ಮಹಿಳೆಯ ಸಾಹಿತ್ಯಿಕ ಹೆಜ್ಜೆಗಳನ್ನು ಗುರುತಿಸುವ, ವಿಭಿನ್ನ ಆಯಾಮಗಳ ಮೇಲೆ ಬೆಳಕು ಚೆಲ್ಲುವಂತಹ ಅಪರೂಪದ ಕೃತಿ, ಡಾ.ಶಕುಂತಲಾ ಸಿ.ದುರಗಿ ಅವರ 'ಮಹಿಳಾ ಸಾಹಿತ್ಯ ಮತ್ತು ಸಂವೇದನೆ'. 'ಮಹಿಳೆಯರ ಬರಹದ ಹಿಂದಿನ ಸಾಮಾಜಿಕ ಒತ್ತಡಗಳು', 'ಕನ್ನಡ ಮಹಿಳಾ ಸಾಹಿತ್ಯದಲ್ಲಿ ಸಂವೇದನೆ ಮತ್ತು ಪ್ರತಿಭಟನೆ', 'ಆಧುನಿಕ ಮಹಿಳಾ ಸಾಹಿತ್ಯದಲ್ಲಿ ಕೌಟುಂಬಿಕ ಸಂವೇದನೆ', ಈ ಮೂರು ಲೇಖನಗಳಲ್ಲಿ ಮಹಿಳೆ, ಸಾಹಿತ್ಯ, ಕುಟುಂಬ ಮತ್ತು ಸಮಾಜದ ಹಿನ್ನೆಲೆಯಲ್ಲಿ ಮಹಿಳಾ ಸಾಹಿತ್ಯ ಬೆಳೆದು ಬಂದ ದಾರಿ ಗುರುತಿಸಲಾಗಿದೆ.
ಆಧುನಿಕ ಕನ್ನಡ ಸಾಹಿತ್ಯದ ಮೊದಲ ಲೇಖಕರು, ಪತ್ರಕರ್ತರು ಎಂದೇ ಗುರುತಿಸಲಾಗಿರುವ ನಂಜನಗೂಡು ತಿರುಮಲಾಂಬಾ ಅವರ ಪ್ರತ್ಯೇಕ ಅಧ್ಯಯನ ಕೈಗೊಂಡ ಎರಡು ಲೇಖನಗಳಿವೆ. 'ನಂಜನಗೂಡು ತಿರುಮಲಾಂಬ ಅವರ ಬದುಕು - ಬರಹ' ಮತ್ತು 'ನಂಜನಗೂಡು ತಿರುಮಲಾಂಬ ಅವರ ಇತರ ಸಾಹಿತ್ಯ : ಗೀತೆ-ಪ್ರಬಂಧ-ಮಾದರಿ ವ್ಯಾಸಂಗ ಪತ್ರ'. ತ್ರಿವೇಣಿ ಮತ್ತು ವಾಸಂತಿಕಾ ಬಿಕ್ಕಣ್ಣವರ ಇಬ್ಬರು ಲೇಖಕಿಯರಿಗೆ ಸಂಬಂಧಿಸಿದ ಲೇಖನಗಳಿವೆ. ಒಂದು ತ್ರಿವೇಣಿಯವರು ಬರೆದ ಕಾದಂಬರಿಗಳ ಅವಲೋಕನ. ಇನ್ನೊಂದು ವಾಸಂತಿಕಾ ಬಿಕ್ಕಣ್ಣವರ ಅವರ ಕಾವ್ಯ ಕಥನಗಳ ಕುರಿತು ಸಂಶೋಧನೆ ಮಾಡಿ ಹೊರ ತಂದ ಅಜ್ಞಾತ ಕವಿಯ ಲೇಖನವಿದೆ. ಲೇಖಕಿಯರೇ ರಚಿಸಿದ ಸಾಹಿತ್ಯದಲ್ಲಿ ಮಹಿಳೆ ಮತ್ತು ಅವಳದೇ ಸಮಸ್ಯೆಗಳನ್ನು ಕೊನೆಯ ಲೇಖನದಲ್ಲಿ ವಿವೇಚಿಸಿದ್ದಾರೆ. ಅದರ ಶೀರ್ಷಿಕೆ, 'ಲೇಖಕಿಯರ ಬರವಣಿಗೆಯಲ್ಲಿ ಮಹಿಳೆ ಮತ್ತು ಸಮಸ್ಯೆಗಳು : ವಿವೇಚನೆ'.
ಕೃತಿಗೆ ಬರೆದ ಬೆನ್ನುಡಿಯಲ್ಲಿ ಸಾಹಿತಿ ಪ್ರಭಾಕರ ಜೋಶಿ ಅವರು 'ಮಹಿಳಾ ಸಾಹಿತ್ಯ ಬೆಳೆದು ಬಂದ ದಾರಿಯ ಅವಲೋಕನ ಮಾಡಬಯಸುವ ಯಾರೇ ಆಗಲಿ ಈ ಕೃತಿಯನ್ನು ಪರಾಮರ್ಶಿಸಲೇಬೇಕು ಎನ್ನುವಷ್ಟು ಸತ್ವಯುತ ಬರಹಗಳು ಇಲ್ಲಿವೆ' ಎಂದು ಅಭಿಪ್ರಾಯ ಪಟ್ಟಿದ್ದಾರೆ
©2024 Book Brahma Private Limited.