ಗಣೇಶ ಹೆಗಡೆ ಅವರೊಂದಿಗಿನ ಹಲವು ಅನುಭವಗಳ, ನೆನಪುಗಳ ಜೊತೆಗಿನ ಅವರ ಸಾಹಸಗಾಥೆಗಳ ಸರಮಾಲೆಯೇ ‘ಕೆಚ್ಚೆದೆಯ ಪ್ರಗತಿ ಪುರುಷ ಕಿಲಾರ ಗಣೇಶ ಹೆಗಡೆ’ ಸಂಸ್ಮರಣಾ ಗ್ರಂಥ. ಈ ಗುಚ್ಛವನ್ನು ಸಂಪಾದಿಸಿದವರು ಅವರ ಬಂಧುಬಳಗ. ಅವರೊಂದಿಗಿನ ಒಡನಾಟ, ಅವರ ಜೀವನದಲ್ಲಿ ನಡೆದ ಸ್ವಾರಸ್ಯಕರ ಘಟನೆಗಳನ್ನು ಹೆಕ್ಕಿ ಇಲ್ಲಿ ಪೋಣಿಸಿದ್ದಾರೆ. ಹಳ್ಳಿಯೊಂದರಲ್ಲಿ ಹುಟ್ಟಿ ಬೆಳೆದ ಗಣೇಶ ಹೆಗಡೆಯವರು ಸಾಧಾರಣದವರೇನಲ್ಲ! ಕೃಷಿ ಕುಟುಂಬವೊಂದರಿಂದ ಬಂದ ಹೆಗಡೆಯವರು ಆಧುಕಿಕ ತಂತ್ರಜ್ಞಾನ ಇನ್ನೂ ದೇಶಕ್ಕೆ ಕಾಲಿಡದ ಸಂದರ್ಭದಲ್ಲೇ ಕಗ್ಗಾಡಿನಲ್ಲಿದ್ದುಕೊಂಡು ಸಾಧಿಸಿದ ಸಾಧನೆಗಳು, ಸಾಹಸದ ಪಟ್ಟಿ ಪುಟ ಉರುಳಿದಂತೆ ತೆರೆದುಕೊಳ್ಳುತ್ತಾ ಸಾಗುತ್ತದೆ. ಈ ಕೃತಿ ಒಂದು ರೀತಿಯಲ್ಲಿ ಅವರ ಬದುಕಿನ ಹೂರಣ. ಬದುಕು-ಹೋರಾಟ-ಸಾಧನೆಗಳ ಚಿತ್ರಣ. ಕಾಡುಗುಡ್ಡಗಳ ಮೇಲೆ ರಾಗಿ ಬೆಳೆಯುವ ಯೋಜನೆ, ಕಿಲಾರದ ಜಮೀನಿನಲ್ಲಿ ಕಬ್ಬು ಬೆಳೆ, ಸಕ್ಕರೆ ಕಾರ್ಖಾನೆಯ ನಿರ್ಮಾಣ, ಜಿಲ್ಲೆಯಲ್ಲಿ ಮೊದಲು ವಿಧವಾ ವಿವಾಹ ಮಾಡಿಸಿದ್ದು, ಅಮೃತ ಮಹಲ್ ತಳಿಯ ಗೋವುಗಳ ಸಾಕಣೆ, ಕೃಷಿ ವಿದ್ಯಾಶಾಲೆ ಪ್ರಾರಂಭ ಹೀಗೆ ಈ ರೀತಿಯ ಅವರ ಹಲವಾರು ಸಾಹಸ, ಸಾಧನೆಗಳ ಪಟ್ಟಿಯನ್ನು ಪುಸ್ತಕದುದ್ದಕ್ಕೂ ಕಾಣಬಹುದು.
©2024 Book Brahma Private Limited.