ಹಿರಿಯ ವಿಮರ್ಶಕಿ ಎಂ.ಎಸ್. ಆಶಾದೇವಿ ಅವರು ಪ್ರಜಾವಾಣಿ ಪತ್ರಿಕೆಯ ಭಾನುವಾರದ ಪುರವಣಿ ’ಮುಕ್ತಛಂದ’ದಲ್ಲಿ ಬರೆದ ಲೇಖನಗಳ ಸಂಕಲನ. ಕನ್ನಡ ಸಾಹಿತ್ಯದ ಪ್ರಮುಖ ಕೃತಿಗಳನ್ನು ಸ್ತ್ರೀವಾದಿ ಹಿನ್ನೆಲೆಯಲ್ಲಿ ಮರುಓದಿಗೆ ಒಳಪಡಿಸಿದ ಫಲವಾಗಿರುವ ಲೇಖನಗಳಿವು. ಲೇಖಕನ ಸಾಹಿತ್ಯ ಕೃತಿ ಎಷ್ಟೇ ಪ್ರಮುಖವಾಗಿದ್ದರೂ ಆಯಾಕಾಲದ ವಿಮರ್ಶೆಯ ಪರೀಕ್ಷೆಗೆ ಒಳಗಾಗಲೇಬೇಕು. ಹೀಗೆ ಸ್ತ್ರೀವಾದಿ ಚಿಂತನೆಯ ಟೂಲ್ ಗಳನ್ನು ಬಳಸಿ ಬರೆದ ಲೇಖನಗಳಿವು. ಈ ಪುಸ್ತಕದಲ್ಲಿ ಒಟ್ಟು 49 ಲೇಖನಗಳಿವೆ. ಪುಣೇಕರ ಪಾತ್ರ ಗಂಗವ್ವ, ರಂ.ಶಾ. ಸೃಷ್ಟಿಸಿದ ತಾಯಿಸಾಹೇಬದ ಪರ್ವ, ಎಂ.ಕೆ. ಇಂದಿರಾ ಅವರ ’ಫಣಿಯಮ್ಮ’ ಹೀಗೆ ಕನ್ನಡ ಸಾಹಿತ್ಯದಲ್ಲಿ ಸ್ತ್ರೀಪಾತ್ರಗಳ ಮತ್ತು ಲೇಖಕರ ಸ್ತ್ರೀ ಸಂಬಂಧಿತ ಧೋರಣೆಗಳನ್ನು ಕುರಿತು ಲೇಖಕಿ ಚರ್ಚಿಸಿದ್ದಾರೆ. ಮುನ್ನುಡಿಯಲ್ಲಿ ರಹಮತ್ ತರೀಕೆರೆ ಅವರು ’ಸಾಹಿತ್ಯ- ಸಮಾಜ- ಸಂಸ್ಕೃತಿಗಳನ್ನು ಸ್ತ್ರೀಸಂವೇದನೆಯ ಮೂಲಕ ನೋಡುವುದಕ್ಕೆ ಬೇಕಾದ ದೃಷ್ಟಿಕೋನವನ್ನು ವಿಶಾಲ ಓದುಗರಲ್ಲಿ ಹಾಯಿಸುವುದಕ್ಕೆ ಮಾಡಿದ ಪ್ರಯತ್ನವಿದು. ಪಿತೃಸಂಸ್ಕೃತಿಯ ಕ್ರೌರ್ಯ ಮತ್ತು ಹುನ್ನಾರಗಳನ್ನು ತಾತ್ವಿಕ ಎಚ್ಚರದಿಂದ ಶೋಧಿಸುವುದು ಮತ್ತು ಬಯಲುಗೊಳಿಸುವುದು ಇಲ್ಲಿನ ಮುಖ್ಯ ಉದ್ದೇಶ. ’ಗೋಚರ ಹಗೆಯ ಬಗ್ಗೆ ಹೋರಾಡುವುದು ಸುಲಭ; ಅಗೋಚರ ಹಗೆಯ ಎದುರು ಕಾದುವುದು ಕಷ್ಟ’ ಎಂಬ ನಂಬಿಕೆ ಇಲ್ಲಿದ್ದು, ಇದು ಹೆಣ್ಣನ್ನು ಬಂಧಿಸಿರುವ ಮೂರ್ತರೂಪದ ಕಟ್ಟಳೆಗಳಿಗಿಂತ ಅಮೂರ್ತ ಕಟ್ಟಳೆಗಳ ಬಗ್ಗೆಯೇ ಸೂಕ್ಷ್ಮವಾಗಿ ಚಿಂತನೆ ಮಾಡಲು ಪ್ರೇರೇಪಿಸಿದೆ’ ಎಂದು ವಿವರಿಸಿದ್ದಾರೆ.
©2024 Book Brahma Private Limited.