‘ಕಮ್ಮಟಿಗ’ ಕೃತಿಯು ಕೃಷ್ಣಾನಂದ ಕಾಮತ್ ಅವರ ಸಂಸ್ಮರಣಾ ಸಂಪುಟವಾಗಿದೆ. ಈ ಕೃತಿಯು 5 ಅಧ್ಯಾಯಗಳನ್ನು ಒಳಗೊಂಡಿದ್ದು, ಡಾ. ಕೃಷ್ಣಾನಂದ ಕಾಮತರನ್ನು ಕುರಿತು ಅಧ್ಯಯನದಡಿ, ಕೃಷ್ಣಾನಂದ ಕಾಮತರ ವರ್ಣಮಯ ವ್ಯಕ್ತಿತ್ವ (ಜಿ. ಎಸ್ ದೀಕ್ಷಿತ್), ಕೃಷ್ಣಾನಂದರ ಗುಜರಿ ಗುತ್ತಿಗೆ (ಡಾ. ಗೌರೀಶ ಕಾಯ್ಕಿಣಿ), ಕಾಮತರ ಮರುಪಯಣ ( ಕೀರ್ತಿನಾಥ ಕುರ್ತಕೋಟಿ), ಕೆ. ಎಲ್. ಕಾಮತ/ ಕೃಷ್ಣಾನಂದ ಕಾಮತ (ಡಾ. ಜಿ.ಎಸ್ ಆಮೂರ), ತಮಗೆ ತಾವೇ ಮಾದರಿ ಹೀಗೆ ಅನೇಕ ಅಧ್ಯಾಯಗಳನ್ನು ಒಳಗೊಂಡಿದೆ.
ಕೃತಿಯ ಹಿನ್ನೆಲೆಯಲ್ಲಿ ಕೆಲವೊಂದು ವಿಚಾರಗಳು ಹೀಗಿವೆ :ಡಾ. ಕೃಷ್ಣಾನಂದ ಕಾಮತ್ (1934-2002) ಕನ್ನಡ ನಾಡು ಕಂಡ ಅಪೂರ್ವ ಪ್ರತಿಭೆ, ಅಪ್ಪಟ ಮನುಷ್ಯರು, ಸಂಶೋಧಕರು, ಕಾಲುಗಳಿಗೆ ಚಕ್ರ ಕಟ್ಟಿಕೊಂಡು ಸುತ್ತಿದ ಅಪರೂಪದ ಕ್ಷೇತ್ರಕಾರ್ಯಕರ್ತರು, ಸೃಜನಶೀಲ ಬರಹಗಾರರು, ಅಪೂರ್ವ ಕಲಾವಿದರು. ಛಾಯಾಗ್ರಾಹಕರು, ಪ್ರಾಣಿ-ಪಕ್ಷಿಗಳ ತಜ್ಞರು, ಒಬ್ಬ ವಿಜ್ಞಾನಿ, ಪಾಕಪ್ರವೀಣರು... ಹೀಗೆ ಬಹು ಆಯಾಮಗಳಲ್ಲಿ ತಮ್ಮ ಜೀವಿತಾವಧಿಯನ್ನು ಸವೆಸಿದ ಅನರ್ಘ್ಯ ರತ್ನ. ಕಾಮತರ ಯಾವುದೇ ಬರವಣಿಗೆಯಲ್ಲೂ ಒಬ್ಬ ಸಂಶೋಧಕನಿರುತ್ತಾನೆ. ಬರಹದ ವಿಷಯ ವಸ್ತು ವಿಚಾರದಲ್ಲಿ ತರ್ಕಬದ್ಧವಾದ, ವೈಜ್ಞಾನಿಕ ದೃಷ್ಟಿಕೋನ ಎದ್ದು ಕಾಣುವ ಅಂಶ. ಲಘು ಹರಟೆಯ ಅವರ ಧಾಟಿ ಓದುಗ ಸ್ನೇಹಿಯಾಗಿರುತ್ತದೆ. ತುಂಬಾ ಗಹನವಾದ ವಿಚಾರಗಳನ್ನು ಸಾಮಾನ್ಯರಿಗೂ ಅರ್ಥವಾಗುವ ಹಾಗೆ ಸರಳ ನಿರೂಪಣೆಯನ್ನು ಕಾಣಬಹುದು. ಹಾಸ್ಯದ ಮೂಲಕವೇ ಗಂಭೀರ ವಿಚಾರಗಳನ್ನು ತಿಳಿಹೇಳುವ ಛಾತಿ ಕೃಷ್ಣಾನಂದ ಕಾಮತರ ಲೇಖನಿ, ಕುಂಚ, ಕ್ಯಾಮೆರಾಗಳಿಗೆ ಇತ್ತು ಎಂಬುದನ್ನು ಅವರನ್ನು ಓದಿಕೊಂಡ ಯಾರಿಗಾದರೂ ಅನಿಸದಿರದು. ಭಾರತದ ಆದಿವಾಸಿ ಬದುಕಿನ ಅನೇಕ ಮಜಲುಗಳನ್ನು ಕಣ್ಣಾರೆ ಕಂಡು ಕಾಮತರು ಬಿಡಿಸಿಟ್ಟಿದ್ದಾರೆ. ಕನ್ನಡ ನಾಡು ಇಂತಹ ಮಹನೀಯರನ್ನು ಪಡೆದು ನಿಜಕ್ಕೂ ಧನ್ಯವಾಗಿದೆ. ಇದು ಕಾಮತರು ಬಿಡಿಸಿಟ್ಟು ಅಲ್ಲಲ್ಲಿ ಚದುರಿಹೋಗಿದ್ದ ರೇಖಾಚಿತ್ರಗಳನ್ನು ಒಂದೆಡೆ ಕಲೆಹಾಕಿ ಸಂಕಲನದ ರೂಪದಲ್ಲಿ ಸಹೃದಯರ ಕೈಲಿಡುತ್ತಿದ್ದೇವೆ. ಈ ಕೃತಿಯ ಮೂಲಕ ಕಾಮತರ ಆಸಕ್ತಿಯ ಕ್ಷೇತ್ರಗಳ ದರ್ಶನವಾಗುತ್ತದೆ. ಇಲ್ಲಿ ಬುಡಕಟ್ಟು ಲೋಕವಿದೆ. ಗ್ರಾಮೀಣ ಪರಿಸರದ ಬುದಕು-ಬವಣೆಗಳು ಅನಾವರಣಗೊಂಡಿವೆ. ಅವರ ಈ ಕೃತಿಯನ್ನು ಹೊರತರುವಲ್ಲಿ ಪ್ರಗತಿ ಗ್ರಾಫಿಕ್ಸ್‌ಗೆ ಅತೀವ ಆನಂದವೆನಿಸಿದೆ. ಇದು ಕಾಮತರ ರೇಖಾಚಿತ್ರಗಳ ಮೊದಲ ಸಂಪುಟ, ಮತ್ತೊಂದು ಸಂಪುಟವನ್ನು ಹೊರತರಲು ಪ್ರಗತಿ ಗ್ರಾಫಿಕ್ಸ್ ಕಾತರವಾಗಿದೆ ’ ಎಂದು ವಿಶ್ಲೇಷಿಸಲಾಗಿದೆ.
©2024 Book Brahma Private Limited.