ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟವು ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ನಾಡಿನ ವಿವಿಧ ಚಿಂತಕರು ನಡೆಸಿದ ವಿಚಾರ ಮಂಥನದ ಫಲ ’ಸಾಕಾರದತ್ತ ಸಮಾನತೆಯ ಕನಸು-ಮಹಿಳಾ ಪ್ರತಿರೋಧದ ನೆಲೆಗಳು’ ಕೃತಿ. ಡಾ. ಪ್ರೀತಿ ಶುಭಚಂದ್ರ, ಎಂ. ಎನ್. ಸುಮನಾ ಅವರು ಕೃತಿಯನ್ನು ಸಂಪಾದಿಸಿದ್ದಾರೆ.
ಪ್ರೀತಿ ಶ್ರೀಮಂಧರ ಕುಮಾರ್, ಪ್ರೊ. ಸಿ. ಬಸವರಾಜು, ಸುನಂದಾ ಜಯರಾಮ್, ಡಾ. ಕಾರಿನ್ ಕುಮಾರ್, ಡಾ. ನೀಲಗಿರಿ ತಳವಾರ್, ಬಾನು ಮುಷ್ಠಾಕ್, ಶಕುನ್, ಮಲ್ಲಿಗೆ, ಪಿ.ಪಿ. ಬಾಬುರಾಜ್, ಅಕೈ ಪದ್ಮಶಾಲಿ, ಅರವಿಂದ ನಾರಾಯಣ, ಡಾ. ವಸುಂಧರಾ ಭೂಪತಿ, ಡಾ. ಎಚ್. ಎಸ್. ಅನುಪಮಾ, ದು. ಸರಸ್ವತಿ, ಕೆ. ನೀಲಾ, ಸಬೀಹಾ ಭೂಮಿಗೌಡ, ಸುಮನಾ ಎಂ. ಎನ್. ಮೊದಲಾದವರ ಚಿಂತನೆಗಳನ್ನು ಅಕ್ಷರರೂಪದಲ್ಲಿ ಹೊಂದಿದೆ ಕೃತಿ.
ಕೃತಿಯಲ್ಲಿ ಮೂರು ಅಧ್ಯಾಯಗಳಿವೆ. ಮೊದಲ ಭಾಗದಲ್ಲಿ ಮಹಿಳಾ ಹೋರಾಟ ಕುರಿತಂತೆ ಪ್ರೀತಿ ಶ್ರೀಮಂಧರ ಕುಮಾರ್ ಚರ್ಚಿಸಿದ್ದಾರೆ. ಪ್ರೊ. ಸಿ. ಬಸವರಾಜು ಮಹಿಳಾ ವಿರೋಧಿ ಮನಸ್ಸುಗಳಿಂದಾಗಿ ಆಗುತ್ತಿರುವ ಅನಾಹುತಗಳನ್ನು ವಿವರಿಸಿದ್ದಾರೆ. ಅತ್ಯಾಚಾರ ಕಾನೂನು ಮತ್ತು ವಯಸ್ಸಿನ ಕುರಿತಂತೆ ಬಾನು ಮುಷ್ಪಾಕ್ ಚರ್ಚಿಸಿದ್ದಾರೆ. ಗಲ್ಲು ಶಿಕ್ಷೆ ಅತ್ಯಾಚಾರವನ್ನು ತಡೆಯಬಹುದೇ ಎಂಬ ವಿಷಯದಲ್ಲಿ ಶಕುನ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಲೈಂಗಿಕತೆ ಮತ್ತು ಹಿಂಸೆ ನಡುವಿನ ತೆಳು ಪರದೆಯನ್ನು ಅಕ್ಕೈ ಪದ್ಮಶಾಲಿ ಹರಿದಿದ್ದಾರೆ. ಎರಡನೇ ಭಾಗದಲ್ಲಿ ಬೀದಿ ಬದಿಯ ಪರ್ಯಾಯ ಶಕ್ತಿಯನ್ನು ಅನುಪಮಾ ತೆರೆದುಕೊಟ್ಟಿದ್ದಾರೆ. ಹಿಂಸೆ ಕಗ್ಗತ್ತಲಲ್ಲೂ ಒಂದಿಷ್ಟು ನಿರೀಕ್ಷೆ ಹುಟ್ಟಿಸುವ ವಿಷಯಗಳ ಕುರಿತು ದು. ಸರಸ್ವತಿ ಬೆಳಕು ಚೆಲ್ಲಿದ್ದಾರೆ. ಮೂರನೇ ಭಾಗದಲ್ಲಿ ಮಹಿಳಾ ಹೋರಾಟದ ಕಲ್ಲುಮುಳ್ಳಿನ ದಾರಿಯ ಸಾಹಸ ಕಥನದ ಕಡೆಗೆ ಇಮಾ ಲೋರೆಂಬಮ್ ನಾ ವಿವರಿಸಿದ್ದಾರೆ.
ಸಮಾನತೆಯ ಕನಸನ್ನು ಸಾಕಾರಗೊಳಿಸುವತ್ತ ಸಾಗಿರುವ ಮಹಿಳಾ ಲೋಕದ ಎದುರಿರುವ ಸವಾಲುಗಳನ್ನು ಕೃತಿ ಸಮರ್ಥವಾಗಿ ತೆರೆದಿಡುತ್ತದೆ.
©2025 Book Brahma Private Limited.