ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಕರ್ನಾಟಕಕ್ಕೆ ಒಂದೆಡೆ ಆಘಾತ ಉಂಟು ಮಾಡಿತು. ಜೊತೆಗೆ ಚದುರಿ ಹೋಗಿದ್ದ ಯುವಜನರನ್ನು ಒಟ್ಟಿಗೆ ಸೇರಿಸಲು ಕಾರಣವಾಯಿತು. ಆಕೆಯ ಹತ್ಯೆಯನ್ನು ಕಂಡು ಮರುಗಿದವರು ದೊಡ್ಡ ಸಂಖ್ಯೆಯಲ್ಲಿದ್ದರು. ’ನಾನು ಗೌರಿ- ನಾವು ಗೌರಿ’ ಎಂಬ ಘೋಷಣೆಗಳು ಮೊಳಗಿದವು. ಗೌರಿ ಲಂಕೇಶ್ ಬಗ್ಗೆ ಅನೇಕರು ಬರೆದರು. ನೆನಪುಗಳನ್ನು ಹಂಚಿಕೊಂಡರು. ಅವುಗಳನ್ನೆಲ್ಲ ಒಂದೆಡೆ ಸೇರಿಸಿ ಲಡಾಯಿ ಪ್ರಕಾಶನ ’ಗೌರಿ ನೊಟ’ ಎಂಬ ಕೃತಿ ಹೊರತಂದಿದೆ. ಪ್ರಕಾಶಕ ಬಸು ಮತ್ತು ಲೇಖಕ ಪಂಪಾರೆಡ್ಡಿ ಅರಳಹಳ್ಳಿ ಕೃತಿಯನ್ನು ಸಂಪಾದಿಸಿದ್ದಾರೆ.
ಸಹೋದರಿ ಕವಿತಾ ಲಂಕೇಶರ ಕವಿತೆ, ತಾಯಿ ಇಂದಿರಾ ಅವರ ಲೇಖನ, ಗೌರಿ ಅವರನ್ನು ಪ್ರೀತಿಸಿ ಮದುವೆಯಾಗಿದ್ದ ಪತ್ರಕರ್ತ ಚಿದಾನಂದ ರಾಜಘಟ್ಟ ಅವರ ’ಇತಿಹಾಸವಾದ ರೆಬೆಲ್ ಹುಡುಗಿ' ಎಂಬ ಕಾಡುವ ಲೇಖನಗಳು ಭಾವನಾತ್ಮಕವಾಗಿ ಕಲಕುತ್ತವೆ. ಮತ್ತೊಂದೆಡೆ ಚಿಂತಕರಾದ ಶ್ರೀನಿವಾಸ ಕಾರ್ಕಳ, ಯೋಗೇಶ್ ಮಾಸ್ಟರ್, ದಿನೇಶ್ ಅಮೀನ್ ಮಟ್ಟು ಮೊದಲಾದವರು ಗೌರಿ ಕುರಿತ ಒಡನಾಟವನ್ನು ಹಂಚಿಕೊಂಡಿದ್ದಾರೆ.
ಎರಡನೇ ಅಧ್ಯಾಯ ಗೌರಿ ಹತ್ಯೆಯನ್ನೇ ಕೇಂದ್ರೀಕರಿಸಿ ಸಂಪಾದಿಸಿದ ಲೇಖನಗಳಿಂದ ಕೂಡಿದೆ. ಹತ್ಯೆ ಕುರಿತಂತೆ ವಿವಿಧ ಲೇಖಕರ ಸ್ಪಂದನ, ಇಂಗ್ಲಿಷ್ ಬರಹಗಳ ಭಾವಾನುವಾದ ಇದೆ. ನಾಲ್ಕನೇ ಅಧ್ಯಾಯ ಸಂಪೂರ್ಣ ಗೌರಿ ಅವರನ್ನು ಕುರಿತ ಪದ್ಯಗಳಿಗೆ ಮೀಸಲು. ಜೀವಪರತೆಯ ಹೊಳೆಯೇ ಕೃತಿಯ ಉದ್ದಕ್ಕೂ ಹರಿದಿದೆ.
©2025 Book Brahma Private Limited.