ಮಹಿಳಾ ಸಾಹಿತ್ಯ ಮತ್ತು ಸಮಸ್ಯೆಗಳು ಆಧುನಿಕ ಕನ್ನಡ ಬರಹಗಾರ್ತಿಯರ ಕಥೆ, ಕಾದಂಬರಿ, ನಾಟಕಗಳ ವಸ್ತು, ಭಾಷೆ, ತಂತ್ರಗಳನ್ನು ತೌಲನಿಕವಾಗಿ ಹಿರಿಯ ಲೇಖಕಿ ಡಾ. ಸಕುಂತಲಾ ದುರಗಿ ಅವರು ಅಭ್ಯಸಿಸಿ ಪ್ರಕಟಿಸಿದ ಕೃತಿ. ಒಟ್ಟು 8 ಲೇಖನಗಳನ್ನು ಒಳಗೊಂಡಿದೆ. ಸಾಹಿತಿ ಡಾ, ಬಿ.ಬಿ. ಹೆಂಡಿ ಅವರು ಕೃತಿಗೆ ಮುನ್ನುಡಿ ಬರೆದಿದ್ದಾರೆ. ಸಮಕಾಲೀನ ವ್ಯವಸ್ಥೆಯ ಸನ್ನಿವೇಶಕ್ಕನುಗುಣವಾಗಿ ನವೋದಯ, ಪ್ರಗತಿಶೀಲ, ನವ್ಯ ಕಾಲಘಟ್ಟದ ಲೇಖಕಿಯರನ್ನು ಆಯ್ದುಕೊಂಡು ಮಹಿಳೆಯರ ಸಮಸ್ಯೆಗಳ ಮೇಲೆ ಕ್ಷಕಿರಣ ಬೀರಿ, ಮಹಿಳಾ ಜಗತ್ತಿನ ವಿವಿಧ ಮುಖಗಳನ್ನುಶೀಲ, ಉದ್ಯೋಗಸ್ಥ ಮಹಿಳೆ, ವೇಶ್ಯಾ ಸಮಸ್ಯೆ ,ಕಲಾರಾಧನೆ, ತಲೆಮಾರುಗಳ ಅಂತರ, ಮಾನವೀಯ ಅಂತಃಕರಣ, ಮಕ್ಕಳ ಸಾಹಿತ್ಯಕ್ಕೆ ಮಹಿಳೆಯರ ಕೊಡುಗೆ, ಕನ್ನಡ ಲೇಖಕಿಯರ ಸಣ್ಣ ಕಥೆಗಳು ಎಂದು ವರ್ಗೀಕರಿಸಿದ್ದಾರೆ.
ಮೊದಲನೆಯ ಲೇಖನ ‘ಶೀಲ’ದಲ್ಲಿ ಅ) ಬಾಲ ವೈಧವ್ಯ, ಬ) ಪ್ರೌಢ ವಿಧವಾ ವಿವಾಹ ಎಂದು ವರ್ಗೀಕರಿಸಿ, ನವೋದಯ ಘಟ್ಟದ ಕಥೆಗಾರ್ತಿಯರ ಕಥೆಗಳ ಸೂಕ್ಷ್ಮತೆಯನ್ನು ಗುರುತಿಸಿದ್ದಾರೆ. “ಉದ್ಯೋಗಸ್ಥ ಮಹಿಳೆ: ಆಧುನಿಕ ಮಹಿಳಾ ಸಾಹಿತ್ಯದ ವಸ್ತುವಿನಲ್ಲಾದ ಮತ್ತೊಂದು ಕ್ರಾಂತಿಕಾರಿ ಬದಲಾವಣೆ ಎಂದರೆ, ಅವರು ತಮ್ಮ ಸಾಹಿತ್ಯದಲ್ಲಿ ಮಹಿಳಾ ಶಿಕ್ಷಣಕ್ಕೆ ಹಾಗೂ ಮಹಿಳಾ ಸ್ವಾವಲಂಬೀ ಜೀವನಕ್ಕೆ ಲೇಖಕಿಯು ಹೆಚ್ಚು ಪ್ರಾಶಸ್ತ್ಯ ಕೊಟ್ಟಿದ್ದಾರೆ. ಮಹಿಳೆ ನಿಜವಾಗಿಯೂ ಉದ್ಯೋಗಸ್ಥಳಾಗಿ ಸಂತೋಷಪಟ್ಟಳೆ? ಮುಂತಾಗಿ ಲೇಖಕಿಯರು ಸೃಷ್ಟಿಸಿದ ಕಥಾನಾಯಕಿಯರ ಚಿತ್ರಣವನ್ನು ವಿಮರ್ಶೆಗೊಳಪಡಿಸಿದ್ದಾರೆ. ಮಹಿಳೆಯ ಸ್ಥಿತಿಗತಿಗೆ ಸಂಬಂಧಿಸಿದಂತೆ ಮತ್ತೊಂದು ಜ್ವಲಂತ ಸಮಸ್ಯೆ ಎಂದರೆ ವೇಶ್ಯಾವೃತ್ತಿ. ಸ್ವತಂತ್ರವಾಗಿದ್ದುಕೊಂಡು, ನೀತಿಯುತ ಜೀವನ ಸಾಗಿಸುವುದಕ್ಕೆ ಪುರುಷ ಸಮಾಜ ಒಡ್ಡುವ ತಡೆಗೋಡೆಯ ಚಿತ್ರಣವನ್ನುಕಥಾ ಸಾಹಿತ್ಯ ನೀಡಿರುವ ಕುರಿತಂತೆ ವಿವೇಚಿಸಲಾಗಿದೆ. ಹೀಗೆ ಕಲಾರಾಧನೆ,ತಲೆಮಾರುಗಳ ಅಂತರ, ಮಾನವೀಯ ಅಂತಃಕರಣ ಮೊದಲಾದ ಎಲ್ಲ ಲೇಖನಗಳನ್ನು ಮಹಿಳೆಯರು ರಚಿಸಿದ ಕೃತಿಗಳ ಆಧಾರದಿಂದ ಉತ್ತಮರೀತಿಯಲ್ಲಿ ವಿವೇಚಿಸಿದ್ದಾರೆ. ಹೀಗೆ, ಆಧುನಿಕ ಮಹಿಳಾ ಸಾಹಿತ್ಯವನ್ನು ಸಮಗ್ರವಾಗಿ ಓದಿ, ಪರಿಶೀಲಿಸಿ, ನಮ್ಮ ಭಾರತೀಯ ನಾರಿಯು ಅನುಭವಿಸಿರುವ ಯಾತನೆಗಳನ್ನು, ಸಮಸ್ಯೆಗಳನ್ನು ನಮ್ಮ ಲೇಖಕಿಯರು ಸಾಹಿತ್ಯದಲ್ಲಿ ಹೇಗೆ ತಂದಿದ್ದಾರೆ ಎನ್ನುವ ಜಿಜ್ಞಾಸೆ ನಡೆಸಿ ಬರೆದಿರುವ ಈ ಕೃತಿಯು ಅಭ್ಯಾಸಿಗಳಿಗೆ ಒಳ್ಳೆಯ ಮಾರ್ಗದರ್ಶನವನ್ನು ಮಾಡುತ್ತದೆ.
©2024 Book Brahma Private Limited.