ಶಾಂತವೇರಿ ಗೋಪಾಲಗೌಡ; ನೆನಪಿನ ಸಂಪುಟವು 1997ರಲ್ಲಿ ಹಾಗೂ 2010 ರಲ್ಲಿ ಮುದ್ರಣ ಕಂಡಿದೆ. ಕನ್ನಡ ವಿ.ವಿ. ಕುಲಪತಿ ಡಾ. ಮಲ್ಲಿಕಾ ಘಂಟಿ ಈ ಕೃತಿಯ ಕುರಿತು ’ಭಾರತಕ್ಕೆ ಲೋಹಿಯಾ, ಕರ್ನಾಟಕಕ್ಕೆ ಶಾಂತವೇರಿ ಗೋಪಾಲಗೌಡರು. ಈ ಇಬ್ಬರೂ ಗಾಂಧೀಜಿಯ ಸಮಾಜವಾದಿ ಪ್ರಭಾವಕ್ಕೆ ಒಳಗಾಗಿದ್ದರೂ ದೇಶಾದ್ಯಂತ ಬೀರಿದ್ದು ಬೇರೆ ಬೇರೆ ಬೆಳಕಾಗಿ. ಗಾಂಧೀಜಿಯ ಚಿಂತನೆಯ ಪುನರ್ ಸೃಷ್ಟಿಯ ರೂಪವಾದ ಸಮಾಜವಾದವು ಒಂದು ಸೈದ್ಧಾಂತಿಕ ತಿಳಿವಳಿಕೆಯಾಗಿ ಗಟ್ಟಿಗೊಂಡಿದ್ದು ಸ್ಥಳೀಯ ಹೋರಾಟಗಳಿಂದ ಎಂಬುದನ್ನು ಮರೆಯುವಂತಿಲ್ಲ. ಅಂತಹ ಸ್ಥಳೀಯ ಹೋರಾಟದ ಸಂಕಥನ ರೂಪದಲ್ಲಿನಮಗೆ ಶಾಂತವೇರಿ ಗೋಪಾಲಗೌಡರು ಇದ್ದಾರೆ’ ಎನ್ನುವ ಮೂಲಕ ಅವರ ಚಿಂತನೆ-ಹೋರಾಟಗಳು ಇಂದಿಗೂ ಮಾದರಿ ಎಂದು, ಕೃತಿಯ ಮಹತ್ವ ಹೆಚ್ಚಿಸಿದ್ದಾರೆ.
ಗೋಪಾಲಗೌಡರ ಹೋರಾಟದಲ್ಲಿ ಭಾಗವಹಿಸಿ ದುಡಿದ ಕಾರ್ಯಕರ್ತರು, ಗೆಳೆಯರು, ರಾಜಕಾರಣಿಗಳು, ಲೇಖಕರು, ಕಲಾವಿದರು, ತಂತಮ್ಮ ಮನಸ್ಸುಗಳಲ್ಲಿ ತುಂಬಿಕೊಂಡ ಶಾಂತವೇರಿ ಅವರ ವ್ಯಕ್ತಿತ್ವವನ್ನು ತಾವು ಕಂಡಂತೆ ನೆನಪುಗಳ ಮೂಲಕ ಇಲ್ಲಿ ದಾಖಲಿಸಿದ್ದಾರೆ. ಸುಮಾರು ೩ ದಶಕಗಳಿಗಿಂತಲೂ ಹೆಚ್ಚಿನ ಅವಧಿಯಲ್ಲಿ ನಾಡಿನ ಸಾಂಸ್ಕೃತಿಕ ಜೀವನವನ್ನು ಆವರಿಸಿಕೊಂಡಿದ್ದ ಗೋಪಾಲಗೌಡರ ವ್ಯಕ್ತಿತ್ವದ ವಿವಿಧ ಮುಖಗಳು ಈ ಗ್ರಂಥದಲ್ಲಿ ವಿವರವಾಗಿ ಚಿತ್ರಿಸಲ್ಪಟ್ಟಿದೆ. ಗೋಪಾಲ ಗೌಡರು, ಶಾಸಕರಾಗಿದ್ದ ಅವಧಿಯ ಭಾಷಣಗಳ ಮುಖ್ಯ ಭಾಗಗಳು, ಅವರ ಎರಡು ಲೇಖನಗಳು,1960 ನೇ ವರ್ಷದ ದಿನಚರಿಯ ಕೆಲವು ಪುಟಗಳೂ ಈ ಗ್ರಂಥದಲ್ಲಿವೆ.
©2024 Book Brahma Private Limited.