ಚಿಂತಕರೂ, ಹಿರಿಯ ವಿದ್ವಾಂಸರೂ ಆದ ಲಕ್ಷ್ಮೀಶ ತೋಳ್ಪಾಡಿ ಅವರ ’ಭಾರತ ಯಾತ್ರೆ’ ಪುಸ್ತಕವು ಪ್ರಜಾವಾಣಿಯ ಮುಕ್ತಛಂದದಲ್ಲಿ ಪ್ರಕಟವಾಗುತ್ತಿದ್ದ “ಮಹಾಭಾರತ ಅನುಸಂಧಾನ’ದ ಅಂಕಣಬರಹಗಳ ಸಂಗ್ರಹ. ಮಹಾಭಾರತ ಹಲವಾರು ಕವಲೊಡೆದ ಜೇಡರಬಲೆಯಂತಹ ಸಂಕೀರ್ಣ ಹಾದಿ, ಹಲವಾರು ಉಪಕತೆಗಳ ಚಿಲುಮೆ. ಶಬ್ದದಾಚೆಯ ನಿಶ್ಶಬ್ದದ ದನಿಯಾದ ಲಕ್ಷ್ಮೀಶ ತೋಳ್ಪಾಡಿಯವರು ಮಹಾಭಾರತದ ಮಂಥನವನ್ನು ವರ್ಣಮಯ ಪಾತ್ರಗಳು, ಸನ್ನಿವೇಶಗಳ ಮೂಲಕ ತಮ್ಮ ಆಧ್ಯಾತ್ಮಿಕ ನಿಗೂಢತೆಯನ್ನು ಜೀವನ ಪ್ರೀತಿಯ ಸರಳತೆಯನ್ನಾಗಿ ಕಾಣುವ ತುಡಿತದಲ್ಲಿಯೇ ಇವರ ಮಾತು, ಬರಹಗಳು ಸಾಗುವಂತದ್ದು.
ಮಹಾಭಾರತವನ್ನು ಅರ್ಥ ಮಾಡಿಕೊಳ್ಳುವುದು, ಇದರ ಜೊತೆಗೆ ಸಾಗುವುದು ಸರಳವಾದ ವಿಷಯವಲ್ಲ,ಮಹಾಭಾರತದ ಒಳಗಿನಿಂದಲೇ ಒಂದು ಕೇಶಪಾಶ ಪ್ರಪಂಚ ನಮ್ಮೆದುರು ತೀರ ಪ್ರಕಟಗೊಳ್ಳುವುದು ದೊಡ್ಡದೊಂದು ಬೀಸಿನಲ್ಲಿ ಬದುಕನ್ನು ನೋಡಬಯಸುವಂತಹ ಮತ್ತು ಕೇವಲ ಪಠ್ಯವಾಗಿ ಅಂತಿಮ ಅರ್ಥಕ್ಕೆ ಸಿಲುಕದೆ, ನಿಲುವಿಗೆ ತಲುಪದೆ ಸದಾ ಭಾಷೆ- ಬದುಕುಗಳ ನಡುವೆ ತೂಗುತ್ತಿರುವ ತೊಟ್ಟಿಲಿನಂತೆ ’ಭಾರತ ಯಾತ್ರೆ’ ಪ್ರಕಟಗೊಂಡಿದೆ.
