ಕತೆಗಾರ ರಾಘವೇಂದ್ರ ಪಾಟೀಲರು ತಮ್ಮ ಕತೆ-ಕಾದಂಬರಿಗಳಿಂದ ಗಮನ ಸೆಳೆದವರು. ಅವರ ’ತೇರು’ ಕಾದಂಬರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸಂದಿತ್ತು. ರಾಘವೇಂದ್ರ ಪಾಟೀಲರ ಜೀವನ ಹಾಗೂ ಅವರ ಕೃತಿಗಳ ಪರಿಚಯವನ್ನು ಚಿಂತಾಮಣಿ ಕೊಡ್ಲೆಕೆರೆ ಅವರು ಮಾಡಿದ್ದರು.
(ವಿಮರ್ಶೆ ಜೂನ್ 2013, ಹೊಸತು)
ಕವಿ-ಲೇಖಕರ ಕುರಿತ ಕೃತಿಗಳು ಕಟ್ಟಿಕೊಡುವ ಚಿತ್ರಣ ಹಾಗೂ ನೀಡುವ ಮಾಹಿತಿ ನೈಜತೆಯಿಂದ ಕೂಡಿದ್ದು ವಸ್ತುನಿಷ್ಠವಾಗಿದ್ದಾಗ ಮಾತ್ರ ಅವು ಸರ್ವರನ್ನೂ ತಲುಪುತ್ತದೆ. ಇಂತಹ ನೈಜಕೃತಿಯೇ ಇದು. ನವಕರ್ನಾಟಕದ ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕೃತ ಕನ್ನಡ ಲೇಖಕರು' ಮಾಲೆಯ ಈ ಕೃತಿ ರಾಘವೇಂದ್ರ ಪಾಟೀಲರ ಬದುಕು-ಬರಹವನ್ನು ಪರಿಚಯಿಸುತ್ತದೆ. ವಿಜ್ಞಾನ ಅಧ್ಯಾಪಕರಾದ ಪಾಟೀಲರ ಸಾಹಿತ್ಯ ಸೇವೆ ಮನನೀಯ ಹಾಗೂ ಶ್ಲಾಘನೀಯ. ಕನ್ನಡ ಸಾಹಿತ್ಯದ ಬಹುಚರ್ಚಿತ ನವೋದಯ ಲೇಖಕರಲ್ಲೊಬ್ಬರು. ಚರಿತ್ರೆ ಹಾಗೂ ಕಲ್ಪಕಥೆಗಳನ್ನು ಒಂದು ಹದದಲ್ಲಿ ಸಂಯೋಜಿಸುವುದು ಪಾಟೀಲರ ಭಿನ್ನ ತಂತ್ರಗಾರಿಕೆ. ಚರಿತ್ರೆ ಹಾಗೂ ವರ್ತಮಾನವನ್ನು ಒಟ್ಟಾರೆ ನೋಡುವ ಇವರ ಬರಹಗಳು ಗ್ರಾಮೀಣ ಸಾಮುದಾಯಿಕ ದೃಷ್ಟಿಯುಳ್ಳವಾಗಿ ಆಧುನಿಕತೆಯಿಂದ ಕೂಡಿವೆ. ಯಾವುದೋ ಒಂದು ಸಿದ್ಧಾಂತಕ್ಕೆ, ತತ್ವಗಳ ಹಿಡಿತಕ್ಕೊಳಪಡದ ನಿರ್ಲಿಪ್ತತೆಯನ್ನೂ, ಸ್ವಾತಂತ್ರ್ಯವನ್ನೂ ಇವರ ಸಾಹಿತ್ಯದಲ್ಲಿ ಕಾಣಬಹುದು. ಸಾಹಿತ್ಯದ ಮುಖ್ಯ ಗುರಿ ಸಮಾಜ ಚಿತ್ರಣವೇ ಆದರೂ ಅತಿಯಾದ ಸಾಮಾಜಿಕತೆ ಲೇಖಕನ ವಾಸ್ತವ ಪ್ರಜ್ಞೆಯನ್ನು ಕಲುಷಿತಗೊಳಿಸಿ, ನಿಯಂತ್ರಿಸುತ್ತದೆ ಎಂದು ಭಾವಿಸುವ ಪಾಟೀಲರು ವಾಸ್ತವವನ್ನೇ ಎಷ್ಟು ವಾಸ್ತವ ಎಂಬ ಪ್ರಶ್ನೆಯನ್ನು ಕಣ್ಣಲ್ಲಿ ಕಣ್ಣಿಟ್ಟು ನೋಡಲು ಯತ್ನಿಸುವ ಕಥೆಗಾರ, ಸಾಹಿತ್ಯ ಮತ್ತು ಸಾಮಾಜಿಕ ವಾಸ್ತವದ ಚರ್ಚೆಯನ್ನು ಕನ್ನಡದ ಮಟ್ಟಿಗೆ ಬೇರೆಯದೇ ನೆಲೆಗೆ ಕೊಂಡೊಯ್ಯುತ್ತಾರೆ. ಪಾಟೀಲರ ಸಾಹಿತ್ಯದಲ್ಲಿ ಗೆಲವು, ಸಂತೋಷಗಳಿಗಿಂತ ಸೋಲುಗಳ ನರಕವೇ ತುಂಬಿಗೊಂಡಿದೆ. ಬಡತನ, ಜಮೀನ್ದಾರಿಯ ದಬ್ಬಾಳಿಕೆ, ಹಸಿವು, ದ್ವೇಷ, ಅಸೂಯೆ, ಸ್ವಾರ್ಥ ಮುಂತಾಗಿ ಸಮಾಜದ ಚಿತ್ರಣವೇ ಅವರ ಕಥೆ-ಕಾದಂಬರಿಗಳ ಧಾತುವಾಗಿದೆ. ಒಟ್ಟಾರೆ ಪ್ರಸ್ತುತ ಕೃತಿ ಪಾಟೀಲರ ಸುಮಾರು ೧೯ ಕೃತಿಗಳ ಪರಿಚಯದ ಜೊತೆಗೆ ಮೌಲಿಕ ಚರ್ಚೆಯನ್ನು ಒಳಗೊಂಡಿದ್ದು, ಅವರ ಬದುಕಿನ ಹಲವು ಪ್ರಮುಖ ಘಟ್ಟಗಳನ್ನು ಹಾಗೂ ಅವರ ಸಮಗ್ರ ಸಾಹಿತ್ಯ ಚಿಂತನೆಯನ್ನು ನೀಡುವ ಪ್ರಮುಖ ಕೃತಿ.
©2024 Book Brahma Private Limited.