ಹೆಣ್ಣಿನ ದೇಹ ಅತ್ಯಂತ ಸೂಕ್ಷ್ಮವಾದುದು. ಕಾಲ ಕಾಲಕ್ಕೆ ಹೇಗೆ ಪ್ರಕೃತಿಯಲ್ಲಿ ಪರಿವರ್ತನೆಗಳಾಗುತ್ತದೆಯೋ ಹಾಗೆಯೇ ಹೆಣ್ಣಿನ ದೇಹದಲ್ಲೂ ಬದಲಾವಣೆಗಳು ಘಟಿಸುತ್ತಿರುತ್ತವೆ. ಮಹಿಳಾ ಲೇಖಕಿ ಹೆಣ್ಣಿನ ದೇಹ, ಆರೋಗ್ಯಗಳ ಕುರಿತಂತೆ ಪುರುಷನಿಗಿಂತ ಹೆಚ್ಚು ಪರಿಣಾಮಕಾರಿಯಾಗಿ ಹೇಳಬಲ್ಲಳು. ಯಾಕೆಂದರೆ ಆಕೆ ಸ್ವತಃ ಸ್ತ್ರೀಯಾಗಿ ದೇಹದ ಬದಲಾವಣೆಗಳನ್ನು, ರಚನೆಗಳನ್ನು ಅನುಭವಿಸಿದವಳು. ಸ್ವತಃ ಅನುಭವಿಸಿ ಅದನ್ನು ಬರೆಯುವ ಬರಹ ಮಹಿಳೆಯ ಸಮಸ್ಯೆಗಳಿಗೆ ಹೆಚ್ಚು ಪರಿಣಾಮಕಾರಿಯಾಗಿ ಪರಿಹಾರವನ್ನು ನೀಡಬಲ್ಲುದು. ಈ ನಿಟ್ಟಿನಲ್ಲಿ ಡಾ. ಎಚ್. ಗಿರಿಜಮ್ಮ ಅವರು ಬರೆದಿರುವ ಸ್ತ್ರೀ ದೇಹ ಅತ್ಯಂತ ಮುಖ್ಯ ಕೃತಿಯಾಗಿದೆ. ಡಾ. ಎಚ್. ಗಿರಿಜಮ್ಮ ಮಹಿಳೆಯರ ಆರೋಗ್ಯದ ಕುರಿತಂತೆ ಬಹಳಷ್ಟು ಲೇಖನಗಳನ್ನು ಬರೆದವರು. ಈ ಕೃತಿಯಲ್ಲಿ, ಮಹಿಳೆಯ ದೇಹ, ಅದರ ರಚನೆ ಹಾಗೂ ನಮಗರಿವಿಲ್ಲದೆಯೇ ದೇಹದೊಳಗೆ ನಡೆಯುವ ಆಂತರಿಕ ಕಾರ್ಯ ಚಟುವಟಿಕೆಗಳ ಬಗ್ಗೆ ನಮಗೆ ಅರಿವು ಮೂಡಿಸುವ ಪ್ರಯತ್ನವಿದೆ. ದೇಹದ ಪರಿಚಯದೊಂದಿಗೆ ನಮ್ಮ ಅಂಗಾಂಗಗಳು ವಿವಿಧ ಕಾಯಿಲೆಗಳಿಗೆ ತುತ್ತಾಗುವ ಕಾರಣಗಳು ಹಾಗೂ ಮುಂಜಾಗೃತೆಯಿಂದ ರೋಗಗಳನ್ನು ದೂರವಿಡುವ ಬಗೆ ವಿವರಗಳನ್ನು ಈ ಕೃತಿಯಲ್ಲಿ ನೀಡಿದ್ದಾರೆ.
©2024 Book Brahma Private Limited.