ಮಕ್ಕಳ ಸಾಹಿತ್ಯದಲ್ಲಿ ಕಳೆದ ಎರಡು ದಶಕಗಳಿಂದ ಕ್ರಿಯಾಶೀಲರಾಗಿರುವ ಗೋವಿಂದರೆಡ್ಡಿ ಅವರು ರಚಿಸಿರುವ ‘ಸಿರಿಧಾನ್ಯ’ ನಾಟಕ ಈಗಾಗಲೇ ಕನ್ನಡದ ಜನ ಮಾನಸದಲ್ಲಿ ನೆಲೆ ನಿಂತ ಕಥಾವಸ್ತುವಾಗಿದೆ. ಕನಕದಾಸರ ಬಹು ಪ್ರಸಿದ್ಧ ಕೃತಿಯಾದ ‘ರಾಮಧಾನ್ಯ ಚರಿತೆ’ಯನ್ನು ವರ್ತಮಾನಗೊಳಿಸುವ ಪ್ರಯತ್ನವಾಗಿದೆ. ಇಂತಹ ಸುಪರಿಚಿತ ಕಥೆಯನ್ನು ಆಧರಿಸಿ ನಾಟಕ ಬರೆಯುವಲ್ಲಿ ಗೋವಿಂದರೆಡ್ಡಿ ಅವರು ಕ್ಯಾಲಿಕಿಲೇಟೆಡ್ ರಿಸ್ಕ್ ತೆಗೆದುಕೊಂಡು ಈ ನಾಟಕವನ್ನು ರಚಿಸಿದ್ದಾರೆ. ಪುರಾಣದ ಕಥೆಯನ್ನು ವರ್ತಮಾನಗೊಳಿಸುವ ಮಾದರಿ ಕನ್ನಡ ಸಂವೇದನೆಯಲ್ಲಿ ಅತ್ಯಂತ ಹಳೆಯ ಹಾಗೂ ಪ್ರಚಲಿತವಾಗಿರುವ ವಿಧಾನವಾಗಿದೆ. ಭಾರತೀಯ ಸಮಾಜದಲ್ಲಿ ಬೇರು ಬಿಟ್ಟಿರುವ ಜಾತಿಯಂತಹ ಅಮಾನವೀಯವೂ ಅಸಹಜವೂ ಆದ ಕಲ್ಪಿತ ಸಾಮಾಜಿಕ ಮೌಲ್ಯವ್ಯವಸ್ಥೆ ವ್ಯಕ್ತಿಗೆ ಹುಟ್ಟಿನಿಂದ ದಕ್ಕುವ ಸ್ವಭಾವಸಹಜ ಪ್ರತಿಭೆ ಮತ್ತು ಸಾಮರ್ಥ್ಯಗಳನ್ನು ಕುಂದುಗೊಳಿಸುವುದಲ್ಲದೆ ಹತ್ತಿಕ್ಕುವ ಹುನ್ನಾರಗಳನ್ನು ಜಾರಿ ಮಾಡುತ್ತಲೇ ಬಂದಿದೆ. ಕನ್ನಡದ ಎಲ್ಲಾ ಕಾಲದ ಸೃಜನಶೀಲ ಲೇಖಕರು ಈ ವಿದ್ಯಮಾನವನ್ನು ಗುರುತಿಸುವ ಕೆಲಸ ಮಾಡುತ್ತಲೇ ಈ ಹುಳುಕನ್ನು ನಿರ್ನಾಮ ಮಾಡುವ ಉಪಾಯಗಳನ್ನು ತಮ್ಮ ಕೃತಿಗಳಲ್ಲಿ ಶೋಧಿಸುತ್ತಾ ಬಂದಿದ್ದಾರೆ. ಗೋವಿಂದರೆಡ್ಡಿ ಇಪ್ಪತ್ತೊಂದನೆಯ ಶತಮಾನದಲ್ಲೂ ಆ ವಿದ್ಯಮಾನದ ಹೊಣೆಯನ್ನು ಮುಂದುವರೆಸಿದ್ದಾರೆ. ಸಿ.ಎಂ.ಗೋವಿಂದರೆಡ್ಡಿಯವರ ಈ ಧೈರ್ಯವನ್ನು ಅಭಿನಂದಿಸುತ್ತೇನೆ. ನಮ್ಮ ಶಿಕ್ಷಣ ವ್ಯವಸ್ಥೆ ಮಾರುಕಟ್ಟೆ ಮತ್ತು ಕಾರ್ಪೋರೇಟ್ ಉದ್ಯಮಪತಿಗಳ ನಿಯಂತ್ರಣದಲ್ಲಿ ಸಿಕ್ಕಿ ಸಾಹಿತ್ಯ ಸಂಸ್ಕೃತಿಗಳಿಂದ ಪಡೆಯುತ್ತಿದ್ದ ವಿವೇಕ ಜ್ಞಾನಗಳಿಂದ ದೂರ ಸರಿಯುತ್ತಿರುವುದು ಭವಿಷ್ಯತ್ತಿನಲ್ಲಿ ಸಂಭವಿಸುವ ಸಾಂಸ್ಕೃತಿಕ ದುರಂತದ ಮುನ್ಸೂಚನೆಯಾಗಿದೆ. ಇಂತಹ ಇಕ್ಕಟ್ಟಿನಲ್ಲಿ ಸಾಹಿತ್ಯ ಮತ್ತು ರಂಗಭೂಮಿಯಂತಹ ಸಂಸ್ಥೆಗಳು ಈ ಬಿರುಕನ್ನು ತುಂಬುವ ಕೆಲಸವನ್ನು ಮಾಡಬೇಕು. ಗೋವಿಂದರೆಡ್ಡಿಯವರ ಈ ಬರಹಗಳ ಹಿಂದೆ ಈ ದೂರಗಾಮಿ ದೃಷ್ಟಿ ಕೆಲಸ ಮಾಡುತ್ತಿದೆ ಎನ್ನುವುದು ಸಮಾಧಾನದ ಸಂಗತಿ. ಇನ್ನು ಸಿರಿಧಾನ್ಯ ನಾಟಕ ಇವರ ‘ಬಲಿ’ ನಾಟಕಕ್ಕೆ ಹೋಲಿಸಿದರೆ ಸರಳರೇಖಾತ್ಮಕವಾಗಿ ಚಲಿಸುತ್ತದೆ. ಶ್ರಮದ ಮಹತ್ವವನ್ನು ಹಾಗೂ ಜ್ಞಾನವನ್ನು ಆಸ್ತ್ರವಾಗಿ ಬಳಸಿ ಸಮುದಾಯದ ಅಹಂಕಾರವನ್ನು ಒಡೆಯುವ ವಿನ್ಯಾಸವನ್ನು ‘ಸಿರಿಧಾನ್ಯ’ ನಾಟಕದಲ್ಲಿ ಗೋವಿಂದರೆಡ್ಡಿಯವರು ಮಾಡಿದ್ದಾರೆ. ಕನಕದಾಸರಿಗೆ ತೀವ್ರವಾಗಿ ನಿಷ್ಠರಾಗಿರುವ ನಾಟಕಕಾರರು ರಾಗಿ ಮತ್ತು ಬತ್ತಗಳನ್ನು ಶೂದ್ರ ಮತ್ತು ಬ್ರಾಹ್ಮಣ ಜಾತಿ ಸೂಚಕಗಳಾಗಿ ಬಳಸುವಾಗ ಚರಿತ್ರೆಯ ಸಿದ್ಧ ಅರ್ಥಗಳನ್ನೇ ಅವಲಂಬಿಸಿರುವುದು ಕಂಡುಬರುತ್ತದೆ. ಜಾತಿ ಮತ್ತು ಮತೀಯ ಅಹಂಕಾರಗಳು ವರ್ತಮಾನದಲ್ಲಿ ಪಡೆದುಕೊಂಡಿರುವ ಛದ್ಮವೇಶಗಳನ್ನು ಈ ದೃಶ್ಯಗಳಲ್ಲಿ ಕಟ್ಟಿಕೊಟ್ಟಿದ್ದರೆ ಈ ನಾಟಕ ಮತ್ತಷ್ಟು ವಿಶಾಲ ಆರ್ಥವನ್ನು ಪಡೆಯುವ ಸಾಧ್ಯತೆ ಇತ್ತು. ಗೋವಿಂದರೆಡ್ಡಿ ಅವರು ಮುಂದಿನ ದಿನಗಳಲ್ಲಿ ಬರೆಯುವಾಗ ಈ ಅಂಶಗಳನ್ನು ಗಮನಿಸಿದರೆ ಅವರ ಕೃತಿಗಳು ಮಕ್ಕಳ ನಾಟಕ ಕ್ಷೇತ್ರದಲ್ಲಿ ಉಂಟಾಗಿರುವ ರಂಗಕೃತಿಗಳ ಕೊರತೆಯನ್ನು ತುಂಬಿಸಿಕೊಡಬಲ್ಲವು. ಈ ಕೃತಿಯು ನಾಟಕವಾಗಿ ರಂಗದ ಮೇಲೆ ಅಭಿನಯಗೊಳ್ಳುವ ಮೂಲಕ ಸಾರ್ಥಕತೆಯನ್ನು ಪಡೆದುಕೊಳ್ಳಲಿ ಎಂದು ಹಾರೈಸುತ್ತೇನೆ. ಡಾ.ಗೋವಿಂದರೆಡ್ಡಿಯವರು ಹಲವು ವರ್ಷಗಳ ಕಾಲ ಚಿಂತಾಮಣಿಯ ಕಾಲೇಜಿನಲ್ಲಿ ನನ್ನ ಸಹೋದ್ಯೋಗಿಯಾಗಿದ್ದವರು ಅವರ ಒಡನಾಟ ಮತ್ತು ಸ್ನೇಹ ನನ್ನ ನೆನಪಿನಲ್ಲಿ ಇನ್ನೂ ಹಸಿರಾಗಿವೆ. ಅವರು ಮಕ್ಕಳ ಕಾವ್ಯ ಕ್ಷೇತ್ರದಲ್ಲಿ ಸಾಧಿಸಿದ ಯಶಸ್ಸು ನಾಟಕ ಕ್ಷೇತ್ರದಲ್ಲೂ ದೊರಕಲಿ ಎಂದು ಶುಭಕೋರುತ್ತೇನೆ ಎಂದು ಡಾ.ಕೆ.ವೈ.ನಾರಾಯಣಸ್ವಾಮಿ ಬರೆದಿದ್ದಾರೆ.
©2024 Book Brahma Private Limited.