ಕೋಮುವಾದ ಮತ್ತು ಮಹಿಳೆ ಲೇಖನದಲ್ಲಿ ಕೋಮುವಾದದ ಮೊದಲ ಗುರಿ ಮಹಿಳೆಯೇ ಆಗಿದ್ದಾಳೆ ಎನ್ನುತ್ತಾರೆ ಸಬೀಹಾ, ಕೋಮುವಾದವನ್ನು ಮಹಿಳೆಯ ಸಮಸ್ಯೆಯಾಗಿ ಅವರು ಚರ್ಚಿಸುವ ಪ್ರಯತ್ನ ಮಾಡುತ್ತಾರೆ. ಇದಕ್ಕೆ ಭಾರತ ಒಂದನ್ನೇ ಆಧಾರವಾಗಿಟ್ಟುಕೊಳ್ಳದೇ ನೆರೆಯ ಪಾಕಿಸ್ತಾನ, ಬಾಂಗ್ಲಾದಂತಹ ದೇಶಗಳಲ್ಲಿ ಮುಸ್ಲಿಮ್ ಮಹಿಳೆಯರ ಮೇಲೆ ನಡೆಯುವ ದಾಳಿಗಳನ್ನೂ ಉಲ್ಲೇಖಿಸುತ್ತಾರೆ. ಮತ್ತು ಕೋಮುವಾದದ ಅತಿ ಹೆಚ್ಚು ಸಂತ್ರಸ್ತರು ಮಹಿಳೆಯರಾಗಿದ್ದಾರೆ ಎನ್ನುವುದನ್ನು ಈ ಲೇಖನದಲ್ಲಿ ನಿರೂಪಿಸುತ್ತಾರೆ. ಇದೇ ಸಂದರ್ಭದಲ್ಲಿ ಅದು ಹೇಗೆ ಇಡೀ ಸಮಾಜವನ್ನು ಪ್ರಭಾವಿಸುತ್ತದೆ ಎಂಬುದರ ಬಗ್ಗೆಯೂ ಅವರು ಹೇಳುತ್ತಾರೆ. ಸಮಸ್ಯೆಯ ಪರಿಣಾಮ ಎದುರಿಸುವವರೇ ಅದರ ಪರಿಹಾರೋಪಾಯಗಳನ್ನು ಕಂಡುಕೊಳ್ಳುವ ಅಗತ್ಯವನ್ನು ಅವರು ಎತ್ತಿ ಹಿಡಿಯುತ್ತಾರೆ. ಅಂತೆಯೇ ಇನ್ನೊಂದು ಲೇಖನದಲ್ಲಿ ಲೈಂಗಿಕ ಸಂಬಂಧಗಳ ವಿಚಾರದಲ್ಲಿ ಪ್ರತಿಯೋರ್ವ ನಾಗರಿಕರೂ ಸ್ವನಿಯಂತ್ರಣವನ್ನು ಸ್ವ ಇಚ್ಛೆಯಿಂದ ಗಳಿಸಿಕೊಂಡಾಗ ಮತ್ತು ವಿಭಿನ್ನ ಲಿಂಗದವರ ಲೈಂಗಿಕತೆಯನ್ನು ಗೌರವಿಸುವುದನ್ನು ಮತ್ತು ಅವರವರ ಇಚ್ಛೆಗಳಿಗೆ ಮಾನ್ಯತೆಯನ್ನು ನೀಡುವುದನ್ನು ರೂಢಿಸಿಕೊಂಡಾಗ ಮಹಿಳೆಯ ವಿರುದ್ಧದ ದೌರ್ಜನ್ಯ ಪ್ರಕರಣಗಳು ಇಳಿಮುಖಗೊಂಡಾವು ಎಂದು ಅಭಿಪ್ರಾಯ ಪಡುತ್ತಾರೆ. ಅಂದರೆ ಮಹಿಳೆ ಇನ್ನೊಬ್ಬಳನ್ನು ದೂಷಿಸುತ್ತಾ ಕುಳಿತುಕೊಳ್ಳದೇ, ಈ ಕಾರ್ಯದಲ್ಲಿ ಸಮಾನವಾಗಿ ಪಾಲುದಾರಳಾಗಬೇಕು ಎನ್ನುವ ಅಂಶದ ಕಡೆಗೆ ಲೇಖಕಿ ಗಮನ ಸೆಳೆಯುತ್ತಾರೆ.