ತಾಯಿಯ ಬಸಿರಿಂದ ಹೊರನೂಕಿಸಿಕೊಂಡ ದುರ್ಯೋಧನ, ತಾಯಿಯೇ ಹೊಳೆಯಲ್ಲಿ ತೇಲಿಬಿಟ್ಟ ಕರ್ಣ -ಒಂದು ರೀತಿಯಲ್ಲಿ ಇಬ್ಬರೂ ತಬ್ಬಲಿಗಳು! ಇನ್ನೊಂದು ಸಂದರ್ಭವನ್ನು ಗಮನಿಸಿ - 'ಮಾದ್ರಿ ಮತ್ತೊಂದು ಮಗು ಪಡೆಯುತ್ತಿದ್ದರೆ ದುರಂತ ಸಂಭವಿಸುತ್ತಿರಲಿಲ್ಲ. ಇನ್ನೊಂದು ಮಗು ಬೇಕು ಎಂದು ಮಾದ್ರಿಗೆ ಆಸೆ! ಈಡೇರಿಸಲಾರದ ಕೊರಗು ಪಾಂಡುರಾಜನಿಗೆ. ಇದು ದುರಂತದ ಬೀಜ'. ಇವು ಲಕ್ಷ್ಮೀಶ ತೋಳ್ಪಾಡಿ ಅವರ ಚಿಂತನೆಯ ಎರಡು ಸಣ್ಣ ಎಳೆಗಳು. ಅವರು ಮಹಾಭಾರತದೊಂದಿಗೆ ನಡೆಸಿರುವ ಅನುಸಂಧಾನವನ್ನು 'ಭಾರತಯಾತ್ರೆ'ಯಲ್ಲಿ ದರ್ಶಿಸಬಹುದು. ಮಹಾಭಾರತ ಅನ್ನುವುದು ಸದಾ ಹೊಸತು. ಒಂದೊಂದು ಓದಿಗೂ ನಮ್ಮ ಭಾವಕೋಶದ ವಿಸ್ತಾರ. ಕತೆಯ ನೆಪದಲ್ಲಿ ಚಿಂತನೆಗಳನ್ನು ಬಿತ್ತುವ ಕೆಲಸವನ್ನು ಮಾಡುತ್ತಲೇ ಬಂದಿರುವ ತೋಳ್ಪಾಡಿ 'ಸಂಪಿಗೆ ಭಾಗವತ'ದ ಮೂಲಕ ಹಿಂದೆ ಓದಿನ ಆನಂದವನ್ನು ಹೆಚ್ವಿಸಿದ್ದರು. ಈಗ ಮಹಾಭಾರತದತ್ತ ಅವರ ಚಿತ್ತ. ಇಲ್ಲಿನ ವರ್ಣಮಯ ಪಾತ್ರಗಳು, ಸನ್ನಿವೇಶಗಳು ತೋಳ್ಪಾಡಿ ಕಣ್ಣಲ್ಲಿ ಕಂಡದ್ದು ಹೇಗೆ ಅನ್ನುವುದನ್ನು ಓದಿಯೇ ಸವಿಯಬೇಕು. ಭಾಷೆಯ ಸೊಬಗು, ಬಳುಕು ಶುದ್ಧ ಓದಿನ ಖುಷಿ ನೀಡುತ್ತದೆ. 'ಮಹಾಭಾರತದ ಬಗ್ಗೆ ಎಷ್ಟೆಲ್ಲ ಜನ ಬರೆದಿಲ್ಲ! ಆದರೆ, ತೋಳ್ಪಾಡಿಯವರ ಬರಹ ಹೊಸ ರೀತಿಯದು. ಕೇವಲ ವಸ್ತುವನ್ನು 'ಕಾಣು'ವಲ್ಲಿ ಮಾತ್ರವಲ್ಲ. 'ಕಾಣಿಸುವ' ಕ್ರಮದಲ್ಲೂ...' ಎನ್ನುತ್ತಾರೆ ನ.ರವಿ ಕುಮಾರ. ಮಕ್ಕಳ ನೆತ್ತರಿನಲ್ಲಿ ಭೂಮಿತಾಯಿ ಜಳಕ, ಯಜ್ಞಾಗ್ನಿಗೆ ಕಾಡ್ಗಿಚ್ಚಾಗುವ ರುದ್ರಬಯಕೆ, ಕಣ್ಣೇ ಕಾಮನ ಬೀಜ, ಮಗುವನ್ನು ನೆನೆಯದೆ ಮಗು ಹುಟ್ಟದು, ಕಾಮ ಮತ್ತು ಸಾವುಗಳ ಸಹಗಮನ, ಶಾಂತಿಪರ್ವದ ಅಶಾಂತ ಸಂತ - ಹೀಗೆ 24 ಅಧ್ಯಾಯಗಳಲ್ಲಿ ಮಹಾ'ಭಾರತ' ಮರುಸೃಷ್ಟಿ.
-ಹ.ಚ.ನಟೇಶ ಬಾಬು
ಕೃಪೆ: ವಿಜಯ ಕರ್ನಾಟಕ, 23-9-2018
©2025 Book Brahma Private Limited.