ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ವೇಣುಗೋಪಾಲ ವಹ್ನಿ ಅವರ ’ದ್ರೌಪದಿ ದೇವಿಯ ಕರಗ ಪುರಾಣ’ ಕೃತಿಯು ಪುರಾಣ ಸಂಬಂಧಿತ ಅಧ್ಯಯನ ಗ್ರಂಥವಾಗಿದೆ. ಈ ಕೃತಿಯ ಕೇಂದ್ರ ಬಿಂದು ಶಿಷ್ಟ ಭಾರತದಲ್ಲಿ ಬರುವ ದ್ರೌಪದೀ ದೇವಿ. ದ್ರೌಪದೀ ದೇವಿಯು ಅಪ್ರಾಕೃತಿಕವಾಗಿ ಯಜ್ಞಕುಂಡಲದಲ್ಲಿ ಅವತರಿಸಿದರೂ, ಸಾಮಾನ್ಯ ಸ್ತ್ರೀಯಂತೆ ಒಬ್ಬ ಮಗಳಾಗಿ, ಪಾಂಡವರ ಪತ್ನಿಯಾಗಿ, ಗೃಹಿಣಿಯಾಗಿ, ಉಪಪಾಂಡವರ ತಾಯಾಗಿ ನಡೆದುಕೊಳ್ಳುತ್ತಾಳೆ. ದುಶ್ಯಾಸನ, ದುಯೋರ್ಧನ, ಜಯಪ್ರದ, ಕೀಚಕ, ಶಕುನಿ, ಕರ್ಣರಿಂದ ಅಪಮಾನಿತಳಾಗುತ್ತಾ , ಆಕೆಯ ಜೀವನದ ವಿಚಾರಗಳನ್ನು ಇಲ್ಲಿ ಭಿನ್ನವಾಗಿ ಲೇಖಕ ಕಟ್ಟಿಕೊಡುತ್ತಾ ಹೋಗುತ್ತಾನೆ. ದ್ರೌಪದಿ ದೇವಿ ಎಲ್ಲಿಯೂ ದೈಹಿಕ, ಶಕ್ತಿಯನ್ನಾಗಲೀ, ಮಾನವಾತೀತ ಶಕ್ತಿಯನ್ನಾಗಲೀ ತೋರುವುದಿಲ್ಲ. ಮೌಖಿಕ ಭಾರತದ ದ್ರೌಪದೀ ದೇವಿಯು ಸರ್ವಶಕ್ತಳಾದ ಆದಿ ಮಾತೆಯಾಗಿದ್ದು ಆಕೆಯನ್ನು ಕಂಡುಕೊಳ್ಳುವ ಪ್ರಯತ್ನ ಈ ಕೃತಿಯಾಗಿದೆ.
ಕೃತಿಗೆ ಬೆನ್ನುಡಿ ಬರೆದಿರುವ ವಿ. ಚಂದ್ರಶೇಖರ ನಂಗಲಿ ಅವರು, ದ್ರೌಪದಿಯನ್ನು ಒಂದು ಮಹಾ ನದಿಗೆ ಹೋಲಿಸಿರುವ ಲೇಖಕರು ಈ ಜೀವನದಿಗೆ ಸೇರಿಕೊಳ್ಳುವ ಕಿರುತೊರೆಗಳ, ಉಪನದಿಗಳ ಬಹು ದೊಡ್ಡ ನೆಟ್ ವರ್ಕ್ ಅನ್ನು ಜೇಡನಂತೆ ಒಡಲ ನೂಲಿನಿಂದ ನೇಯುತ್ತಾ, ಗದ್ಯ ಕಥನವನ್ನು ಕಟ್ಟಿಕೊಟ್ಟಿದ್ದಾರೆ. ಇಲ್ಲಿ ಪ್ರಕೃತಿ ತತ್ವಿ, ಆದಿಶಕ್ತಿ, ಲಕ್ಷ್ಮಿ, ಸರಸ್ವತಿ ಪಾರ್ವತಿ, ಇಂದ್ರಾಣಿ, ಶಬೀದೇವಿ, ಸೃಷ್ಠಿದೇವತೆ, ಇಂದ್ರಸೇನಿ, ನಳಾಯಿನಿ, ಯೋಗಮಾಯಿ, ದುರ್ಗೆ, ಕಾಳಿಮಾತೆ, ಹೀಗೆ ದಶಾವತಾರಗಳ ಸೃಷ್ಟಿ ಸ್ವರೂಪಿಣಿಯಾಗಿ ’ ದ್ರೌಪದಿ ಅಮ್ಮನ್’ ಆರಾಧ್ಯ ದೈವವನ್ನು ಮೌಖಿಕ ನಂಬಿಕೆಗಳ ಆಧರಿಸಿ, ಮಹಾಭಾರತದ ‘ಮೆಯ್’ ಕೆಡದಂತೆ ಕತಾ ನಿರೂಪಣೆಯನ್ನು ಮಾಡಿದ್ಧಾರೆ. ಆರಾಧ್ಯ ದೈವ, ಕುಲದೇವತೆಗೆ ಸಂಬಂಧಪಟ್ಟ ಅಘಟಿತ ಘಟನಾ ಚಾತುರ್ಯ, ಅದ್ಭುತ ಕಲ್ಪನಾ ರಮ್ಯತೆ, ದೇವ ದಾನವ ಮಾನುಷ ತಿರ್ಯಕ್ ಜೀವಿಗಳ ಜಡೆ ಕೋಲಾದಂತೆ ಹೆಣೆದುಕೊಳ್ಳುವ ಕಥನ ಕಲೆಯ ಸಂಯೋಜನಾ ಶಕ್ತಿಯನ್ನು ಓದುಗರಿಗೆ ನೀಡುತ್ತದೆ’ ಎಂದು ಪ್ರಶಂಸಿಸಿದ್ದಾರೆ.
©2024 Book Brahma Private Limited.