ಪಶ್ಚಿಮದ ಜಗತ್ತಿಗೆ ಭಾರತೀಯ ಸಂಸ್ಕೃತಿಯನ್ನು ಪರಿಚಯಿಸಿದವರು ಆನಂದ ಕೆಂಟಿಷ್ ಕುಮಾರಸ್ವಾಮಿ. ಭಾರತೀಯ ಕಲೆ, ಧರ್ಮ ಮತ್ತು ತತ್ವಶಾಸ್ತ್ರಗಳ ಬಗ್ಗೆ ಚಿಂತನೆ ನಡೆಸಿದ ಇತಿಹಾಸಕಾರರ ಪೈಕಿ ಆನಂದ ಕುಮಾರಸ್ವಾಮಿ ಪ್ರಮುಖರು. ಅವರು ಮೂಲತಃ ಶ್ರೀಲಂಕಾದ ಕೊಲಂಬೋದವರು. ಪಾಶ್ಚಾತ್ಯ ಕ್ಲಾಸಿಕ್ ಸಾಹಿತ್ಯ ಓದಿಕೊಂಡಿದ್ದ ತಂದೆ ಮುತ್ತು ಕುಮಾರಸ್ವಾಮಿ ಅವರು ಭಾರತೀಯ ತತ್ವಜ್ಞಾನ ಅದರಲ್ಲೂ ವಿಶೇಷವಾಗಿ ಬೌದ್ಧಧರ್ಮದಲ್ಲಿ ಆಸಕ್ತರಾಗಿದ್ದರು. ಆನಂದ ಕೇವಲ ಎರಡು ವರ್ಷದ ಮಗುವಾಗಿದ್ದಾಗಲೇ ತಂದೆ ತೀರಿಕೊಂಡಿದ್ದರಿಂದ ತಾಯಿ ಎಲಿಜಬೆತ್ ಅವರು ಮಗನನ್ನು ಇಂಗ್ಲೆಂಡಿಗೆ ಕರೆದೊಯ್ದರು. ಎಲಿಜಬೆತ್ ಅವರು ಇಂಗ್ಲೆಂಡಿನಲ್ಲಿದ್ದರೂ ಮಗನನ್ನು ಭಾರತೀಯ ಸಂಸ್ಕೃತಿಯಂತೆ ಬೆಳೆಸಿದರು. ಭೂಗರ್ಭ ಮತ್ತು ಸಸ್ಯಶಾಸ್ತ್ರದಲ್ಲಿ ಪದವಿ ಪಡೆದ ಆನಂದ ಅವರು ಶ್ರೀಲಂಕಾದಲ್ಲಿ ಸಂಶೋಧನ ಅಧ್ಯಯನ ನಡೆಸಿದರು. ಶ್ರೀಲಂಕಾದಲ್ಲಿ ಇರುವಾಗಲೇ ಜನಪದ ಕಲೆ, ಸಂಸ್ಕೃತಿಗಳೆಡೆಗೆ ಆಸಕ್ತಿ ಮೂಡಿತು. 1906ರ ನಂತರ ಭೂಗರ್ಭಶಾಸ್ತ್ರದಿಂದ ಕಲೆ, ತತ್ವಶಾಸ್ತ್ರ, ಸಂಸ್ಕೃತಿಗಳ ಅಧ್ಯಯನದ ಕಡೆಗೆ ಹೊರಳಿದರು. ನಂತರ ನಾಲ್ಕು ದಶಕಗಳ ಕಾಲ ಆನಂದ ಕುಮಾರಸ್ವಾಮಿ ಅವರು ಭಾರತೀಯ ಕಲೆ, ಧರ್ಮ ಮತ್ತು ತತ್ವಶಾಸ್ತ್ರಗಳನ್ನು ಕುರಿತು ಪುಸ್ತಕ, ಲೇಖನ ಬರೆದು ಪ್ರಕಟಿಸಿದರು.
