ಹೊರಗೆ ಕಚೇರಿಯಲ್ಲಿ ದುಡಿಯುವ ಹೆಣ್ಣು, ಮನೆಯಲ್ಲಿ ಮತ್ತೆ ಮನೆಗೆಲಸ ಮಾಡಬೇಕಾಗುತ್ತದೆ. ಅಂದರೆ ಎರಡೆರಡು ದುಡಿಮೆ. ಈ ನಿಟ್ಟಿನಲ್ಲಿ, ಮನೆಯಲ್ಲಿರುವ ಹೆಣ್ಣಿಗಿಂತ ಹೊರಗೆ ದುಡಿಯುವ ಹೆಣ್ಣೆ ಹೆಚ್ಚು ಶೋಷಿತಳಲ್ಲವೆ? ಮನೆಗೆಲಸವನ್ನು ಗಂಡು-ಹೆಣ್ಣು ಸಮಾನವಾಗಿ ಹಂಚಿ ಮಾಡುವ ಮನಸ್ಥಿತಿ ಭಾರತದಲ್ಲಿ ಯಾಕೆ ಇನ್ನೂ ಬೆಳೆದಿಲ್ಲ? ಹೀಗೆ ಹೆಣ್ಣಿನ ದುಡಿಮೆಯ ಕುರಿತಂತೆ ಹತ್ತು ಹಲವು ಪ್ರಶ್ನೆಗಳನ್ನು ಇಟ್ಟು ಉತ್ತರಕ್ಕಾಗಿ ತಡಕಾಡುತ್ತದೆ, ರಂಗನಾಯಕಮ್ಮ ಬರೆದಿರುವ 'ಮನೆಕೆಲಸ ಮತ್ತು ಹೊರಗಿನ ಕೆಲಸ', ತೆಲುಗು ಮೂಲದ ಈ ಕೃತಿಯನ್ನು ಬಿ. ಸುಜ್ಞಾನ ಮೂರ್ತಿ ಕನ್ನಡಕ್ಕೆ ತಂದಿದ್ದಾರೆ. ಸಂಬಳ, ಕೂಲಿ ಇಲ್ಲದ ಕೆಲಸ ದುಡಿಮೆಯೇ ಅಲ್ಲ ಎಂದು ಭಾವಿಸುವ ಸಮಾಜದಲ್ಲಿ ಮನೆಕೆಲಸ ಮಾಡುವ ಹೆಣ್ಣು ಸಹಜವಾಗಿಯೇ ಶೋಷಣೆಗೆ ಒಳಪಡುತ್ತಾಳೆ ಎಂದು ಈ ಕೃತಿ ಹೇಳುತ್ತದೆ.
ಗರ್ಭ ಧರಿಸಿದ ಕಾಲಾವಧಿ, ಬಾಣಂತಿಯರಾದ ಸಮಯ, ಮಕ್ಕಳ ಲಾಲನೆ, ಪೋಷಣೆ, ಮನೆಯ ಒಳಗಿನ ನಿರ್ವಹಣೆ, ಅಡುಗೆಯ ಕಲೆ, ಒಪ್ಪ ಓರಣದ ಕಸುಬುದಾರಿಕೆ ಇವೆಲ್ಲವೂ ಮಹಿಳೆಯ ದುಡಿಮೆಯ ಭಾಗವೇ ಆಗಿದ್ದರೂ, ಪುರುಷ ದೃಷ್ಟಿಕೋನದಲ್ಲಿ ಇವು ಯಾವುದೂ ಕೆಲಸವೇ ಅಲ್ಲ. ಶ್ರಮ ಮತ್ತು ಮಹಿಳೆಯನ್ನು ಕೇಂದ್ರವಾಗಿಟ್ಟುಕೊಂಡು ಈ ಕೃತಿಯನ್ನು ಬರೆಯಲಾಗಿದೆ. ಶ್ರಮದ ಬೇರೆ ಬೇರೆ ವಿಭಾಗಗಳನ್ನು ಲೇಖಕಿ ಗುರುತಿಸುತ್ತಾರೆ.
©2025 Book Brahma Private Limited.