ಮಹಿಳೆಯರ ದೇಹ ರಚನೆಯ ವೈಶಿಷ್ಟವೇ ಬೇರೆ. ಮಗುವೊಂದನ್ನು ಗರ್ಭದೊಳಗಿಟ್ಟು ಜನ್ಮಕೊಡುವ ಮಹತ್ತರ ಕಾರ್ಯಕ್ಕೆ ಮಹಿಳೆಯನ್ನು ಆರಿಸಲಾಗಿರುವ ಕಾರಣದಿಂದಲೋ ಏನೋ, ಅವರ ದೇಹ ಅತ್ಯಂತ ಸೂಕ್ಷ್ಮವಾದ ಆರೋಗ್ಯ ಸಂರಚನೆಯಿಂದ ಕೂಡಿರುತ್ತದೆ. ಹೆಣ್ಣು ಆಧುನಿಕ ಶಿಕ್ಷಣದಿಂದ ಈಗಲೂ ವಂಚಿತಳೇ ಆಗಿದ್ದಾಳೆ. ಒಂದು ವೇಳೆ ಅದನ್ನು ಪಡೆದರೂ, ಆಕೆ ತನ್ನದೇ ದೇಹ ಮತ್ತು ಮನಸ್ಸಿನ ಕುರಿತಂತೆ ಸಮಾಜದಲ್ಲಿ ಮುಕ್ತವಾಗಿ ಮಾತನಾಡುವ, ವಿಚಾರ ವಿನಿಮಯ ನಡೆಸುವ, ಅರಿತುಕೊಳ್ಳುವ ವಾತಾವರಣ ಇಲ್ಲ. ಒಂದು ಆಕೆಯ ಪ್ರಶ್ನೆಗಳನ್ನು, ಅನುಮಾನಗಳನ್ನು ಸಂಸ್ಕೃತಿ, ಲಜ್ಜೆ ಇತ್ಯಾದಿಗಳ ಹೆಸರಲ್ಲಿ ದಮನಿಸಲಾಗುತ್ತದೆ. ಇದರಿಂದಾಗಿ ತನ್ನ ದೇಹದಲ್ಲಿ, ತನ್ನ ಮನಸ್ಸಿನಲ್ಲಿ ನಡೆಯುವ ವಿಚಾರಗಳ ಬಗ್ಗೆಯೇ ಆಕೆ ಬಹುತೇಕ ಅಜ್ಞಾನಿಯಾಗಿರುತ್ತಾಳೆ. ಹೀಗಿರುವ ಪರಿಸ್ಥಿತಿಯಲ್ಲಿ ಲೈಂಗಿಕ ವಿಜ್ಞಾನದ ಬಗ್ಗೆ ಆಕೆ ತಿಳಿದುಕೊಳ್ಳುವುದು ದೂರದ ಮಾತು. ಹೆಣ್ಣಿನ ಲೈಂಗಿಕತೆ ಮತ್ತು ಇತರ ಆರೋಗ್ಯ ಸಮಸ್ಯೆಗಳ ಬಗ್ಗೆ ಈ ಹಿಂದೆ ಅನುಪಮಾ ನಿರಂಜನ ಅವರು ಸಾಕಷ್ಟು ಬರೆದಿದ್ದಾರೆ. ಅವರ ಬಳಿಕ ಇನ್ನಿತರ ವೈದ್ಯರೂ ಈ ಬಗ್ಗೆ ಬರೆಯಲು ಧೈರ್ಯ ತೋರಿದ್ದಾರೆ. ಇತ್ತೀಚಿನ ದಿನಗಳಲ್ಲಿ ಈ ಬಗ್ಗೆ ಸಣ್ಣ ಪುಟ್ಟ ಕೃತಿಗಳು ಹೊರಬರುತ್ತಿವೆ. ಇದೀಗ ಡಾ. ಪದ್ಮನಿ ಪ್ರಸಾದ್ ಅವರು ಸ್ತ್ರೀ ಲೈಂಗಿಕ ವಿಜ್ಞಾನ ಕೃತಿಯೊಂದನ್ನು ಹೊರತಂದಿದ್ದು, ಲೇಖಕರು ಮಹಿಳೆಯ ಆರೋಗ್ಯದ ಬಗ್ಗೆ ಉಪಯುಕ್ತವಾದ ಮಾಹಿತಿಯನ್ನು ಈ ಕೃತಿಯಲ್ಲಿ ನೀಡಿದ್ದಾರೆ.
©2024 Book Brahma Private Limited.