‘ವಲಸೆ ಎಲ್ಲಿಗೆ…?’ ಲೇಖಕ ಹ.ಸ. ಬ್ಯಾಕೋಡ ಅವರ ಮಕ್ಕಳ ನಾಟಕ. ಈ ಕೃತಿಗೆ ಬಿ.ಎ. ಸನದಿ ಅವರ ಮುನ್ನುಡಿ ಇದೆ. ಕೃತಿಯ ಕುರಿತು ಬರೆಯುತ್ತಾ ಕನ್ನಡದಲ್ಲಿ ಮಕ್ಕಳ ಸಾಹಿತ್ಯದ ಒರತೆಯಲ್ಲಿ ನೀರಿನ ಕೊರೆತ, ಯಾಕೆ, ಸಾಕಾದಷ್ಟು ಪ್ರೌಢ ಸಾಹಿತ್ಯದ ರಾಶಿ. ಬೇಕಾದಷ್ಟು ಜಾನಪದ ಸಾಹಿತ್ಯದ ಪುಣ್ಯಕಾಶಿ. ಮಕ್ಕಳ ಸಾಹಿತ್ಯಕ್ಕೆ ಮಾತ್ರ ಬರ. ಯಾಕೆ ಹೀಗೆ, ಮಕ್ಕಳಲ್ಲಿ ಮಕ್ಕಳಾಗಿ, ಮಕ್ಕಳ ಜೀವ-ಭಾವವನ್ನು ಅರಿತವರಾಗಿ, ಅವರ ಭಾಷಾಕ್ಷಮತೆಯನ್ನು ತಿಳಿದವರಾಗಿ ಸರಳ ಶೈಲಿಯಲ್ಲಿ ಬರೆಯುವ ಕಳಕಳಿ ಯುಳ್ಳವರು ಮಾತ್ರ ಈ ದಾರಿಯನ್ನು ತುಳಿಯಬಲ್ಲರು. ಇಲ್ಲಿ ಕೌಶಲ್ಯಕ್ಕಿಂತಲೂ ಕಳಕಳಿಯೇ ಮಹತ್ವದ್ದೆಂದು ಬೇರೆ ಹೇಳಬೇಕಿಲ್ಲ. ಮಕ್ಕಳ ಅನುಭವ ಕ್ಷೇತ್ರ, ಆ ಕ್ಷೇತ್ರದಲ್ಲಿ ಅವರಾಡುವ ಪಾತ್ರ ವಯೋಮಾನಕ್ಕೆ ತಕ್ಕಂತೆ ಬದಲಾಗುತ್ತದೆ. ಮಕ್ಕಳಿಗೆ ಸಹಜವೆನಿಸಿದ್ದು ಅವರ ಸಹಜ ಸ್ವಭಾವವಾಗಿ ಬೆಳೆದು ಅವರ ವ್ಯಕ್ತಿತ್ವಕ್ಕೆ ಹೊಸ ಕಳೆ ಬರುವಂತೆ ಮಾಡುತ್ತದೆ. ಅದಕ್ಕೆಂದೇ ಮಕ್ಕಳಿಗೆ ಅಂತಿಂಥ ಕಟ್ಟು-ಕರಾರು ಹಾಕದೆ ಬೆಳೆಯಗೊಡಬೇಕೆಂದು ಹಿರಿಯರು ಹೇಳುವುದು. ಮಕ್ಕಳ ಇಂಥ ಸಹಜ ವಿಕಾಸಕ್ಕೆ ಪೂರಕವಾಗುವಂಥ ಸಾಹಿತ್ಯವನ್ನು ಒದಗಿಸುವುದೂ ಅಗತ್ಯವಾಗಿದೆ ಎಂದಿದ್ದಾರೆ ಬಿ.ಎ. ಸನದಿ. ಜೊತೆಗೆ ಹ.ಸ.ಬ್ಯಾಕೋಡ ಅವರು ಈವರೆಗೆ ಮಕ್ಕಳಿಗಾಗಿ ಬರೆದ ಕತೆ-ನಾಟಕಗಳಲ್ಲಿ ಅಂಥ ಸಹಜ ಸಂಸ್ಕಾರದ ಲಕ್ಷಣಗಳು ಒಡೆದು ಕಾಣುತ್ತವೆ. ಪ್ರಸ್ತುತ ಟಿಟ್ಟಿಭ, ಕೊಕ್ಕರೆಗಳೇ ಪ್ರಧಾನ ಪಾತ್ರಗಳಾಗಿರುವ ನಾಟಕದಲ್ಲಿ ಸ್ಪಚ್ಛ ಪರಿಸರದ ಕುರಿತು ಎಷ್ಟು ಸಲೀಸಾದ ಚರ್ಚೆ ನಡೆಯುತ್ತದೆಯಲ್ಲವೇ. ಮಕ್ಕಳು ಈ ನಾಟಕವನ್ನಾಡುವಾಗ ದೊಡ್ಡವರು ಮೈತುಂಬಾ ಕಣ್ಣಾಗಿ ನೋಡಬಹುದು. ಮೈತುಂಬಾ ಕಿವಿಯಾಗಿ ಕೇಳಬಹುದು.ಇಂಥ ಕೌತುಕಪೂರ್ಣ ವಿಷಯವನ್ನು ನಾಟಕರೂಪದಲ್ಲಿ ಅಳವಡಿಸುವ ಚಾತುರ್ಯಕ್ಕಾಗಿ ಬ್ಯಾಕೋಡ ಅವರನ್ನು ಅಭಿನಂದಿಸುತ್ತೇನೆ ಎಂದು ಮೆಚ್ಚುಗೆ ಸೂಚಿಸಿದ್ದಾರೆ.
©2024 Book Brahma Private Limited.