ಉಜಿರೆ ಅಶೋಕ ಭಟ್ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಉಜಿರೆಯವರು. ತಾಳಮದ್ದಳೆಯ ಪ್ರಬುದ್ಧ ಅರ್ಥಧಾರಿ, ಯಕ್ಷಗಾನ ಉಭಯ ತಿಟ್ಟಿನ ವೇಷಧಾರಿ, ಸಂಘಟಕ, ಪ್ರವಚನಕಾರ ಹಾಗೂ ಭಾಷಣಕಾರರು. ಬಾಲ್ಯದಿಂದಲೇ ಯಕ್ಷಗಾನ ರಂಗದಲ್ಲಿ ವಿಶೇಷ ಆಸಕ್ತರು. ಅವರಿಗೆ ಶೇಣಿ, ಪೆರ್ಲ, ಮೂಡಂಬೈಲು, ತೆಕ್ಕಟ್ಟೆ , ಸಾಮಗ, ಜೋಶಿ ಹೀಗೆ ಪ್ರಸಿದ್ದ ಅರ್ಥಧಾರಿಗಳ ಸಂಸರ್ಗವು ಉತ್ತಮ ತಾಳಮದ್ದಳೆ ಅರ್ಥಧಾರಿಯಾಗಿಸಿದೆ. ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಕಳೆದ 43 ವರ್ಷಗಳಿಂದ ನಡೆಯುತ್ತಿರುವ ಪುರಾಣ ವಾಚನದಲ್ಲಿ 33 ವರ್ಷಗಳಿಂದ ಭಾಗವಹಿಸುತ್ತಿದ್ದಾರೆ. 48 ವಾರಗಳ ಸಂಪೂರ್ಣ ಮಹಾಭಾರತ ಹಾಗೂ 18 ವಾರಗಳ ಸಂಪೂರ್ಣ ರಾಮಾಯಣ ತಾಳಮದ್ದಳೆ ಆಯೋಜನೆ ಅವರ ಸಾರ್ವಕಾಲಿಕ ದಾಖಲೆಯಾಗಿದೆ.