‘ಆಧುನಿಕ ಮಹಿಳೆ: ಚರಿತ್ರೆ ಮತ್ತು ವರ್ತಮಾನಗಳ ಮುಖಾಮುಖಿ’ ಲೇಖಕಿ ಕವಿತಾ ರೈ ಅವರ ಕೃತಿ. ಮಾನವ ಚರಿತ್ರೆಯಲ್ಲಿ ಸಾಮುದಾಯಿಕ, ಸಾಂಸ್ಕೃತಿಕ ಇತಿಹಾಸ ಹೆಣ್ಣಿನಿಂದಲೇ ಆರಂಭಗೊಳ್ಳುವಂತಾದ್ದು ಆದರೆ ಆ ಇಡೀ ಇತಿಹಾಸವನ್ನು ವ್ಯವಸ್ಥಿತವಾಗಿ ಮುಚ್ಚಿಹಾಕುತ್ತಾ ಪುರುಷ ಸಮಾಜ ಬೌದ್ಧಿಕ ಲೋಕವನ್ನು ಆವರಿಸಿಕೊಂಡಿದೆ. ಹಾಗಾಗಿ ಚರಿತ್ರೆ ಎಂಬುದು ಸಂಕಥನದ ಅರ್ಥ ಕಳೆದುಕೊಂಡು ಸಾಮ್ರಾಜ್ಯಶಾಹಿ ಕೃತ್ಯಗಳ ದಾಖಲಾತಿ ಕಾರ್ಯಕ್ಕೆ ಮುಂದಾಯಿತು. ಕಳೆದ ಶತಮಾನದಲ್ಲಿ ಆದ ಬೆಳವಣಿಗೆಗಳು ಮುಖ್ಯವಾಗಿ ಮಹಿಳಾಪರ ಹೋರಾಟದ ಆಯಾಮಗಳು ಚರಿತ್ರೆಯ ರೂಪಣೆಯ ಕೇಂದ್ರಕ್ಕೆ ಮಹಿಳೆಯನ್ನೂ ತರುವ ದಿಶೆಯಲ್ಲಿ ಮಾಡಿದ ಕಾರ್ಯಗಳು ಮತ್ತು ಸಾಧನೆಗಳು ಮಾನವೇತಿಹಾಸದ ಪೂರ್ಣತೆಯ ದೃಷ್ಟಿಯಿಂದ ತುಂಬಾ ಅಪೇಕ್ಷಣೀಯ ಮತ್ತು ಅನಿವಾರ್ಯ. ಈ ಅಪೇಕ್ಷೆ ಮತ್ತು ಅನಿವಾರ್ಯತೆಗೆ ಒಗ್ಗದ ಮನಸ್ಸುಗಳು ಇಂದೂ ಕ್ರಿಯಾಶೀಲವಾಗಿವೆ ಎಂಬುದೇ ಸೋಜಿಗದ ಸಂಗತಿ. ಇಂತಹ ಪರಿಸ್ಥಿತಿಯಲ್ಲಿ ಡಾ. ಕವಿತಾ ರೈ ಅಂತಹವರು ಮಾಡುತ್ತಿರುವ, ನಮ್ಮ ಸಮಾಜದೊಳಗಿನ ವಿಚಿತ್ರ, ವಿಸ್ಮಯ, ಬೆರಗು, ಗೊಂದಲಗಳೆಲ್ಲವನ್ನೂ ದಾಟಿ ದಾಖಲಿಲ್ಲದ ಬದುಕಿನ ಬೇರುಗಳನ್ನು ಹುಡುಕಿ ದಾಖಲುಗೊಳಿಸುವ ಕಾರ್ಯ ನಿಜಕ್ಕೂ ಪ್ರಶಂಸಾರ್ಹ. ಪ್ರಸ್ತುತ ಈ ಕೃತಿಯು ಈ ದಿಶೆಯಲ್ಲಿ ಒಂದು ಪ್ರಮುಖ ಪ್ರಯತ್ನವಾಗಿದೆ.
©2025 Book Brahma Private Limited.