ವಿಶ್ವ ಮಹಿಳಾ ದಿನದ ರೂವಾರಿ ಕ್ಲಾರಾ ಜ್ಹೆಟ್ಕಿನ್ ಅವರ ಆತ್ಮಕಥೆಯನ್ನು ಲೇಖಕಿ ಎನ್. ಗಾಯತ್ರಿ ಕನ್ನಡಕ್ಕೆ ಅನುವಾದಿಸಿದ್ದಾರೆ. ಜಗತ್ತಿನಲ್ಲಿ ಹಿಂದೆ ನಡೆದಿರುವ, ಈಗ ನಡೆಯುತ್ತಿರುವ ಮತ್ತು ಮುಂದೆ ನಡೆಯುವ ಎಲ್ಲ ಬೆಳವಣಿಗೆಗಳನ್ನೂ ಯಾರು ಹೇಗಾದರೂ ವ್ಯಾಖ್ಯಾನ ಮಾಡಲಿ, ಅವುಗಳನ್ನು ಹೆಣ್ಣಿನ ದೃಷ್ಟಿಕೋನದಿಂದ ನೋಡಿದರೆ ಎಲ್ಲವೂ ಬೇರೆ ರೀತಿಯಲ್ಲೇ ಕಾಣುತ್ತವೆ. ಹಾಗೆ ನೋಡಬಹುದು, ನೋಡಲೇಬೇಕು ಎಂದು ಮಾನವ ಜನಾಂಗವನ್ನು ಒತ್ತಾಯಿಸಿದವಳು ಕ್ಲಾರಾ ಜ್ಹೆಟ್ಕಿನ್ ಎಂಬ ಗಟ್ಟಿಗಿತ್ತಿ.
ಜಗತ್ತಿನ ಮೇಲೆ ಗಾಢ ಪ್ರಭಾವ ಬೀರಿದ ಚಿಂತಕರ ಸಾಲಿನಲ್ಲಿ ಕ್ಲಾರಾ ಜ್ಹೆಟ್ಕಿನ್ ಅವರಿಗೆ ಗೌರವದ ಸ್ಥಾನವಿದೆ. “ವಿಶ್ವ ಮಹಿಳಾ ದಿನಾಚರಣೆ' ಪರಿಕಲ್ಪನೆಯನ್ನು ಜಗತ್ತಿನ ಮುಂದಿಟ್ಟ ಕ್ಲಾರಾ ಜ್ಹೆಟ್ಕಿನ್, ಅದರ ಅನುಷ್ಠಾನಕ್ಕಾಗಿ ನಡೆಸಿದ ಹೋರಾಟವಂತೂ ಸರ್ವಕಾಲಕ್ಕೂ ಸ್ಫೂರ್ತಿದಾಯಕ,
ಮಹಿಳಾ ಪ್ರಶ್ನೆಗೆ ಅವಳು ಬೌದ್ದಿಕವಾಗಿ ಮತ್ತು ಸಂಘಟನಾತ್ಮಕವಾಗಿ ಉತ್ತರಗಳನ್ನು ಶೋಧಿಸಿದ ಬಗೆಯೇ ಅದ್ಭುತ, ಎರಡು ಮಾರ್ಗಗಳೂ ಒಂದೆಡೆ ಇರಲು ಸಾಧ್ಯವಿಲ್ಲ ಎಂದು ಅವಳು ನಂಬಲಿಲ್ಲ. ಬದಲಿಗೆ ಒಂದು ಇನ್ನೊಂದನ್ನು ರೂಪಿಸುತ್ತದೆ ಎಂದು ತೋರಿಸಿದಳು. ಇಂಥ ಕ್ಲಾರಾ ಜ್ಹೆಟ್ಕಿನ್ ಕುರಿತು ಲೇಖಕಿ ಎನ್. ಗಾಯತ್ರಿ ಬಹಳ ಆಪ್ತವಾಗಿ ಬರೆದಿರುವ ಈ ಪುಸ್ತಕ, ಅಂತಹ ಅಗತ್ಯವನ್ನು ಪೂರೈಸಿದೆ. ಸಮಗ್ರವೆನ್ನಿಸುವಷ್ಟು ಮಾಹಿತಿ ಮತ್ತು ಅದರ ಸುಸ್ಪಷ್ಟ ವಿಶ್ಲೇಷಣೆ ಇಲ್ಲಿ ಎದ್ದು ಕಾಣುತ್ತವೆ. ದೀರ್ಘಕಾಲದ ಹೋರಾಟಗಳ ಮೂಲಕ ಗಳಿಸಿಕೊಂಡ ಪ್ರತಿಯೊಂದು ಹಕ್ಕು, ಬೀಸುತ್ತಿರುವ ಜಾಗತೀಕರಣದ ಬಿರುಗಾಳಿಯಲ್ಲಿ ಅಪಹಾಸ್ಯಕ್ಕೆ ಈಡಾಗುತ್ತಿರುವ ಈ ಸಂದರ್ಭದಲ್ಲಿ, ಕ್ಲಾರಾ ಜ್ಹೆಟ್ಕಿನ್ ಚಿಂತನೆ ಮತ್ತೆ ಮಾರ್ಗದರ್ಶನ ಮಾಡಬಲ್ಲುದು ಎಂದು ಲೇಖಕಿ ಅಭಿಪ್ರಾಯಪಡುತ್ತಾರೆ. ವ್ಯವಸ್ಥೆಯಲ್ಲಿ ಅಸಮಾನತೆಗೆ ಕಾರಣ; ಕಾಲಕ್ಕೆ ತಕ್ಕಂತೆ ಪರಿಭಾಷೆ, ಪರಿವೇಷಗಳು ಬದಲಾದರೂ, ಅದಕ್ಕೆ ಪರಿಹಾರ ಮಾತ್ರ ಕ್ಲಾರಾ ಜ್ಹೆಟ್ಕಿನ್ ನಂಬಿದ ಮತ್ತು ಅನುಸರಿಸಿದ ವಿಧಾನದಲ್ಲೇ ಇರುತ್ತದೆ.
©2024 Book Brahma Private Limited.