‘ಕರ್ನಾಟಕ ರತ್ನಗಳು’ ಲೇಖಕಿ ವಿಶಾಲಾ ಆರಾಧ್ಯ ಅವರು ಮಕ್ಕಳಿಗಾಗಿ ಬರೆದಿರುವ ನಾಟಕ. ಈ ಕೃತಿಗೆ ಲೇಖಕ ಹ.ಸ. ಬ್ಯಾಕೋಡ ಅವರ ಬೆನ್ನುಡಿ ಬರಹವಿದೆ. ಕೃತಿಯ ಕುರಿತು ಬರೆಯುತ್ತಾ ಮಗುವಾಗಿ ಮಕ್ಕಳನ್ನು ಪ್ರೀತಿಸುವವರಿಂದ ಮಾತ್ರ ಮಕ್ಕಳ ಸಾಹಿತ್ಯವನ್ನ ರಚಿಸಲು ಸಾಧ್ಯ. ಅಂತವರಿಂದ ಮಾತ್ರ ಶುದ್ಧವಾದ ಮಕ್ಕಳ ಸಾಹಿತ್ಯವನ್ನ ನಿರೀಕ್ಷಿಸಬಹುದು. ಬಹು ಮುಖ್ಯವಾಗಿ ಮುಗ್ಧಭಾವಗಳ ಸಂಗಮವಾಗಿರುವ ಮಕ್ಕಳಿಗೆ ಇಷ್ಟವಾಗುವಂತಹ ಯಾವ ಬಗೆಯ ಸಾಹಿತ್ಯ ರಚನೆಯಾಗಬೇಕು, ಮೊಗ್ಗಿನಂತಿರುವ ಅವರ ಮನಸ್ಸು ಅರಳಬೇಕು ಎನ್ನುವ ಸಂಗತಿ ಗಮನದಲ್ಲಿರಬೇಕು. ಪ್ರಪಂಚವನ್ನು ಬೆರಗುಗಣ್ಣಿನಿಂದ ನೋಡುತ್ತ ಹೊಸತನ್ನು ಸ್ವೀಕರಿಸುವ ಮಕ್ಕಳಿಗೆ ಹೊಸತನ್ನು ನೀಡುವ ಸಾಹಿತ್ಯ ರಚನೆ ಇಂದಿಗೆ ಅತ್ಯಗತ್ಯವಾಗಿದೆ. ಅಂತಹ ಸಾಹಿತ್ಯ ರಚನೆಯಲ್ಲಿ ತೊಡಗಿರುವವರ ಪೈಕಿ ವಿಶಾಲಾ ಆರಾಧ್ಯ ಕೂಡ ಒಬ್ಬರು. ಈಗಾಗಲೇ ಬೊಂಬಾಯಿ ಮಿಠಾಯಿ ಮತ್ತು ಗೊಂಬೆಗೊಂದು ಚೀಲ ಎನ್ನುವ ಕಥಾಸಂಕಲನಗಳನ್ನು ಹೊರತಂದಿದ್ದಾರೆ. ಪ್ರಶಸ್ತಿಗೂ ಭಾಜನರಾಗಿದ್ದಾರೆ. ಇದೀಗ ನಾಟಕದ ಮೂಲಕ ಮಕ್ಕಳಿಗೆ ಕರ್ನಾಟಕ ರತ್ನಗಳ ಪರಿಚಯವನ್ನ ಮಾಡಿಕೊಡಲು ಮುಂದಾಗಿರುವುದು ವಿಶೇಷ. ವಿಭಿನ್ನ ಸರಳಶೈಲಿಯ ಸಂಭಾಷಣೆಯ ತಂತ್ರದೊಂದಿಗೆ ನಾಟಕ ರಚಿಸಿದ್ದಾರೆ. ನಿಜಕ್ಕೂ ಮಕ್ಕಳಿಗೆ ಇಷ್ಟವಾಗುವುದರಲ್ಲಿ ಸಂಶಯವಿಲ್ಲ ಎಂದಿದ್ದಾರೆ ಬ್ಯಾಕೋಡ.
©2024 Book Brahma Private Limited.