ಸಂಸ್ಕೃತ ಮತ್ತು ಕನ್ನಡ ಕ್ಷೇತ್ರದಲ್ಲಿ ವಿದ್ವತ್ತನ್ನು ಸಂಪಾದಿಸಿರುವ ಹಿರಿಯ ಲೇಖಕರಾದ ಬನ್ನಂಜೆ ಗೋವಿಂದಾಚಾರ್ಯರ ಕೃತಿ ’ಪರಾಶರ ಕಂಡ ಪರತತ್ವ’.
ಭಾರತೀಯ ತತ್ವ್ತಶಾಸ್ತ್ರದ ಮೇರುಕೃತಿಗಳನ್ನು ಕನ್ನಡಕ್ಕೆ ತರುವ ನಿಟ್ಟಿನಲ್ಲಿ ಸಾಹಿತ್ಯ ರಚನೆಯಲ್ಲಿ ತೊಡಗಿಸಿಕೊಂಡಿರುವ ಬನ್ನಂಜೆಯವರು ವಿಷ್ಣು ಪುರಾಣದ ಕನ್ನಡ ರೂಪವನ್ನು ಕನ್ನಡದಲ್ಲಿ’ ಪರಾಶರ ಕಂಡ ಪರತತ್ವ’ ಎಂಬ ಶೀರ್ಷಿಕೆಯಡಿ ತಂದಿದ್ದಾರೆ.
ಮಹಾಭಾರತವನ್ನು ರಚಿಸಿದ ವೇದವ್ಯಾಸರ ತಂದೆ ಪರಾಶರ ಮುನಿಯ ಹಿನ್ನೆಲೆಯನ್ನು, ಮತ್ತು ವಿಷ್ಣುಪುರಾಣದಲ್ಲಿ ಸೂಚಿತವಾಗಿರುವ ಸಂಸ್ಕೃತ ಶ್ಲೋಕಗಳ ಅರ್ಥಾನುಸರವನ್ನು ಈ ಕೃತಿಯಲ್ಲಿ ಪರಿಚಯಿಸಲಾಗಿದೆ.
ಪರಾಶರ ಮುನಿಗೂ ಮತ್ತು ಮೈತ್ರೇಯನಿಗೂ ನಡೆಯುವ ಸಂಭಾಷಣೆಯನ್ನು ಇಲ್ಲಿ ಸಂಗ್ರಹಿಸಲಾಗಿದೆ. ಪ್ರಸ್ತಾವನೆಯಲ್ಲಿ ಅವರಿಬ್ಬರ ನೇರ ಸಂಭಾಷಣೆಯನ್ನು ಇಲ್ಲಿ ಸಂಸ್ಕೃತದಿಂದ ಕನ್ನಡೀಕರಿಸಲಾಗಿದೆ. ಜಿಜ್ಞಾಸೆಯಿಂದ ಬಂದ ಮೈತ್ರೇಯ ಪರಾಶರ ಗುರುವನ್ನು ಕುರಿತು ಕೇಳಿದ ಹಲವಾರು ಪ್ರಶ್ನೋತ್ತರಗಳ ಮೂಲಕ ಈ ಕೃತಿಯು ತೆರೆದುಕೊಳ್ಳುತ್ತದೆ.
ಈ ಜಗತ್ತು ಹೇಗಾಯಿತು?, ಈ ಜಗತ್ತನ್ನು ತುಂಬಿರುವ ಶಕ್ತಿ ಯಾವುದು? ಭೂಮಿಯ ಮೇಲಿರುವ ಚರಾಚರಗಳನ್ನು ಸೃಷ್ಟಿಸಿದವನು ಯಾರು?, ಯಾರಲ್ಲಿ ಹೇಗೆ ಈ ಸೃಷ್ಟಿ ಲಯಗೊಂಡಿದೆ ಮತ್ತು ಲೀನವಾಗಿದೆ?, ಪಂಚಭೂತಗಳ ಇತಿಮಿತಿಯೇನು? ದೇವ ದಾನವರ ಸೃಷ್ಟಿಯ ಬಗೆ ಎಂತಹುದು? ಭೂಮಿಯ ಅಳತೆ ಏನು? ಕಡಲು ಬೆಟ್ಟಗಳ ಸ್ಥಾನವೇನು?, ಸೂರ್ಯ-ಚಂದ್ರ ಮುಂತಾದ ಜ್ಯೋತಿರ್ಗೋಲಗಳ ಪರಿಮಾಣದ ವಿಸ್ತಾರವೇನು? ಮನುಗಳ, ಮನ್ವಂತರಗಳ ಇತಿಹಾಸವೇನು?, ವೇದಗಳ ರಹಸ್ಯವೇನು?, ಚತುರ್ಯುಗಗಳ ಚರಿತವೇನು? ಎನ್ನುವಂತಹ ಹಲವಾರು ಪ್ರಶ್ನೆಗಳನ್ನು ಪರಾಶರರ ಎದುರಿಗೆ ಇಟ್ಟಾಗ ಅವರು ಈ ಪ್ರಶ್ನೆಗಳ ಹಿನ್ನೆಲೆಯಲ್ಲಿ ಹೇಳುವ ಕಥೆಗಳು ಇಲ್ಲಿ ಪ್ರಮುಖವಾಗಿದೆ.
©2024 Book Brahma Private Limited.