‘ಅಮರ ಚಿಂತನ’ ಈರಣ್ಣ ಬೆಂಗಾಲಿಯವರ ಕೃತಿಯಾಗಿದೆ. ಇದಕ್ಕೆ ರಹಮತ್ ತರೀಕೆರೆ ಅವರ ಬೆನ್ನುಡಿ ಬರಹವಿದೆ; ನಮಗೆಲ್ಲ ಪ್ರಿಯರಾಗಿದ್ದ ಜಂಬಣ್ಣ ಅಮರಚಿಂತ ಅವರ ಮೇಲೆ ಈರಣ್ಣ ಬೆಂಗಾಲಿ ಅವರು ಮಾಡಿರುವ ಪುಸ್ತಕವಿದು. ಇದರಲ್ಲಿ ಜಂಬಣ್ಣನವರ ಪರಿಚಯಾತ್ಮಕ ಲೇಖನವಿದೆ. ಅವರ ಗಜಲುಗಳಿವೆ. ಮುಖ್ಯವಾಗಿ ಅವರ ಜೀವನ ಸಂಗಾತಿ ಬರೆದಿರುವ ಬರೆಹವಿದೆ. ಜಂಬಣ್ಣನವರು ನಮಗೆಲ್ಲ ಹಿರಿಯರು. ಅವರಲ್ಲಿ ತಾಯಿಯ ಪ್ರೀತಿಕೊಡುವ ಹೃದಯವಂತಿಕೆಯಿತ್ತು. ಅವರೂ ಪ್ರೀತಿಗಾಗಿ ಹಂಬಲಿಸುತ್ತಿದ್ದರು. ಅವರೊಟ್ಟಿಗೆ ಸಮಯ ಕಳೆದರೆ, ಬಿಸಿಲಲ್ಲಿ ನಡೆದು ಬಳಲಿದವರು ತಂಪಾದ ಮರದಡಿ ಕುಳಿತಂತೆ ಆಗುತ್ತಿತ್ತು. ಅವರ ವ್ಯಕ್ತಿತ್ವವು ಕಠಿಣವಾದ ಕಲ್ಲುಗಳ ನಡುವೆ ಅರಳಿದ ಮೃದುವಾದ ಹೂವಿನಂತಿತ್ತು. ಅವರ ಕುಟುಂಬದ ಹಿನ್ನೆಲೆಯಲ್ಲಿ ಸೂಫಿ ಸಂತರ ಪ್ರಭಾವವಿತ್ತು. ಅವರು ಉರ್ದು ಸಾಹಿತ್ಯದಿಂದ ಪ್ರಭಾವಿತರಾಗಿದ್ದರು. ಸಮಕಾಲೀನ ಲೇಖಕರ ಬರೆಹಗಳಲ್ಲಿ ಅಷ್ಟಾಗಿ ಕಾಣದ ಒಂದು ಗುಣವು ಅವರಲ್ಲಿತ್ತು. ಅದೆಂದರೆ, ತೀಕ್ಷ್ಮವಾದ ಪ್ರತಿರೋಧವನ್ನು ಮಾಗಿದ ಪ್ರೇಮದ ಜತೆ ಬೆರೆಸುವುದು. ಅವರ ಸಿಟ್ಟಿನಲ್ಲಿ ದಟ್ಟ ವಿಷಾದವಿತ್ತು. ಆದರೆ ದ್ವೇಷದ ತೇಂಕಾರ ಇರಲಿಲ್ಲ. ಅವರ ಬರೆಹವು ಹೊಸತಲೆಮಾರಿನ ಓದಿಗೆ ಮೌಲ್ಯಮಾಪನಕ್ಕೆ ಒಳಗಾಗಬೇಕು. ಅದಕ್ಕೆ ಈ ಪುಸ್ತಕವೂ ನೆರವಾಗುತ್ತದೆ ಎಂಬುವುದನ್ನು ಈ ಪುಸ್ತಕದಲ್ಲಿ ನೋಡಬಹುದು.
©2024 Book Brahma Private Limited.