‘ದಿ. ವಿಂಟರ್‍ಸ್ ಟೇಲ್’ ಎಂಬ ಶೆಕ್ಸ್ ಪಿಯರ್ ನ ನಾಟಕದ ಸಣ್ಣ ವೃತ್ತಾಂತವಾಗಿ ಲೇಖಕ ಜಿ.ಎಂ. ಕೃಷ್ಣಮೂರ್ತಿ ಅವರು ಮಕ್ಕಳಿಗಾಗಿ ರಚಿಸಿದ ನಾಟಕ ಕೃತಿ ಇದು. ಶೆಕ್ಸ್ ಪಿಯರನ ಜನಪ್ರಿಯ ವೈನೋದಿಕ ನಾಟಕಗಳಲ್ಲಿ ‘ದಿ ವಿಂಟರ್‍ಸ್ ಟೇಲ್’ ಸಹ ಒಂದು. 1623ರಲ್ಲಿ ಈ ನಾಟಕ ಮೊದಲ ಬಾರಿಗೆ ಪ್ರದರ್ಶನ ಕಂಡು ನಂತರ ವಿಶ್ವವ್ಯಾಪಿ ಪ್ರಸಿದ್ಧಿ ಪಡೆಯಿತು. ಸಿಸಿಲಿ ದೇಶದಲ್ಲಿ ನಾಟಕ ಜರುಗುತ್ತದೆ. ಅಲ್ಲಿಯ ದೊರೆಯು ಲಿಯೋಂಟಸ್ ಈ ನಾಟಕದ ಕೇಂದ್ರ ಬಿಂದು. ಆತನು ಸಂಶಯಗಳ ಹುತ್ತ. ಪತ್ನಿಯ ನಿಷ್ಠೆಯನ್ನು ಸಂಶಯಿಸುತ್ತಾನೆ. ಇದರ ಪರಿಣಾಮ, ತನ್ನ ಉತ್ತಮ ಗೆಳೆಯನನ್ನು ಕೊಲ್ಲಿಸುವಂತೆ ಹಾಗೂ ಪತ್ನಿಯನ್ನು ಜೈಲಿನಲ್ಲಿಡುವಂತೆ ಮಾಡುತ್ತದೆ. ಈ ನಾಟಕವು 16 ವರ್ಷಗಳ ಕಾಲಾವಧಿಯುದ್ದಕ್ಕೂ ನಡೆಯುವ ಕಥಾವಸ್ತು ಹೊಂದಿದೆ. ಕೊನೆಯಲ್ಲಿ, ದೊರೆಯು ತನ್ನ ತಪ್ಪುಗಳನ್ನು ಅರಿತುಕೊಳ್ಳುತ್ತಾನೆ. ಹೆಂಡತಿ -ಮಗಳೊಂದಿಗೆ ಸುಖವಾಗಿರುತ್ತಾನೆ. ಇದಿಷ್ಟು ಕಥಾ ವಸ್ತು. ವಿಂಟರ್ ಎಂಬ ಪದಕ್ಕೆ ಚಳಿಗಾಲ ಎಂಬರ್ಥವೂ ಇದೆ. ಉತ್ಸಾಹ ಶೂನ್ಯವಾದ ಕಾಲ, ನಿಧಾನವಾಗಿ ಮಾಗುವ ಕಾಲ, ಹಣ್ಣಾಗುವ ಕಾಲ ಎಂದೂ ಅರ್ಥಗಳಿದ್ದು, ಇವನ್ನು ಸಹ ಬಳಸಬಹುದು ಎಂದು ಲೇಖಕರು ಹೇಳಿಕೊಂಡಿದ್ದಾರೆ. ಮಕ್ಕಳಿಗೆ ಅರ್ಥವಾಗುವ ರೀತಿಯಲ್ಲಿ ಸರಳ ನಿರೂಪಣಾ ಶೈಲಿಯ ಈ ನಾಟಕವನ್ನು ಮಕ್ಕಳು ಹಾಗೂ ಪಾಲಕರೂ ಸಂಭ್ರಮಿಸಬಹುದು.
©2024 Book Brahma Private Limited.