ಅಸುರಗುರು ಶುಕ್ರಾಚಾರ್ಯ

Author : ಶ್ರೀಧರ ಡಿ.ಎಸ್.

Pages 376

₹ 350.00




Year of Publication: 2019
Published by: ಸಾಹಿತ್ಯ ಭಂಡಾರ

Synopsys

ಲೇಖಕ ಶ್ರೀಧರ ಡಿ. ಎಸ್ ಅವರ ಕೃತಿ ‘ಅಸುರಗುರು ಶುಕ್ರಾಚಾರ್ಯ’. ಹೆಸರೇ ಹೇಳುವಂತೆ ಅಸುರಗುರು ಎಂದಾಗ ಮೊದಲು ಬರುವುದೇ ಋಣಾತ್ಮಕ ಹೇಳಿಕೆಗಳು. ಕಚ-ದೇವಯಾನಿಯ ಪ್ರಸಂಗದಲ್ಲೋ, ಬಲಿ ಚಕ್ರವರ್ತಿಯ ಪ್ರಸಂಗದಲ್ಲೋ ಶುಕ್ರಾಚಾರ್ಯರ ಬಗ್ಗೆ ಕೇಳಿದ್ದಿದೆ. ಆದರೆ ಲೇಖಕ ಡಿ. ಎಸ್. ಶ್ರೀಧರರ ಈ ಪೌರಾಣಿಕ ಕಾದಂಬರಿ ಶುಕ್ರಾಚಾರ್ಯರ ಪರಿಪೂರ್ಣ ವ್ಯಕ್ತಿತ್ವದ ಅನಾವರಣ. ಭೃಗುಪುತ್ರನಾದ ಉಶನ ಶುಕ್ರಾಚಾರ್ಯನಾಗಿ ಬದಲಾದ ಬಗೆ ನಿಜಕ್ಕೂ ರೋಚಕ. ಶುಕ್ರಾಚಾರ್ಯರ ಜೀವನದ ಹಲವು ಘಟ್ಟಗಳನ್ನು ಶ್ರೀಧರರು ಚಿತ್ರಿಸಿದ ರೀತಿ ಓದುಗನನ್ನು ಮತ್ತೆ ಮತ್ತೆ ಓದುವಂತೆ ಮಾಡುತ್ತದೆ. ಸುರಗುರು ಬೃಹಸ್ಪತಿಗಿಂತ ಹೆಚ್ಚಿನ ಜ್ಞಾನ ಮತ್ತು ಸಾಮರ್ಥ್ಯವಿದ್ದರೂ ಜಗತ್ತಿಗೆ ಕಂಟಕಪ್ರಾಯರಾದ ಅಸುರರ ಗುರುವಾಗಿ ಮಾರ್ಪಾಡಾದ ಪರಿ ನಿಜಕ್ಕೂ ಆಶ್ಚರ್ಯ. ರಾಕ್ಷಸರರ ಗುರುವಾದರೂ ಅಂತರಂಗದಲ್ಲಿ ಸಾತ್ವಿಕ ನೆಲೆಗಟ್ಟನ್ನು ಉಳಿಸಿಕೊಂಡು ಸಮಸ್ತ ಅಸುರಕುಲದ ಉನ್ನತಿಗಾಗಿ ಶ್ರಮಿಸಿದ ಶುಕ್ರಾಚಾರ್ಯರ ಬಾಳ ಪಯಣ ನಿಜಕ್ಕೂ ಬೆರಗುಹುಟ್ಟಿಸುತ್ತದೆ. ಕಮಲದೆಲೆಯ ಮೇಲಿನ ಬಿಂದುವಿನಂತೆ ಲೌಕಿಕ ಜಗತ್ತಿನ ನಂಟನ್ನು ಇಟ್ಟುಕೊಂಡೇ ಅದಕ್ಕೆ ಎಲ್ಲೂ ಅಂಟಿಸಿಕೊಳ್ಳದೆ ತನ್ನ ಸಾಧನೆಯ ವಿವಿಧ ಮಹಲುಗಳನ್ನೇರಿದ ಮಹಾತಪಸ್ವಿ. ನನಗೆ ಬಹಳ ಇಷ್ಟವಾದ ಅಧ್ಯಾಯ ಶಿವಗರ್ಭಸ್ಥ. ಸಾಕ್ಷಾತ್ ಪರಶಿವನಿಂದ ಮೃತಸಂಜೀವಿನಿಯ ಸಿದ್ಧಿಯನ್ನು ಪಡೆಯುವ ಮುಂಚಿನ ಅಷ್ಟೂ ಘಟನೆಗಳು ಮೈನವಿರೇಳಿಸುವಂಥದ್ದು. ಕಚ – ದೇವಯಾನಿಯ ಅಧ್ಯಾಯದಲ್ಲಿ ಆಶ್ರಮದ ವರ್ಣನೆಯ ಪರಿ ನಮ್ಮನ್ನು ಅಂದಿನ ಕಾಲಘಟ್ಟಕ್ಕೆ ಕರೆದೊಯ್ದು ಆ ಸ್ಥಳದಲ್ಲಿದ್ದಂತೇ ಭಾಸವಾಗುತ್ತದೆ. ಯಯಾತಿ-ದೇವಯಾನಿ- ಶರ್ಮಿಷ್ಠೆರ ಸುತ್ತ ನಡೆಯುವ ಪ್ರಕರಣಗಳು ಓದುಗರನ್ನು ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದೆ. ವಾಮನ ಅವತಾರ ಮತ್ತು ಬಲಿಯ ನಿಗ್ರಹಣದೊಂದಿಗೆ ಶುಕ್ರಾಚಾರ್ಯರು ಗ್ರಹಸ್ಥಾನಕ್ಕೇರಿದ ಅಧ್ಯಾಯವನ್ನೂ ಕೂಡ ಬಹಳ ಸೊಗಸಾಗಿ ವರ್ಣಿಸಿದ್ದಾರೆ. ಒಟ್ಟಿನಲ್ಲಿ ಹೇಳಬೇಕೆಂದರೆ ಶುಕ್ರಾಚಾರ್ಯರ ಬಗ್ಗೆ ಈ ಮೊದಲಿನಿಂದ ಬಂದಿರುವ ಮನೋಭಾವನೆ ಈ ಕಾದಂಬರಿಯನ್ನು ಓದಿದ ನಂತರ ಸಂಪೂರ್ಣ ಬದಲಾಯಿತು. ಶುಕ್ರಾಚಾರ್ಯರ ಬಗೆಗಿನ ಅಸಮಧಾನ ಮರೆಯಾಗಿ ಅವರ ಪೂರ್ಣ ವ್ಯಕ್ತಿತ್ವದ ಅರಿವಾಯಿತು. ಯಾವುದೇ ಕಾಲದಲ್ಲೂ ತನ್ನ ಗುರಿಯನ್ನು ಸಾಧಿಸುವ ಛಲ ಮತ್ತು ಅದಕ್ಕೆ ಪೂರಕವಾದ ಸಾಧನೆಯ ಹಾದಿಯಲ್ಲಿದ್ದ ಶುಕ್ರಾಚಾರ್ಯರು ನಿಜಕ್ಕೂ ಒಬ್ಬ ಸಾಧಕನಿಗೆ ಆದರ್ಶಪ್ರಾಯವಾಗಿ ನಿಲ್ಲುತ್ತಾರೆ. ಕಥಾನಾಯಕನ ಚದುರಿಹೋದ ಘಟನಾವಳಿಗಳನ್ನು ಒಂದುಗೂಡಿಸಿ ಸುಂದರ ರೂಪಕೊಟ್ಟು ಎಲ್ಲೂ ಉತ್ಪ್ರೇಕ್ಷೆ ಎನ್ನಿಸದಂತೆ ಕಥೆ ಹೆಣೆಯಲಾಗಿದೆ. ಲೇಖಕರು ಯಕ್ಷಗಾನ ಕವಿ, ಅರ್ಥಧಾರಿ ಮತ್ತು ಪುರಾಣಗಳ ಬಗ್ಗೆ ಆಳವಾದ ಅಧ್ಯಯನ ಮಾಡಿರುವ ಕಾರಣ ಪ್ರತಿಯೊಂದು ಅಧ್ಯಾಯವೂ ಎಲ್ಲೂ ತೊಡಕೆನಿಸದೇ ಸರಾಗವಾಗಿ ಮೂಡಿಬಂದಿದೆ.

