿದ ಅವಳ ಹಠ, ಛಲ ಯಾರಿಗಾದರೂ ಸ್ಪೂರ್ತಿಯಾಗದೆ ಇರದು.
ಬಾಲ್ಯ ಸಹಜ ಆಟ ಪಾಠಗಳಲ್ಲಿ, ಓರಗೆಯವರೊಡನೆ ಆಡಿ ನಲಿಯ ಬೇಕಾದ ಸಮಯದಲ್ಲಿ ಹಾಳು ಹೊಟ್ಟೆ ಪಾಡಿಗಾಗಿ ಕಂಡವರ ಮನೆ ಕಸ ಮುಸರೆ ಮಾಡಿದ ವಾರಿಸ್, ಪ್ರೇಮ ಕಾಮಗಳ ಅರಿವು ಮೂಡೋ ಮುನ್ನವೇ ಸಮಾಜದ ಕಾಮಾಂಧರರ ಕೈಗೆ ಸಿಕ್ಕಿಯೂ ಸಿಕ್ಕದಂತೆ ತಪ್ಪಿಸಿಕೊಳ್ಳೋ ದೌರ್ಭಾಗ್ಯದ ವಾರಿಸ್ ನಮ್ಮ ನಿಮ್ಮ ನಡುವೆ ಅನೇಕರಿರುತ್ತಾರೆ. ಆದ್ರೆ ಆದ ಕೆಟ್ಟ ಅನುಭವಗಳನ್ನೆಲ್ಲಾ ಮೆಟ್ಟಿ, ಹಾದಿಯ ಮೆಟ್ಟಿಲುಗಳನ್ನಾಗಿ ಮಾಡಿಕೊಂಡು ಗೆದ್ದು, ಯಶಸ್ಸಿನ ಶಿಖರ ತಲುಪೋ ತಾಕತ್ತು ಒಬ್ಬ ವಾರಿಸ್ ಗೆ ಮಾತ್ರ ಸಾಧ್ಯವೇನೋ ! ಅವಳದೇ ಮಾತಿನಲ್ಲಿ ಅವಳ ಅನುಭವಗಳನ್ನು ಓದುತ್ತಾ ಹೋದಂತೆ ಕಣ್ಣು ಹನಿಯಿಡುತ್ತದೆ, ಹೃದಯ ಮರುಗುತ್ತದೆ, ವಿವೇಕ ಚಿಂತನೆಗೆ ಬೀಳುತ್ತದೆ. ಅದನ್ನೆಲ್ಲ ಓದಿಯೇ ಅನುಭವಿಸಬೇಕು. ಬೆಳ್ಳಗಿನ ಚರ್ಮದವರಷ್ಟೇ ಆಳುತಿದ್ದ ಮಾಡೆಲಿಂಗ್ ಪ್ರಪಂಚವನ್ನು, ಕರಿ ಇದ್ದಲಿನ ಬಣ್ಣದ ಆಶಿಕ್ಷಿತೆ ವಾರಿಸ್ ಡಿರಿ ಪ್ರವೇಶಿಸಿ ಮಿಂಚಿನ ಸಂಚಲನೆಯನ್ನು ಉಂಟು ಮಾಡಿ ಇತಿಹಾಸ ಸೃಷ್ಟಿಸಿದ್ದು ಕಡಿಮೆ ಸಾಧನೆ ಏನಲ್ಲ !
ಇಂಥಾ ಅದ್ಭುತ ಕೃತಿಯನ್ನು ಕನ್ನಡಕ್ಕೆ ಅನುವಾದಿಸಿಕೊಟ್ಟ ಡಾ. ಎನ್. ಜಗದೀಶ್ ಕೊಪ್ಪ ಅವರಿಗೊಂದು ಸಾಷ್ಟಾಂಗ ಪ್ರಣಾಮಗಳು. ಶ್ರೀಯುತರ ಬರಹ ಅದೆಷ್ಟು ಸೊಗಸಾಗಿದೆ ಎಂದರೆ ಎಲ್ಲೂ ಇದು ಅನುವಾದಿತ ಕೃತಿ ಎಂಬ ಭಾವವನ್ನೇ ಮೂಡಿಸುವುದಿಲ್ಲ. ಸ್ವತಃ ವಾರಿಸ್ ನಮ್ಮೆದುರು ಕುಳಿತು ತನ್ನ ಕಥನವನ್ನು ತೆರೆದಿಡುತಿದ್ದಾಳೇನೋ ಎಂಬಷ್ಟು ಅನನ್ಯವಾಗಿ ಆಕೆಯ ಅನುಭವವನ್ನು ತುಂಬಾ ಸರಳವಾಗಿ ಸಹಜವಾಗಿ ನಮ್ಮೆದುರು ಅನಾವರಣಗೊಳಿಸುತ್ತಾ ಹೋಗುತ್ತಾರೆ. ಅವರು ಹೇಳುವ ಸಣ್ಣ ಸಣ್ಣ ಘಟನೆಗಳೂ ಹೃದಯದ ಕದ ತಟ್ಟಿ ಭಾವುಕಗೊಳಿಸುವ ಕೃತಿಯೂ ಹೌದು. ಧಾರವಾಡದ ಮನೋಹರ ಗ್ರಂಥ ಮಾಲಾ ದ ಪ್ರಕಟಣೆಯಾದ ಈ ಪುಸ್ತಕದ ಬೆಲೆ ಕೇವಲ 140 ರೂಗಳು. ಎಲ್ಲರೂ ಓದಲೇ ಬೇಕಾದ ಕೃತಿ ಅನಿಸಿತು. ನಿಮ್ಮೊಂದಿಗೆ ಹಂಚಿಕೊಂಡೆ. ಓದುವ ಸುಖ ನಿಮ್ಮದಾಗಲಿ
-ಸಿನಿ
..................................................................................................
ಬಿಸಿಲುಗುದುರೆಯ ಹಾದಿಯಲ್ಲಿ ಮರುಭೂಮಿಯ ಹೂ- ಹಾಫಿಲ್ ನಈಮಿ-ವಾರ್ತಾಭಾರತಿ
©2024 Book Brahma Private Limited.