ಸಾವಿರದ ಶರಣವ್ವ ಕನ್ನಡದ ತಾಯೇ ಚಂದ್ರ ಶೇಖರ ಕಂಬಾರ ಅವರ ಕೃತಿಯಾಗಿದೆ. ಭಾವನೆಯನ್ನು ದಾಖಲಿಸುವಂತೆ ಬರೆದಿಡುವುದು ಮೂಲತಃ ಸಾಹಿತ್ಯವೆನಿಸುತ್ತದೆ. ಈ ಕಾರಣಕ್ಕಾಗಿಯೇ ಅದು ಲೌಕಿಕವಾಗುತ್ತದೆ. ಆದರೆ ಜನಪದ ಕಾವ್ಯ ಬೇರೆ; ಅದು ಕಾಲಬದ್ಧ ಅಥವಾ ದೇಶ, ಪ್ರದೇಶಬದ್ಧ ಅಲ್ಲ ಎಂಬ ಅರ್ಥದಲ್ಲಿ ಜನಪದ ಕಾವ್ಯ ಎಷ್ಟರಮಟ್ಟಿಗೆ ಸಮಕಾಲೀನವೋ ಅಷ್ಟರಮಟ್ಟಿಗೆ ಪ್ರಾಚೀನವೂ ಹೌದು. ಜನಪದ ಕತೆಯ ನೇಯ್ಗೆಯಲ್ಲೇ ಪ್ರಾಚೀನ ಮತ್ತು ಅರ್ವಾಚೀನ ಅಂಶಗಳ ಯಾವುದೇ ಹಿಂಜರಿಕೆ ಇಲ್ಲದೆ ಮುಕ್ತ ವಿನಿಮಯವಿದೆ. ಒಂದು ಕತೆಯಲ್ಲಿ ಸೊಸೆಯೊಬ್ಬಳು ಹೇಮರೆಡ್ಡಿ ಮಲ್ಲಮ್ಮನಂತೆಯೇ ವರ್ತಿಸುತ್ತಾಳೆ. ಮಲ್ಲಮ್ಮನ ಜೀವನವನ್ನು ವರ್ಣಿಸುವ ಇನ್ನೊಂದು ಕತೆಯಲ್ಲಿ ಮಲ್ಲಮ್ಮನು ನೆರೆಯ ಗ್ರಾಮದ ಒಬ್ಬ ಸಾಮಾನ್ಯ ಹೆಂಗಸಿನಂತೆಯೇ ವರ್ತಿಸುತ್ತಾಳೆ. ಪ್ರಾಚೀನ ಮತ್ತು ಅರ್ವಾಚೀನಗಳು ಒಂದರೊಡನೊAದು ಬೆರೆತು, ಮೂರ್ತವೂ ಅಮೂರ್ತವೂ - ಎರಡೂ ಆಗಿರುವ ಒಂದು ಸಾರ್ವತ್ರಿಕತೆಯನ್ನು ಉತ್ಪಾದಿಸುತ್ತವೆ, ಪೌರಾಣಿಕ ಪಾತ್ರಗಳು ಹಳ್ಳಿಯ ಜನಗಳಂತೆಯೇ ನಡೆದುಕೊಳ್ಳುತ್ತವೆ, ವರ್ತಿಸುತ್ತವೆ. ಸೀತೆಯು ಮರದ ಕೊಂಬೆಗೆ ತೊಟ್ಟಿಲು ಕಟ್ಟುತ್ತಾಳೆ. ಹಟ್ಟಿಯ ಕೆರೆಯಲ್ಲಿ ಋತುಸ್ನಾನ ಮಾಡುತ್ತಾಳೆ. ಭೀಮನು ಒಂದು ಕೆರೆಯ ಬಳಿ ಅಡುಗೆ ಮಾಡುತ್ತಾನೆ. ಕುಂತಿಯು ತನ್ನ ಮಕ್ಕಳ ಒಳಉಡುಪುಗಳನ್ನು ಒಂದು ನಿರ್ದಿಷ್ಟ ಬಂಡೆಯ ಮೇಲೆ ಒಗೆಯುತ್ತಾಳೆ. ಸೀತೆಯ ಮದುವೆಗೆ ತಮ್ಮನ್ನು ಆಹ್ವಾನಿಸಲಿಲ್ಲವೆಂದು ಒಬ್ಬ ಗರತಿಯು ಜನಕ ಮಹಾರಾಜನಿಗೆ ದೂರು ಸಲ್ಲಿಸುವುದನ್ನು ಒಂದು ಕನ್ನಡ ಜನಪದ ಗೀತೆ ದಾಖಲಿಸಿದೆ!
©2024 Book Brahma Private Limited.