ಲೇಖಕ ಸರಜೂ ಕಾಟ್ಕರ್ ಅವರ ಅನುವಾದಿತ ಕೃತಿ-ವಾಲ್ಮೀಕಿ. ಡಾ. ಭೀಮರಾವ್ ಗಸ್ತಿ ಎಂಬುವರ ಆತ್ಮಕಥೆ ಇದು. ಮರಾಠಿಯ ’ಬೇರಡ’ ವನ್ನು ಕನ್ನಡಕ್ಕೆ ‘ವಾಲ್ಮೀಕಿ’ ಎಂದು ಅನುವಾದಿಸಿದ್ದಾರೆ. ಸರಜೂ ಕಾಟ್ಕರ್ ಹೇಳುವಂತೆ ಈ ಎಲ್ಲ ಆತ್ಮಕಥೆಗಳ ಸ್ಥಾಯೀಭಾವ ಆಕ್ರೋಶವಿದ್ದರೂ, ಅವೆಲ್ಲವುಗಳೂ ಪ್ರಾಮಾಣಿಕವಾಗಿವೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿವೆ. ಡಾ. ಭೀಮರಾವ್ ಅವರು ಮಹಾರಾಷ್ಟ್ರದಲ್ಲಿ ಬೇಡರ ಸಮೂದಾಯದ ಅಭಿವೃದ್ಧಿಗಾಗಿ ಹೋರಾಟ ಮಾಡಿದ ನಾಯಕರು. ಕರ್ನಾಟಕದ ಬೆಳಗಾವಿಯಿಂದ ಕೇವಲ 6 ಕಿ.ಮೀ. ದೂರದ ಯಮನೂರು ಎಂಬ ಗ್ರಾಮದವರು. ಹೀಗಾಗಿ ಮಹಾರಾಷ್ಟ್ರ ಹಾಗೂ ಕರ್ನಾಟಕದಲ್ಲಿಯ ಬೇಡರ ಸಮೂದಾಯದ ಅಭಿವೃದ್ಧಿಗಾಗಿ ಸಂಘಟನೆಗಳ ಮೂಲಕ ಹೋರಾಟ ಮಾಡಿ ಸಮಾಜ ಚಿಂತಕರೆನಿಸಿಕೊಂಡವರು. ನಾವು ಅಪರಾಧಿ ಜನರಲ್ಲ, ನಾವು ಪ್ರಾಮಾಣಿಕರಾಗಿ ದುಡಿದು ತಿಂದರೆ ನಮ್ಮನ್ನು ಮುಟ್ಟಲು ಯಾರಿಂದಲೂ ಸಾಧ್ಯವಿಲ್ಲ’ ಎಂದು ಬೇಡ ಬೇಡ ಜನಾಂಗಕ್ಕೆ ಧೈರ್ಯ ತುಂಬುತ್ತಾರೆ ಗಸ್ತಿಯವರು. ಬೇಡರಲ್ಲಿ ಆತ್ಮವಿಶ್ವಾಸವನ್ನೂ, ನೈತಿಕ ಧೈರ್ಯವನ್ನೂ ಕಾಯಕ ನಿಷ್ಠೆಯನ್ನೂ ತುಂಬಲು ಅವರು ಬಹಳ ಶ್ರಮಪಡಬೇಕಾಯಿತು. ಅವಮಾನಕ್ಕೆ ಒಳಗಾದ ಜನಾಂಗದ ನೋವು ಸಂಕಟ, ಸಿಟ್ಟು ಇಂದು ನಿನ್ನೆಯದಲ್ಲ, ನಾಳೆ ಮುಗಿಯುವುದೆಂಬ ನೆಚ್ಚಿಕೆಯಿಲ್ಲ. ಆದರೂ ಪ್ರಯತ್ನ ಮಾಡಬೇಕು; ಈ ಪ್ರಕ್ರಿಯೆ ನಿರಂತರ ಎಂಬುದು ಡಾ. ಭೀಮರಾವ್ ಗಸ್ತಿಯವರ ನಂಬಿಕೆ. ‘ವಾಲ್ಮೀಕಿ’ ಆಥ್ಮಕಥನದ ಮುಕ್ತಾಯ ಇದನ್ನೇ ತಿಳಿಸುತ್ತದೆ. 2017ರ ಆಗಸ್ಟ್ 8 ರಂದು ಅವರು ನಿಧನರಾದರು. ಈ ನಾಯಕನ ಬದುಕು ಹಾಗೂ ಹೋರಾಟದ ಸಾಧನೆ, ಸಾಮಾಜಿಕ ಚಿಂತನೆಗಳನ್ನು ಕಟ್ಟಿಕೊಡುವ ಕೃತಿ ಇದಾಗಿದೆ.
©2024 Book Brahma Private Limited.