ಕವಿಯಾಗಿ, ಲೇಖಕರಾಗಿ, ಅಂಕಣಕಾರರಾಗಿ ಪರಿಚಿತರಾಗಿರುವ ತಿರುಮಲೇಶ್ ತಾತ್ವಿಕ ನೆಲೆಯನ್ನಿಟ್ಟುಕೊಂಡು ವರ್ತಮಾನವನ್ನು ಚರ್ಚಿಸುತ್ತಾ ಬಂದವರು. ಹೈದರಾಬಾದಿನ ಇಂಗ್ಲಿಷ್ ಮತ್ತು ವಿದೇಶಿ ಭಾಷೆಗಳ ವಿಶ್ವವಿದ್ಯಾನಿಲಯದಲ್ಲಿ ಪ್ರಾಧ್ಯಾಪಕರಾಗಿರುವ ಇವರು ಕಾವ್ಯ, ಕತೆ, ಕಾದಂಬರಿಗಳಲ್ಲದೆ ಸಾಹಿತ್ಯದ ಎಲ್ಲ ಪ್ರಕಾರಗಳಲ್ಲೂ ಕೃಷಿ ಮಾಡಿದ್ದಾರೆ. ಎಸ್. ಆರ್. ವಿಜಯಶಂಕರ್ ಅವರು ತಿರುಮಲೇಶ್ ಅವರ ಬದುಕುಬರಹಗಳನ್ನು ಅತ್ಯಂತ ನವಿರಾದ ಭಾಷೆಯಲ್ಲಿ ಕುತೂಹಲಕರವಾಗಿ ನಿರೂಪಿಸಿದ್ದಾರೆ. ಕೃತಿಯ ಮೊದಲ ಅಧ್ಯಾಯದಲ್ಲಿ ತಿರುಮಲೇಶರ ಬದುಕನ್ನು ಹಿಡಿದಿಡುವ ಪ್ರಯತ್ನ ಮಾಡಿದ್ದಾರೆ. ಅವರ ಬದುಕು ಹೇಗೆ ಅವರ ಬರಹಗಳ ಮೇಲೆ ಪರಿಣಾಮವನ್ನು ಬೀರಿದೆ ಎನ್ನುವುದನ್ನು ಲೇಖಕರು ಹೇಳು ತ್ತಾರೆ. ಬೇರೆ ಬೇರೆ ಲೇಖಕರು, ಚಿಂತಕರು ತಿರುಮಲೇಶರ ಕುರಿತಂತೆ ಹೇಳಿದ ಮಾತು ಗಳನ್ನು ಈ ಭಾಗದಲ್ಲಿ ದಾಖಲಿಸಲಾಗಿದ್ದು, ಕಾಸರಗೋಡಿನ ಸರಕಾರಿ ಕಾಲೇಜಿನಲ್ಲಿ ಆರ್ಥಿಕ ಭದ್ರತೆಯ ಉದ್ಯೋಗದಲ್ಲಿದ್ದ ತಿರುಮಲೇಶ್ ವೇತನ ರಹಿತರಾಗಿ ಉನ್ನತ ವಿದ್ಯಾಭ್ಯಾಸಕ್ಕೆ ಹೈದರಾಬಾದಿಗೆ ತೆರಳಿದರು ಎಂಬುದು ಅವರ ಕಲಿಯುವ ತಹತಹವನ್ನು ಸೂಚಿಸುತ್ತದೆ. ತಿರುಮಲೇಶರ ಕಾವ್ಯದ ಕುರಿತಂತೆ ವಿಜಯ ಶಂಕರ್ ಆದ್ಯತೆಯ ಮೇಲೆ ಪರಿಚಯಿಸುತ್ತಾರೆ. ಕಾವ್ಯ ಮತ್ತು ಕತೆಗಳಲ್ಲಿ ಅವರು ನಡೆಸಿದ ಪ್ರಯೋಗಗಳು, ಅದು ಕನ್ನಡ ಭಾಷೆ ಮತ್ತು ಸಾಹಿತ್ಯಕ್ಕೆ ನೀಡಿದ ಕೊಡುಗೆಗಳನ್ನು ವಿಮರ್ಶಾತ್ಮಕವಾಗಿ ಚರ್ಚಿಸಲಾಗಿದೆ.
©2024 Book Brahma Private Limited.