ಕನ್ನಡದ ಪ್ರಸಿದ್ಧ ಸಂಶೋಧಕ, ವಿಮರ್ಶಕ ಹಾಗೂ ಚಿಂತಕ ರಹಮತ್ ತರೀಕೆರೆ. ’ಕತ್ತಿಯಂಚಿನ ದಾರಿ’ ವಿಮರ್ಶಾ ಕೃತಿಗೆ 2010ರ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದೆ.
’ಇಲ್ಲಿ ಯಾರೂ ಮುಖ್ಯರಲ್ಲ’ ’ಮಾತು ತಲೆಯೆತ್ತುವ ಬಗೆ’ ಇವು ಇವರ ಪ್ರಮುಖ ಕೃತಿಗಳು. ’ಕರ್ನಾಟಕ ಸೂಫಿಗಳು’, ’ಅಂಡಮಾನ್ ಕನಸು’ ಕೃತಿಗೆ ರಾಜ್ಯ ಸಾಹಿತ್ಯ ಅಕಾಡೆಮಿ ಗೌರವ ದೊರೆತಿದೆ.
ಲೇಖಕ ಡಾ. ರಂಗನಾಥ ಕಂಟನಕುಂಟೆ ಅವರು ನವಕರ್ನಾಟಕ ಪ್ರಕಾಶನಕ್ಕಾಗಿ ತರೀಕೆರೆ ಅವರ ಬದುಕನ್ನು ಪರಿಚಯಿಸುವ ಈ ಕೃತಿ ರಚಿಸಿಕೊಟ್ಟಿದ್ದಾರೆ.
(ಹೊಸತು, ಫೆಬ್ರವರಿ 2013, ಪುಸ್ತಕದ ಪರಿಚಯ)
'ನವಕರ್ನಾಟಕ ಸಾಹಿತ್ಯ ಸಂಪದ' ಮಾಲೆಯಲ್ಲಿ ಸೇರ್ಪಡೆಗೊಂಡ ಈ ಪುಸ್ತಕವು ನಾಡಿನ ಪ್ರಸಿದ್ಧ ಲೇಖಕರೂ, ಹೊಸ ಚಿಂತನೆಯ ಹರಿಕಾರರೂ ಆಗಿರುವ ರಹಮತ್ ತರೀಕೆರೆ ಅವರ ಬದುಕು - ಬರಹಗಳ ಕುರಿತದ್ದಾಗಿದೆ. 'ಕತ್ತಿಯಂಚಿನ ದಾರಿ' ಕೃತಿಗೆ ಕೇಂದ್ರ ಸಾಹಿತ್ಯ ಆಕಾಡೆಮಿ ಪ್ರಶಸ್ತಿ ಪಡೆದಿರುವ ಇದರ ಬಾಳದಾರಿಯೂ ಕತ್ತಿಯಂಚಿನ ಮೇಲಿನ ನಡೆಯೇ ಆಗಿರುತ್ತದೆ. ತಮ್ಮ ಓದು-ಪ್ರವಾಸಗಳಿ೦ದ ವಿವಿಧ ಅನುಭವಗಳನ್ನು ಗಳಿಸಿದ. ರಹಮತ್ ಒಳ್ಳೆಯ ಸಾಹಿತ್ಯವನ್ನು ಕನ್ನಡಿಗರಿಗೆ ನೀಡಿ ಆದರಣೀಯ ಬರಹಗಾರರಾಗಿ ಹೊಮ್ಮಿದ್ದಾರೆ, ಯಾವುದೇ ಮುಲಾಜಿಗೆ ಒಳಗಾಗದೆ ತನ್ನ ನಿಲುವನ್ನು ನಿಷ್ಟುರವಾಗಿ ಪ್ರತಿಪಾದಿಸಿ, ನಿರ್ಭಿಡೆಯಿಂದ ಬರೆಯಬಲ್ಲವರಿವರು. ಸಾಂಸ್ಕೃತಿಕ ಮುಖಾಮುಖಿಯಿಂದ ಹೊಸ ಆಯಾಮದನ್ನೇ ಸೃಷ್ಟಿಸಿ, ವಿವಿಧ ಪ್ರಕಾರಗಳಲ್ಲಿ ಬರವಣಿಗೆ ರೂಢಿಸಿಕೊಂಡು, ವಿಶ್ವವಿದ್ಯಾಲಯದಲ್ಲಿ ಸಾಹಿತ್ಯಯೋಜನೆಗಳನ್ನು ಸಾಕಾರಗೊಳಿಸಿ ಜನಪ್ರಿಯರಾಗಿದ್ದಾರೆ. ಆರೋಗ್ಯಕರ ವಾಗ್ವಾದಗಳನ್ನು ಹುಟ್ಟುಹಾಕಿ ಸಾಹಿತ್ಯ ಸಮುದ್ರವನ್ನು ಮಥಿಸಿದ್ದಾರೆ. ಹೊಸ ಚಿಂತನೆಯ ನವನೀತ ನಮಗಿತ್ತಿದ್ದಾರೆ. ಇವರ ಬದುಕು-ಬರಹ ವೃತ್ತಿಜೀವನ, ಇವರನ್ನರಸಿಬಂದ ಪ್ರಶಸ್ತಿ-ಪುರಸ್ಕಾರಗಳು, ವ್ಯಕ್ತಿಗತ ಸಾಧನೆಗಳು - ಇವೇ ಮುಂತಾದ ವಿವರಗಳನ್ನು ಸಂಗ್ರಹಿಸಿ ದಾಖಲಿಸಿ ಕೃತಿರಚನೆ ಮಾಡಿದವರು ಸಾ|| ರಂಗನಾಥ ಕಂಟವರುಂಟೆ, ಪ್ರತಿಭೆಯದುರಿಗೆ ಇನ್ನೊಂದು ಪ್ರತಿಭೆ. ಭೇಟಿಯಾದಲ್ಲಿ ಪರಸ್ಪರ ಗೌರವ ಮೂಡುವಂತೆ, ರಹಮತ್ ಬಗ್ಗೆ ಬರೆದು ಅವರನ್ನು ತಿಳಿದುಕೊಳ್ಳಲು ಇದೇ ಸೂಕ್ತ ಪುಸ್ತಕ' ಎಂದೆನ್ನುವಂತೆ ಇದನ್ನು ರಚಿಸಿಕೊಟ್ಟಿದ್ದಾರೆ.
©2024 Book Brahma Private Limited.