‘ಶಿಕ್ಷಣ ಸಂಸ್ಕೃತಿ’ ಪ್ರಾ. ಲಿಂ. ವ್ಹಿ.ಡಿ. ರಾಚನಾಯ್ಕರ ಸಂಸ್ಮರಣ ಸಂಪುಟ ಕೃತಿಯು ಡಾ.ಎ.ವ್ಹಿ.ಕರಬಸವಗೌಡ್ರ ಹಾಗು ಪ್ರಕಾಶ ಗಿರಿಮಲ್ಲನವರ ಅವರ ಸಂಪಾದಿತ ಕೃತಿಯಾಗಿದೆ. ಈ ಕೃತಿಯಲ್ಲಿನ ಕೆಲವೊಂದು ವಿಚಾರಗಳು ಹೀಗಿವೆ; 'ಬಹುಜನ ಹಿತಾಯ, ಬಹುಜನ ಸುಖಾಯ' ಎಂಬಂತೆ ಬದುಕಿದ ಪ್ರಾಚಾರ್ಯ ಶ್ರೀ ವೀರನಾಯ್ಕ ರಾಚನಾಯ್ಕರ ಅವರು ನಮ್ಮ ದಿನಮಾನದ ಶ್ರೇಷ್ಠ ಚಿಂತಕರು, ವೃತ್ತಿಯಿಂದ ಶಿಕ್ಷಕರು, ಪ್ರವೃತ್ತಿಯಿಂದ ಶರಣಸಂಸ್ಕೃತಿಯ ಪರಿಚಾರಕರು. ಮುಖ್ಯಾಧ್ಯಾಪಕರಾಗಿ, ಪ್ರಾಚಾರ್ಯರಾಗಿ ಅನುಕರಣೀಯ ಸೇವೆ ಸಲ್ಲಿಸಿದ ಅವರು ವಿದ್ಯಾರ್ಥಿವೃಂದಕ್ಕೆ ಪ್ರಿಯರು. ಅಧ್ಯಾಪಕವೃಂದಕ್ಕೆ ಆದರ್ಶಪ್ರಾಯರು. ಶರಣ ಸಾಹಿತ್ಯ ಪರಿಷತ್ತಿನ ಬೆಳಗಾವಿ ಘಟಕದ ಅಧ್ಯಕ್ಷರಾಗಿ ಸ್ಮರಣೀಯ ಕಾರ್ಯ ಮಾಡಿದ ಅವರು ನಮ್ಮ ಸಿದ್ಧರಾಮೇಶ್ವರ ಶಿಕ್ಷಣ ಸಂಸ್ಥೆಯ ಹಲವು ಅಂಗಸಂಸ್ಥೆಗಳ ಅಭಿವೃದ್ಧಿಯ ರೂವಾರಿಗಳು, ಅವರು ಸತತ ಸಾಧನೆಯ ಸಾತ್ವಿಕ ವ್ಯಕ್ತಿ, ಪರಿಣಾಮಕಾರಿ ಬೋಧನೆಯ ವೈಚಾರಿಕ ಶಕ್ತಿ. ಶ್ರೀ. ವ್ಹಿ. ಡಿ. ರಾಚನಾಯ್ಕರ ಅವರು ಊಟ, ಉಡಿಗೆ-ತೊಡಿಗೆ, ನಡೆ ನುಡಿ ಎಲ್ಲದರಲ್ಲಿಯೂ ಸರಳಜೀವಿ. ಹಾಗೆಯೇ ಅವರೊಬ್ಬ ಅಪ್ಪಟ ಸ್ನೇಹಜೀವಿ, ಮರೆಯಲಾಗದ ಮಹಾನುಭಾವಿ. ಅವರದು ಎತ್ತರದ ನಿಲುವು, ಗಂಭೀರ ಮುಖಮುದ್ರೆ. ಆ ಮುಖಮುದ್ರೆಯಲ್ಲಿ ಅರಳದ ಹೂನಗೆ ನೋಡಲು ಅತ್ಯಾಕರ್ಷಕ ಹೊರಗೆ ಕಾಯಕನಿಷ್ಠೆ ಲೋಕಾಂತದ ದುಡಿತ, ಒಳಗೆ ತಾತ್ವಿಕ ಚಿಂತನೆ ಏಕಾಂತದ ಮಿಡಿತ. ಅವರು ನಯ-ವಿನಯ, ಶಿಸ್ತು ಸೌಜನ್ಯಗಳ ಸಾಕಾರಮೂರ್ತಿ, ನಿಷ್ಕಳಂಕ ಬದುಕಿನ ಧವಳಕೀರ್ತಿ. ಬದುಕಿನುದ್ದಕ್ಕೂ ದಣಿವರಿಯದೇ ದುಡಿದ ಶ್ರೀ ವಿ. ಡಿ. ರಾಚನಾಯ್ಕರ ಎಲೆಯ ಮರೆಯ ಹೂವಿನಂತಿದ್ದರೂ ಎಲ್ಲೆಡೆ ಶಿಕ್ಷಣ ಸಂಸ್ಕೃತಿಯ ಪರಿಮಳ ಸೂಸಿದವರು. ತ್ಯಾಗ, ಸೇವೆ, ಪರಿಶ್ರಮದಿಂದ ತಾವು ಹುಟ್ಟದ ಸಮಾಜ ಮತ್ತು ನಾಡಿಗೆ ಗೌರವ ತಂದವರು. 'ಶಿಕ್ಷಣ ಸಂಸ್ಕೃತಿ' ಸಂಸ್ಮರಣ ಸಂಪುಟವು ಅವರ ಪುಣ್ಯಸ್ಮರಣಕ್ಕೆ ಸಮರ್ಪಿತ ಹೊನ್ನಕಿರಣ. ಇದು ಅವರ ವೃತ್ತಿ-ಪ್ರವೃತ್ತಿಗಳ ಸಮ್ಮಿಶ್ರಣ. ಇದರಲ್ಲಿದೆ ಅವರ ಸಾತ್ವಿಕ ಬದುಕಿನ ಅನಾವರಣ ಎಂದು ಈ ಕೃತಿಯಲ್ಲಿದೆ.
©2024 Book Brahma Private Limited.