ತಮ್ಮ ಪ್ರಬಂಧ-ಲೇಖನಗಳಿಂದಲೇ ಹೆಚ್ಚಿನ ಪ್ರಸಿದ್ದಿ ಪಡೆದ ಡಾ. ಗೊರೂರು ರಾಮಸ್ವಾಮಿ ಅಯ್ಯಂಗಾರರು ಆಧುನಿಕ ಕನ್ನಡ ಸಾಹಿತ್ಯದ ಹಿರಿಯ ಲೇಖಕರು. ಇವರು 1904ರಲ್ಲಿ ಹಾಸನ ಜಿಲ್ಲೆಯ ಗೊರೂರಿನಲ್ಲಿ ಜನಿಸಿದರು. ಹಾಸನದ ಸರ್ಕಾರಿ ಪ್ರೌಢ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾಗ ಗಾಂಧೀಜಿಯವರ ಅಸಹಕಾರ ಚಳವಳಿಯಿಂದ ಪ್ರಭಾವಿತರಾಗಿ ತಮ್ಮ ಓದಿಗೆ ವಿದಾಯ ಹೇಳಿ ಗಾಂದೀಜಿಯವರ ಆಶ್ರಮ ಸೇರಿದರು ‘ಆಂಧ್ರ ಪತ್ರಿಕೆ, ಭಾರತಿ, ಪತ್ರಿಕೆಗಳ ಲೇಖಕ ರಾಗಿ ಲೋಕಮಿತ್ರ ಪತ್ರಿಕೆಯ ಉಪಸಂಪಾದಕರಾಗಿ ಕೆಲಸ ನಿರ್ವಹಿಸಿದರು. ಅನಂತರ ಕೆಂಗೇರಿಯ ಗುರುಕುಲಾಶ್ರಮದಲ್ಲಿ ದಲಿತೋದ್ದಾರ ಕಾರ್ಯದಲ್ಲಿ ತೊಡಗಿದರು. ಬೆಂಗಳೂರಿನ ಅಖಿಲ ಭಾರತ ಚರಕ ಸಂಘದ ಸಂಚಾಲಕರೂ ಆದರು1933 ರಲ್ಲಿ ತಮ್ಮ ಗ್ರಾಮದಲ್ಲಿ ಮೈಸೂರು ಗ್ರಾಮಸೇವಾಸಂಘ ಸ್ಥಾಪಿಸಿದರು. 1942 ರಲ್ಲಿ ಚಲೇಜಾವ್ ಚಳವಳಿಯಲ್ಲಿ ಭಾಗವಹಿಸಿ, ಸೆರೆಮನೆ ವಾಸವನ್ನು ಅನುಭವಿಸಿದರು. ಅಮೆರಿಕಾದಲ್ಲಿ ಗೊರೂರು ಇವರ ಪ್ರವಾಸ ಕಥನ. ಇದಲ್ಲದೆ ಮಲೆನಾಡಿನವರು, ಭಕ್ತಿಯೋಗ, ಭಗವಾನ್ ಕೌಟಿಲ್ಯ, ಮೊದಲಾದ ಅನುವಾದಗಳನ್ನು ಮಾಡಿದ್ದಾರೆ. ‘ಹೇಮಾವತಿ, ಪುನರ್ಜನ್ಮ, ಮೆರವಣಿಗೆ, ಊರ್ವಶಿ, ಎಂಬ ಕಾದಂಬರಿಗಳನ್ನು ಬರೆದಿದ್ದಾರೆ. ತನ್ನದೇನೂ ತಪ್ಪಿಲ್ಲದೆ ಜಾರಿದ ಹೆಣ್ಣೊಬ್ಬಳು ಆತ್ಮೋದ್ದಾರ ಮಾಡಿಕೊಂಡು ಸಮಾಜ ಸೇವೆ ಸಲ್ಲಿಸಿದ ಕಥೆ ಊರ್ವಶಿ ಕಾದಂಬರಿಯದು. ಮೆರವಣಿಗೆ ಕಾದಂಬರಿಯಲ್ಲಿ ಮಠಾಧಿಪತಿಗಳ ವಿರುದ್ದ ಆಕ್ರಮಣವನ್ನೇ ಮಾಡಿದ್ದಾರೆ. ಪುನರ್ಜನ್ಮದಲ್ಲಿ ಸ್ವಾತಂತ್ರ್ಯಸಂಗ್ರಾಮ ಕಾಲದ ಒಂದು ಆದರ್ಶ ಕಥೆಯಿದೆ. ಗ್ರಾಮೀಣ ಸಮಾಜದಲ್ಲಾದ ಸುಧಾರಣೆಯನ್ನು ಹೇಮಾವತಿ ಕಾದಂಬರಿ ಚಿತ್ರಿಸುತ್ತದೆ. ಇವರು 1991 ರಲ್ಲಿ ನಿಧನರಾದರು. ಇವರ ಜೀವನ ಚಿತ್ರಣವನ್ನು ಕೃತಿಯಲ್ಲಿ ಕಟ್ಟಿಕೊಡಲಾಗಿದೆ.
©2024 Book Brahma Private Limited.