(ಹೊಸತು, ಮಾರ್ಚ್ 2015, ಪುಸ್ತಕದ ಪರಿಚಯ)
ಇಂದಿನ ಸಮಾಜದಲ್ಲಿನ ಆಧುನಿಕ ಮಹಿಳೆ ಎದುರಿಸುತ್ತಿರುವ ಸಮಸ್ಯೆಗಳನ್ನು ಈ ಕೃತಿಯಲ್ಲಿ ಚರ್ಚಿಸಲಾಗಿದೆ. ಪುರಾಣಗಳಲ್ಲಿ ಚಿತ್ರಿತವಾದ ಮಹಿಳಾ ಪಾತ್ರಗಳ ಬವಣೆ ಒಂದು ತೆರನಾದರೆ ಇಂದಿನ ದಿನಗಳಲ್ಲಿ ಸಮಸ್ಯೆಗಳು ಬೇರೆಯೇ ರೀತಿಯವು. ಈಗ ಸಮಾನತೆಗಾಗಿ ಹೋರಾಡಿ ಹಲವು ಸೌಲಭ್ಯಗಳನ್ನು ತನ್ನದಾಗಿಸಿಕೊಂಡ ಆಕೆಯ ವ್ಯವಹಾರ ಕ್ಷೇತ್ರ ವಿಸ್ತಾರವಾಗಿದೆ. ವಿದ್ಯಾವಂತೆಯಾಗಿ ಆರ್ಥಿಕ ಸ್ವಾವಲಂಬನೆ ಸಾಧಿಸಿದ ಹೆಮ್ಮೆ ಒಂದು ಕಡೆಯಾದರೆ ವ್ಯವಸ್ಥೆಯ ಚೌಕಟ್ಟಿನೊಳಗೇ ಶೋಷಣೆಗೆ ಒಳಗಾಗ ಬೇಕಾದ ದುರವಸ್ಥೆ ಆಕೆಯದು, ಇಂದು ಮೇರೆ ಮೀರುತ್ತಿರುವ ಅತ್ಯಾಚಾರ ಪ್ರಕರಣಗಳು ವರದಿಯಿಂದಾಗಿ ಮನೆಯಿಂದ ಹೊರಹೋಗುವ ಮತ್ತು ಉದ್ಯೋಗದ ಸ್ಥಳದಲ್ಲಿ ಸುರಕ್ಷತೆಯ ಬಗೆಗೆ ಚಿಂತಿಸಿ ಎಚ್ಚರಿಕೆಯ ಹೆಜ್ಜೆ ಇಡಬೇಕಾಗಿದೆ. ಅರ್ಧರಾತ್ರಿಯಲ್ಲಿ ನಿರ್ಭೀತಿಯಿಂದ ಓಡಾಡಲು ಬಯಸಿದ ಮಹಿಳೆಗೆ ಇಂದು ಅದು ಕನಸಾಗಿ ಉಳಿದಿದೆ. ಹೊಸ ಹೊಸ ಅವಕಾಶಗಳು ಒದಗಿಬಂದರೂ ಕೆಲವು ಉದ್ಯೋಗಗಳನ್ನು ಒಪ್ಪಿಕೊಳ್ಳಲು ಆಕೆ ಹಿಂದೇಟು ಹಾಕಬೇಕಾಗಿದೆ. ಇಲ್ಲವೇ ತೊಂದರೆಗೆ ಒಳಗಾಗಬೇಕಾಗಿದೆ ಅಥವಾ ತನ್ನಿಚ್ಛೆಗೆ ವಿರುದ್ಧವಾಗಿ ನಡೆದುಕೊಳ್ಳಬೇಕಾಗಿದೆ. ಹೀಗೆ ಮಹಿಳೆಯನ್ನು ಸುತ್ತುವರಿದು ಕಾಡುವ ಹಲವು ಸಮಸ್ಯೆಗಳನ್ನು ಗಂಭೀರವಾಗಿ ಚಿಂತನೆಗೆ ಒಡ್ಡಿ ಕೌಟುಂಬಿಕವಾಗಿ - ಸಾಮಾಜಿಕವಾಗಿ ವಿವರಿಸಲಾಗಿದೆ.
©2024 Book Brahma Private Limited.