ಕಲಾಸಾಹಿತ್ಯದಲ್ಲಿ ಮಹತ್ವದ ಸಾಧನೆ ಮಾಡಿದ ಆನಂದ ಕುಮಾರಸ್ವಾಮಿ ಅವರ ಚಿಂತನೆ, ಬರವಣಿಗೆ ಕುರಿತಾಗಿ ವಿವಿಧ ಲೇಖಕರು ರಚಿಸಿದ ಬರಹಗಳನ್ನು ಈ ಸಂಕಲನವು ಒಳಗೊಂಡಿದೆ. ಪುಸ್ತಕದಲ್ಲಿ ಒಟ್ಟು 14 ಬರಹಗಳಿವೆ. ಬಹುತೇಕ ಬರಹಗಳು ಕನ್ನಡದಲ್ಲಿಯೇ ರಚಿಸಿದವುಗಳಾದರೂ ಕೆಲವು ಇಂಗ್ಲಿಷ್ ಬರಹಗಳನ್ನು ಕನ್ನಡಕ್ಕೆ ಅನುವಾದಿಸಿ ಸೇರಿಸಲಾಗಿದೆ. ಚಿದಾನಂದ ದಾಸ್ ಗುಪ್ತ ಅವರ ಬರವಣಿಗೆಯನ್ನು ಕೆ.ಪುಟ್ಟಸ್ವಾಮಿ, ಪಾರುಲ್ ದಾವೆ ಮುಖರ್ಜಿ ಅವರ ಲೇಖನವನ್ನು ಎಚ್.ಎ. ಅನಿಲ್ ಕುಮಾರ್, ಎ.ರಂಗನಾಥನ್ ಅವರ ಬರಹವನ್ನು ಆನಂದ ವಿ. ಪಾಟೀಲ್, ರಾಮನ್ ಜಹಾನ್ ಬೇಗ್ ಲೂ ಅವರ ಬರಹವನ್ನು ಗಣೇಶ್ ಯು.ಎಚ್. ಅನುವಾದಿಸಿದ್ದಾರೆ. ಡಿ.ಆರ್. ನಾಗರಾಜ್ ಅವರು ಬರೆದ ‘ಆನಂದ ಕುಮಾರಸ್ವಾಮಿ: ತಾತ್ವಿಕ ನೆಲೆಗಳು’ ಹಾಗೂ ಕೆ.ವಿ. ಸುಬ್ರಹ್ಮಣ್ಯಂ ಅವರ ‘ಆನಂದ ಕುಮಾರಸ್ವಾಮಿ ಮತ್ತು ಆಧ್ಯಾತ್ಮಿಕ ದೃಶ್ಯಧ್ಯಾನ’ ಹಾಗೂ ಎಚ್.ಎ. ಅನಿಲ್ ಕುಮಾರ್ ಅವರ ‘ಸೌಂದರ್ಯಶಾಸ್ತ್ರದ ಪರಿಕರದಿಂದ ರಾಷ್ಟ್ರೀಯವಾದವನ್ನು ಪರೀಕ್ಷೆಗೊಡ್ಡಿದ ತಜ್ಞ’ ಮತ್ತು ಆರ್. ಎಚ್. ಕುಲಕರ್ಣಿಯವರ ‘ಆನಂದ ಕುಮಾರಸ್ವಾಮಿ ಮತ್ತು ಭಾರತೀಯ ಕಲಾ ಇತಿಹಾಸ ಲೇಖನಗಳು’ ಮತ್ತು ಷ. ಶೆಟ್ಟರ್ ಅವರ ‘ಬದಲಾದ ಕಾಲದ ಬೆಳಕಿನಲ್ಲಿ ಕುಮಾರಸ್ವಾಮಿ ಚಿಂತನೆಗಳು’ ಬರಹಗಳು ಅಪರೂಪದ ಒಳನೋಟಗಳಿಂದ ಕೂಡಿವೆ.
©2024 Book Brahma Private Limited.