ಲೇಖಕಿಯಾಗಿ, ಕವಯಿತ್ರಿಯಾಗಿ, ಸಂಘಟಕಿಯಾಗಿ ಈಗಾಗಲೇ ನಾಡಿನಾದ್ಯಂತ ಗುರುತಿಸಿಕೊಂಡ ಚಂದ್ರಕಲಾ ನಂದಾವರ ಅವರು ತಮ್ಮ ಮಹಿಳಾನಿಷ್ಠ ಬರಹಗಳಿಂದ ಅವರು ಗಮನಸೆಳೆದವರು. 'ಹೊಸ್ತಿಲಿನಿಂದೀಚೆಗೆ' ಕೃತಿಯ ಬಳಿಕ ಇದೀಗ ಅವರು ಹೆಣ್ಣಿಗೆ ವರ್ತಮಾನವಿಲ್ಲವೆ ಕೃತಿಯನ್ನು ಹೊರತಂದಿದ್ದಾರೆ. ಕೃತಿಯ ಹೆಸರೇ ಹೇಳುವಂತೆ ಈ ಕೃತಿ, ಮಹಿಳಾ ಕೇಂದ್ರಿತವಾಗಿದೆ. ಹೆಣ್ಣಿನ ಕಣ್ಣಲ್ಲಿ ಸಮಾಜವನ್ನು ನೋಡಿದ್ದು ಮಾತ್ರವಲ್ಲ, ಮಹಿಳೆಯರ ಬದುಕನ್ನು ಅರ್ಥೈಸುವ ಪ್ರಯತ್ನವನ್ನು ಈ ಕೃತಿಯಲ್ಲಿ ಮಾಡಲಾಗಿದೆ.ಮೊದಲ ಎರಡು ಲೇಖನಗಳು ಅಖಿಲ ಕರ್ನಾಟಕ ಲೇಖಕಿಯರ ಸಂಘದ ಸಮ್ಮೇಳನಕ್ಕೆ ಸಂಬಂಧಪಟ್ಟುದಾದರೆ, ಉಳಿದುದು ಮಹಿಳೆಗೆ ಸಂಬಂಧಿಸಿ ಸಾಂದರ್ಭಿಕ ಲೇಖನಗಳು. ಇಲ್ಲಿ ಒಟ್ಟು 18 ಲೇಖನಗಳಿವೆ. “ಮಹಿಳಾ ಸ್ವಾತಂತ್ರ ಮತ್ತು ಗಾಂಧೀಜಿ' ಲೇಖನದಲ್ಲಿ ಗಾಂಧೀಜಿ ಹೇಗೆ ಮಹಿಳಾ ಸ್ವಾತಂತ್ರವನ್ನು ಕಂಡುಕೊಂಡಿದ್ದರು ಎನ್ನುವುದನ್ನು ವಿಶ್ಲೇಷಿಸುತ್ತಾರೆ. ಸ್ವಾತಂತ್ರ ಪೂರ್ವ ಮಹಿಳೆಯ ಸ್ವಾತಂತ್ರದ ಕಲ್ಪನೆ ಮತ್ತು ಇತ್ತೀಚಿನ ಸ್ವಾತಂತ್ರದ ಕಲ್ಪನೆಗಳನ್ನು ತುಲನೆ ಮಾಡುತ್ತಾ, ಭಾರತೀಯ ಮಹಿಳೆಯು ಸ್ವಾತಂತ್ರ, ಸಮಾನತೆಯೊಂದಿಗೆ ತನ್ನ ಅಸ್ಮಿತ ಹಾಗೂ ಆತ್ಮಗೌರವವನ್ನು ಕಾಪಾಡಿಕೊಳ್ಳಬೇಕು ಎಂದು ಅಭಿಪ್ರಾಯಪಡುತ್ತಾರೆ. ಹಾಗೆಯೇ ಸ್ವಾತಂತ್ರ ಮತ್ತು ಸ್ವಚ್ಛಂದತೆಯ ನಡುವಿನ ಗೆರೆಯನ್ನೂ ಅವರು ಈ ಲೇಖನದಲ್ಲಿ ಗುರುತಿಸುತ್ತಾರೆ. ಸಾರಾ ಅಬೂಬಕರ್ ಅವರ ಚಂದ್ರಗಿರಿಯ ತೀರದಲ್ಲಿ ಕಾದಂಬರಿಯನ್ನು ವಿಮರ್ಶಿಸುತ್ತಾ, ಮುಸ್ಲಿಮ್ ಹೆಣ್ಣು ಮಕ್ಕಳ ಬದುಕಿನ ದುರಂತಗಳನ್ನು ಚರ್ಚಿಸುವುದರ ಜೊತೆಗೆ ಒಬ್ಬ ಮುಸ್ಲಿಮ್ ಲೇಖಕಿ ಎದುರಿಸಬೇಕಾದ ಸವಾಲುಗಳನ್ನೂ ಈ ಕೃತಿಯಲ್ಲಿ ಚರ್ಚಿಸಲಾಗಿದೆ.
©2025 Book Brahma Private Limited.