‘ಯಕ್ಷಬ್ರಹ್ಮ’ ಕೃತಿಯು ಉಜಿರೆ ಅಶೋಕ ಭಟ್ ಸಂಪಾದಿಸಿರುವ ಅಗರಿ ಸ್ಮೃತಿಗೌರವ ಗ್ರಂಥವಾಗಿದೆ. ಈ ಕೃತಿಗೆ ಬೆನ್ನುಡಿ ಬರೆದಿರುವ ಕುರಿಯ ವಿಠಲಶಾಸ್ತ್ರೀ ಅವರು, ಪೂಜ್ಯ ಹೆಗ್ಗಡೆಯವರ ಅನುಗ್ರಹದೊಂದಿಗೆ ಪ್ರಥಮ ಬಾರಿಗೆ ತೆಂಕಣದ ಧರ್ಮಸ್ಥಳ ಮೇಳ ಉಡುಪಿಯನ್ನು ದಾಟಿ ಉತ್ತರಕನ್ನಡಕ್ಕೆ ಸೀಮೋಲ್ಲಂಘನ ಮಾಡಿದ್ದು ದಾಖಲೆ. ನನ್ನ ಸೃಜನಶೀಲ ಚಿಂತನೆಗಳಿಗೆ ಇಂಬುಕೊಟ್ಟು ಹಾಡಿ, ನೃತ್ಯಾಭಿನವ, ಹಾವ-ಭಾವ-ರಸ ಪ್ರತಿಪಾದನೆಗಳಿಗೆ ಅಗರಿ ಅವರ ಭಾಗವತಿಕೆಯೂ, ನೆಡ್ಳೆಯವರ ಹಿಮ್ಮೇಳವೂ ಇಲ್ಲದಿರುತ್ತಿದ್ದರೆ ನಾನು ಇಷ್ಟೆಲ್ಲ ಸಾಧಿಸಲು ಸಾಧ್ಯವಾಗುತ್ತಿರಲಿಲ್ಲ ಎಂದಿದ್ದಾರೆ. ಶೇಣಿ ಗೋಪಾಲಕೃಷ್ಣ ಅವರು ಕೃತಿಯ ಕುರಿತು, ಯಕ್ಷಗಾನ ತತ್ವವನ್ನೂ ಎಳ್ಳಿನಷ್ಟೂ ಬಿಡದೆ, ಸತ್ವವಾಗಿಸಿ ತನ್ನದೇ ಆದ ಕೊಡುಗೆಯಾಗಿ, ಪ್ರತ್ಯಕ್ಷಕ್ಕೆ ಭಿನ್ನವಾಗಿಯೂ ತತ್ವದರ್ಶನಕ್ಕೆ ಅದ್ವೈತವಾಗಿಯೂ ಇದ್ದ ‘ಅಗರಿ ಶೈಲಿ’ ಅದ್ವಿತೀಯವೂ ಆನಂದದಾಯಕವೂ ಆಗಿತ್ತೆಂಬ ಸ್ಮರಣೆ ಅರ್ಧಶತಮಾನದ ನಂತರವೂ ಉಳಿದಿದೆ, ಬೆಳೆದಿದೆ ಎಂದರೆ ಆ ಹಾಡುಗಾರಿಕೆಯ ಮೋಡಿ ಹೇಗಿರಬೇಕು? ಕಾವ್ಯಧಾರೆಯೇ ಲಕ್ಷಣ-ಲಕ್ಷಣಯುಕ್ತವಾಗಿ ಸಾಗಿ ಬಂದುದರಿಂದ ಉತ್ತಮ ಕಾವ್ಯವೆಂದು ಸಾಹಿತ್ಯ ಪ್ರಪಂಚದಲ್ಲಿ ಅಂಗೀಕರಿಸಲ್ಪಟ್ಟು ಅಗರಿ ಭಾಗವತರಲ್ಲಿ ಕವಿಯೂ ಪ್ರತ್ಯಕ್ಷನಾಗಿದ್ದಾನೆ! ‘ಸವಿಯನು ಶಬ್ದಿಸಲಾಗದು ಸವಿದೇ ನೋಡಬೇಕು.’ ಎನ್ನುತ್ತಾರೆ.
©2025 Book Brahma Private Limited.