About the Author

ಶ್ರೀಧರ ಡಿ.ಎಸ್.
(25 August 1950)

.ಡಿ.ಎಸ್. ಶ್ರೀಧರ ಅವರು ಶಿವಮೊಗ್ಗ ಜಿಲ್ಲೆಯ  ಸಾಗರ ತಾಲೂಕು ನಿಟ್ಟೂರು ಸಮೀಪದ ಧರೆಮನೆ ಗ್ರಾಮದವರು. ತಂದೆ ಶ್ರೀಪಾದಯ್ಯ (ಯಕ್ಷಗಾನ ಕಲಾವಿದರು)  ತಾಯಿ ಸರಸ್ವತಿ. ತಂದೆ ಶ್ರೀಪಾದಯ್ಯ ಕೃಷಿಕರಾಗಿಯೂ ಯಕ್ಷಗಾನ ಕಲಾವಿದರೂ ಆಗಿದ್ದರು. ಹೆಬ್ಬಿಗೆ ಸರಕಾರೀ ಶಾಲೆಯಲ್ಲಿ 7ನೇ ತರಗತಿ, ನಂತರ ಉಡುಪಿಯಲ್ಲಿ ಹೈಸ್ಕೂಲ್  ಹಾಗೂ ಪಿ. ಯು. ಸಿ., ಪದವಿ ವ್ಯಾಸಂಗ ಪೂರ್ಣಗೊಳಿಸಿದರು. ಉಡುಪಿ ರಾಘವೇಂದ್ರ ಪುಸ್ತಕ ಭಂಡಾರದಲ್ಲಿ ಉದ್ಯೋಗಿಯಾಗಿದ್ದು, ಅಂಚೆ ತೆರಪಿನ ಶಿಕ್ಷಣದಲ್ಲಿ ಮೈಸೂರು ವಿಶ್ವವಿದ್ಯಾನಿಲಯದಿಂದ ಎಂ.ಎ. ಪದವಿ ಪಡೆದರು. ಕೆಮ್ಮಣ್ಣು ಮತ್ತು ಕೋಟ ವಿದ್ಯಾಸಂಸ್ಥೆಗಳಲ್ಲಿ ಅರೆಕಾಲಿಕ ಉಪನ್ಯಾಸಕರಾಗಿ ನಂತರ 1991ರಲ್ಲಿ ಕಿನ್ನಿಗೋಳಿ ಪೊಂಪೈ ಕಾಲೇಜಿಗೆ ಪೂರ್ಣಕಾಲಿಕ ಉಪನ್ಯಾಸಕರಾಗಿ ಅಲ್ಲಿಯೇ ನಿವೃತ್ತರಾದರು.  ...

READ MORE

Related Books