‘ಹಾರಿ ಹೋದ ಬಳಿಕೆನ್ನ ಪ್ರಾಣ’ ಕೃತಿಯು ಜಗದೀಶ.ಬ.ಹಾದಿಮನಿ ಅವರ ಕುಂತಿ ಚರಿತೆ ಕುರಿತ ಕೃತಿಯಾಗಿದೆ. ಈ ಕೃತಿಗೆ ಮುನ್ನುಡಿ ಬರೆದಿರುವ ಮುರ್ತುಜಾ ಬ. ಒಂಟಿ ಅವರು, ಇದು 'ಕುಂತಿ' ಪ್ರಧಾನಭೂಮಿಕೆಯ ನಾಟಕ', ಕುಂತಿಯು ಈ ನಾಟಕ ಕೇಂದ್ರ ಬಿಂದು, ಇಲ್ಲಿ ಹನ್ನೆರಡು ದೃಶ್ಯ(ಅಂಕ)ಗಳಿವೆ. ಕುಂತಿ ಎಂದಾಕ್ಷಣವೆ ಥಟ್ಟನೆ ನೆನಪಿಗೆ ಬರುವುದು ಮಹಾಭಾರತದ ಕಥೆ. ಭಾರತದ ಕಥಾಸರಿತ್ಸಾಗರದಲ್ಲಿ ಪ್ರಕಾಶಿಸುವ ವ್ರಜದ ಸ್ವರೂಪದ ಸ್ತ್ರೀ ಪಾತ್ರಗಳಲ್ಲಿ ಕುಂತಿಯದು ಅಗ್ರಪಂಕ್ತಿಗೆ ಸೇರುವಂಥದ್ದು. ಯದುವಂಶದ ಚಕ್ರವರ್ತಿ ಶೂರಸೇನನ ಸುಡುತ್ತಿಯೂ ಕುಂತಿಭೋಜನ (ಕುಂತಿಯ ಮಾವ) ಸಾಕುಮಗಳೂ ಹಸ್ತಿನಾಪುರದ ಆರಸ ಪಾಂಡುರಾಜನ ಪತ್ನಿಯೂ ಪಾಂಡವರ ಜನನಿಯೂ ಆದ ಕುಂತಿಯ ಪಾತ್ರ ಮಹಾಭಾರತದಲ್ಲಿ ಗಮನ ಸೆಳೆಯುವಂಥದಾಗಿದೆ. ನಾಟಕದಲ್ಲಿ ಸ್ತ್ರೀ ಸಂವೇದನೆಗೆ ಹೆಚ್ಚಿನ ಪ್ರಾಶಸ್ತ್ಯ ದೊರೆತಂತೆ ಮೇಲ್ನೋಟಕ್ಕೆ ಕಂಡು ಬರುತ್ತದೆ. ಪುರುಷ ಪ್ರಧಾನ ಸಮಾಜದಲ್ಲಿ ಸ್ತ್ರೀ ಶೋಷಣೆಯ ಕೇಂದ್ರಬಿಂದುವಾಗಿರುವ ವಿಷಯ ಜಗಜ್ಜಾಹೀರು, ಯಾವುದೇ ವಿಷಯದಲ್ಲಿ ಅವಳಿಗೆ ಸ್ವಾಂತಂತ್ರ್ಯವಿರಲಿಲ್ಲ. ಮನು ಹೇಳಿರುವ ನ ಸ್ತ್ರೀ ಸ್ವಾತಂತ್ರ್ಯಮರ್ಹತಿ' ಎನ್ನುವ ಹೇಳಿಕೆ ಇದಕ್ಕೆ ಸಾಕ್ಷಿಯಂತಿದೆ. ಮಹಾಕಾವ್ಯಗಳಲ್ಲಿ ಬಂದಿರುವ ಅರಸಿಯರು ಈ ಮಾತಿಗೆ ಹೊರತಲ್ಲ. ರಾಮಾಯಣದ ಸೀತೆ, ಊರ್ಮಿಳ, ಅಹಲ್ಯ, ಮಹಾಭಾರತದ ಕುಂತಿ, ದೌಪದಿ ಮೊದಲಾದ ನಾರಿಮಣಿಗಳ ಕಥೆಯನ್ನು ಓದಿದಾಗ ಅವರೆಲ್ಲರ ಸ್ಥಿತಿ ಏನೆಂಬುದು ಗೊತ್ತಾಗುತ್ತದೆ. ಅವರಾರು ಪುರುಷರಿಂದ ತಮಗೆ ಬಂದೊದಗಿದ ಸಂಕಟ ಅಪಾಯದ ಬಗೆಗೆ ಪ್ರಶ್ನಿಸಿದ ಹೋದುದು ಮಹಿಳಾಕುಲದ ದುರಂತ ಎನ್ನಬೇಕಾಗುತ್ತದೆ. ಅವರ ಅಸಹಾಯಕತೆ ಕುರಿತು ಡಾ.ಕೆ.ಷರೀಫಾ ಅವರ 'ಪ್ರಶ್ನಿಸಲಿಲ್ಲ' ಕವಿತೆ ಸ್ತ್ರೀ ಸಂವೇದನೆಗೆ ಉತ್ತಮ ಉದಾಹರಣೆಯಾಗಿದೆ. ಪ್ರಸ್ತುತ ನಾಟಕದಲ್ಲಿ ಕುಂತಿ ಪುರುಷನ ನಡೆಯನ್ನು, ಪೌರುಷತ್ವವನ್ನು ನಿರ್ಭೀತಿಯಿಂದ ಪ್ರಶ್ನಿಸಿಸುವುದನ್ನು ವಿಡಂಬಿಸುವುದನ್ನು ನಾಟಕ ಕರ್ತೃ ಚಿತ್ರಿಸಿದ್ದಾರೆ. 'ತಾವು ರಾಜರು ಮಹಾರಾಜರು! ರಾಜಾಧಿರಾಜ ಚಕ್ರವರ್ತಿಗಳು! ಏಕಸಾಮ್ರಾಟ ಮಹೋನ್ನತ ಪ್ರಭುಗಳು ಎಷ್ಟು ಮದುವೆಯಾದರೂ ಚೆನ್ನ ಪ್ರಶ್ನಿಸುವವರಾರು ತಮ್ಮನ್ನ! ನಿಮಗೆ ರಾಣಿ-ಮಹಾರಾಣಿ-ದಾಸಿಯರೆಲ್ಲರೂ ಬೇಕು! ವಿವಾಹ ವಿಷಯದೊಳ ಕ್ಷತ್ರಿಯರಂದದ್ದುಂಟೆ ಸಾಕು? ಎಂದು ಕೇಳುವ ಧ್ವನಿಪೂರ್ಣ ಮಾತು ನಮ್ಮ ಜನಪದರ 'ಆಳುವವನಿಗೆ ಆರವತ್ತು ಹೆಂಡಿರು' ಎನ್ನುವ ನಾಣ್ಣುಡಿಯನ್ನು ನೆನಪಿಗೆ ತರುತ್ತದೆ ಎಂದಿದ್ದಾರೆ.
©2024 Book Brahma Private Limited.