‘ಪ್ರಕೃತಿ ದೇವರು’ ಲೇಖಕ ಹ.ಸ. ಬ್ಯಾಕೋಡ ಅವರು ರಚಿಸಿರುವ ಮಕ್ಕಳ ನಾಟಕ. ಈ ಕೃತಿಗೆ ಹಿರಿಯ ಸಾಹಿತಿ ಕೆ. ಮರುಳಸಿದ್ದಪ್ಪ ಅವರ ಬೆನ್ನುಡಿ ಬರಹವಿದೆ. ಕೃತಿಯ ಕುರಿತು ಬರೆಯುತ್ತಾ ಕನಕದಾಸರ ವೈರಾಗ್ಯ ದೃಷ್ಟಿಗೆ ಒಂಟಿಕಾಲ ಮೇಲೆ ನಿಂತಿರುವ ಬೆಳ್ಳಕ್ಕಿ, ನಿಸರ್ಗ ಸೌಂದರ್ಯವನ್ನು ಸವಿಯುತ್ತಿರುವ ಧ್ಯಾನಸ್ಥ ಜೀವಿಯಂತೆ ಕಾಣುತ್ತದೆ. ಗರಿಕೆ ಹುಲ್ಲಿನ ಹಾಸಿನ ನಡುವೆ ಇರುವ ಸಾಧಾರಣ ಕರಿಕಲ್ಲು ಶಿವಲಿಂಗದಂತೆ ಗೋಚರಿಸುತ್ತದೆ. ಕೃಷ್ಣ ತುಳಸಿಯಲ್ಲಿ ಸಾಕ್ಷಾತ್ ಶ್ರೀಕೃಷ್ಣ ಕಾಣಿಸುತ್ತಾನೆ. ಪ್ರಕೃತಿಯೇ ಭೂಮಿಯ ಮೇಲಿನ ಸ್ವರ್ಗ, ಎಂಬ ನಂಬಿಕೆಯಿರುವ ಅವರಿಗೆ, ಅದನ್ನು ಮಲಿನಗೊಳಿಸುವ ಮನುಷ್ಯನ ಬಗೆಗೆ ಕನಿಕರವಿದೆ. ಜಡ ಚೇತನವೆರಡೂ ರೂಪದಲ್ಲಿ ಪ್ರಕಟಗೊಳ್ಳುವ ನಿಸರ್ಗದಲ್ಲಿ ಭಗವಂತನನ್ನೇ ಕಾಣುವ ಕುವೆಂಪು ಗೀತೆಗಳು ಇಲ್ಲಿ ನೆನಪಿಗೆ ಬರುವಂತೆ ಮೊದಲ ಮೂರು ದೃಶ್ಯಗಳ ರಚನೆಯಿದೆ. ಸಸ್ಯ, ಪಕ್ಷಿ, ಜಡ ಪರಿಸರದ ಸೌಂದರ್ಯವನ್ನು ನಿರೂಪಿಸುವ ನಾಟಕವು ನಾಲ್ಕು ಮತ್ತು ಐದನೆಯ ದೃಶ್ಯದಲ್ಲಿ ಪ್ರಾಣಿ ಪರಿಸರದ ಮಹತ್ವವನ್ನು ಸಾರಿ ಹೇಳುತ್ತಿರುವಂತಿದೆ. ಹೀಗೆ ಮರ, ಗಿಡ, ಕಲ್ಲು, ಮಣ್ಣು, ಪಕ್ಷಿ, ಪ್ರಾಣಿ, ಉರಗ-ನಿಸರ್ಗ ಸಮಸ್ತವೂ ಸೃಷ್ಟಿಯಲ್ಲಿ ಸಮಾನವಾಗಿ ಸಾಮರಸ್ಯದ ಸಂದೇಶವನ್ನೇ ಬೀರುತ್ತಿರುವಂತಿದೆ. ಮನುಷ್ಯನೂ ಅಖಂಡ ವಿಶ್ವದೊಂದಿಗೆ ಒಂದಾಗಿ ಬಾಳಬೇಕೆಂಬ ಸಂದೇಶವನ್ನು ನಾಟಕವು ಸೂಚಿಸುತ್ತಿರುವಂತಿದೆ ಎಂದು ಕೆ. ಮರುಳಸಿದ್ದಪ್ಪ ಅವರು ಮೆಚ್ಚುಗೆ ಸೂಚಿಸಿದ್ದಾರೆ.
©2024 Book Brahma Private Limited.